ಸುಂಟಿಕೊಪ್ಪ, ಮೇ.೨೫: ಸುಂಟಿಕೊಪ್ಪ ವರ್ಕ್ಶಾಪ್ ಮಾಲೀಕರ ಸಂಘದ ವತಿಯಿಂದ ಬೆಳ್ಳಿ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸುಂಟಿಕೊಪ್ಪ ಕೊಡವ ಸಮಾಜದಲ್ಲಿ ಭಾನುವಾರದಂದು ನಡೆದ ಬೆಳ್ಳಿ ಮಹೋತ್ಸವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಬಾಲಕೃಷ್ಣ ಮಾತನಾಡಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮನೋಭಾವನೆಯನ್ನು ಬೆಳಿಸಿಕೊಂಡು ಸರ್ವರಿಗೂ ಸಮಪಾಲು, ಸರ್ವರಿಗೂ ಸಮು ಬಾಳು ರೀತಿಯಲ್ಲಿ ಸಮಾಜ ಮುಖಿಯಾಗಿ ಬಾಳಲು ಕರೆ ನೀಡಿದರು.

ಸುಂಟಿಕೊಪ್ಪವು ಸರ್ವ ಭಾಷಿಕರ ನೆಲೆಬೀಡಾಗಿದ್ದು ಸರ್ವ ಜನಾಂಗೀಯ ಶಾಂತಿಯ ತೋಟ ಎಂದು ಹೆಸರು ಪಡೆದಿದೆ. ಇಂತಹ ಪ್ರದೇಶದಲ್ಲಿ ನಾವು ಸೇವೆ ಸಲ್ಲಿಸಿ ನಮ್ಮ ವಿದ್ಯಾರ್ಥಿಗಳೂ ಸನ್ಮಾನ ಸ್ವೀಕರಿಸುತ್ತಿರುವುದು ಸಂತಸದ ವಿಚಾರ ಎಂದರು.

ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ರಾಜ್ಯ ಸ್ತಿçÃಶಕ್ತಿ ಒಕ್ಕೂಟದ ಅಧ್ಯಕ್ಷರಾದ ರೆಹನಾ ಸುಲ್ತಾನ್ ಮಾತನಾಡಿ, ವರ್ಕ್ಶಾಪ್ ಮಾಲೀಕರ ಸಂಘವು ಸರಕಾರಿ ಶಾಲೆಯ ಮಕ್ಕಳನ್ನು ಸನ್ಮಾನಿಸುವ ಮೂಲಕ ಒಂದು ಮಾದರಿಯನ್ನು ಹುಟ್ಟು ಹಾಕಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷರಾದ ಪಿ.ಆರ್ ಸುನಿಲ್ ಕುಮಾರ್, ೨೫ ವರ್ಷಗಳ ಬೆಳವಣಿಗೆಯ ಹಾದಿಯನ್ನು, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾಜಿ ಅಧ್ಯಕ್ಷರಾದ ವಿ.ಎಸ್ ಸಂತೋಷ್ ಮತ್ತು ಕೆ.ಪಿ ವಿನೋದನ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಬಿ.ಎಸ್ ರಮೇಶ್ ಮಾತನಾಡಿ, ಸಂಘದ ೨೫ ವರ್ಷದ ಸಂದರ್ಭದಲ್ಲಿ ತಾವು ಅಧ್ಯಕ್ಷರಾಗಿರುವುದು ತಮ್ಮ ಪಾಲಿನ ಸೌಭಾಗ್ಯ ಬಂದು ಹೇಳಿದರು. ಮುಂದೆಯೂ ಸಂಘದ ಸದಸ್ಯರು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಳ್ಳುವಂತೆ ಸದಸ್ಯರಿಗೆ ಕರೆ ನೀಡಿದರು.

ಸರಕಾರಿ ಪ್ರೌಢಶಾಲೆ ಶೇಕಡ ೧೦೦ ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮೊದಲ ೧೦ ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೊಡಗು ಪತ್ರಕರ್ತರ ಸಂಘ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಬಿ.ಸಿ ದಿನೇಶ್, ವರ್ಕ್ಶಾಪ್ ಮಾಲೀಕರ ಸಂಘದ ಹಿರಿಯ ಸದಸ್ಯ ಸೋಮಣ್ಣ ಉಪಸ್ಥಿತರಿದ್ದರು.

ಬೆಳ್ಳಿ ಹಬ್ಬದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಉಪ ಪ್ರಾಂಶುಪಾಲ ಬಾಲಕೃಷ್ಣ, ಪ್ರೌಢಶಾಲೆ ಶಿಕ್ಷಕಿ ಎಂ.ಪಿ ಲಿಯೋನ ಸಬಾಸ್ಟಿನ್, ಹಿರಿಯ ಪತ್ರಕರ್ತ ಹಾಗೂ ಸಂಘದ ಹಿರಿಯ ಸದಸ್ಯರಾದ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು.

ಮೊದಲಿಗೆ ಶಾಲಾ ಮಕ್ಕಳಿಂದ ಪ್ರಾರ್ಥನೆ, ನಿಧನರಾದ ಸದಸ್ಯರಿಗೆ ಮೌನ ಆಚರಣೆ ನಡೆಯಿತು. ಪಿ.ಆರ್ ಸುನಿಲ್ ಕುಮಾರ್ ಸ್ವಾಗತಿಸಿ, ಎಂ.ಎಸ್ ಸುನಿಲ್ ಕಾರ್ಯಕ್ರಮ ನಿರೂಪಿಸಿ ಪಿ.ಆರ್ ಸುಕುಮಾರ್ ವಂದಿಸಿದರು.