ಮಡಿಕೇರಿ, ಮೇ ೨೨: ನಮ್ಮಲ್ಲಿರುವ ಜ್ಞಾನವನ್ನು ಮತ್ತೊಬ್ಬರಿಗೆ ದಾನ ನೀಡುವದಕ್ಕಿಂತ ಹೆಮ್ಮೆಯ ವಿಚಾರ ಬೇರೆ ಯಾವದೂ ಇಲ್ಲವೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಿಸಿದರು.
ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಪಡೆದ ಕೊಡಗು ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯಸ್ಥರಿಗೆ ನಗರದ ಗಾಂಧಿ ಭವನದಲ್ಲಿ ಸಾಧನಸಿರಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಜಿಲ್ಲೆಗೆ ಹೆಮ್ಮೆ ತಂದಿದೆ. ಶಿಕ್ಷಕರು ತಮ್ಮ ಮಕ್ಕಳಿಗೆ ಪಾಠ ಮಾಡುವುದಕ್ಕಿಂತ ಹೆಚ್ಚು ಶಾಲಾ ಮಕ್ಕಳಿಗೆ ಪಾಠ ಮಾಡಿದ್ದಾರೆ. ಶಿಕ್ಷಕರು ಯಾವತ್ತೂ ರಾಜಕೀಯಕ್ಕೆ ಬರಬಾರದು, ಮಕ್ಕಳಿಗೆ ಭವಿಷ್ಯ ನೀಡಬೇಕು. ಪುಸ್ತಕವನ್ನು ಮಾತ್ರ ಬೋಧಿಸುವುದಲ್ಲ; ಪುಸ್ತಕದಿಂದ ಹೊರತಾದ ಜ್ಞಾನವನ್ನು ಮಕ್ಕಳಿಗೆ ಕೊಡಬೇಕು. ಇತರ ವಿಷಯಗಳಲ್ಲೂ ಶಿಕ್ಷಕರು ಮಾದರಿ ಆಗಿರಬೇಕು. ಮಕ್ಕಳು ಕೆಲವೊಂದು ಸಂದರ್ಭಗಳಲ್ಲಿ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ, ಅಂತಹವರ ಬಗ್ಗೆ ಗಮನವಿರಿಸಿ ಅಧಿಕಾರಿಗಳ ಗಮನಕ್ಕೆ ತರಬೇಕು. ಅಂತಹವರನ್ನು ಕಡೆಗಣಿಸದೇ ಅವರ ಮನಸಿನಲ್ಲಿ ಸಕಾರಾತ್ಮಕ ವಿಷಯಗಳನ್ನು ತುಂಬಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಶಿಕ್ಷಕರು ಮಕ್ಕಳಿಗೆ ಸ್ನೇಹಿತರೂ ಆಗಿರಬೇಕು. ಅಧಿಕಾರಿಗಳು ಶಿಕ್ಷಕರು ಸಮಸ್ಯೆಗಳನ್ನು ಹೇಳಿಕೊಂಡು ಬಂದಾಗ ಬೇಡಿಕೆಗಳಿಗೆ ಸ್ಪಂದಿಸಬೇಕು. ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವ ಅವರುಗಳ ಪರವಾಗಿ ನಿಲ್ಲಬೇಕು. ಶಿಕ್ಷಕರು ಸಂತೋಷದಿAದ ಶಾಲೆಗೆ ಹೋಗದಿದ್ದರೆ ಶಿಕ್ಷಕರ ನೋವು ಶಾಲೆಯಲ್ಲಿ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ.
ಫಲಿತಾಂಶದ ಬಗ್ಗೆ ವಿಮರ್ಶೆ ಆಗಬೇಕಿದೆ. ಫಲಿತಾಂಶ ಹೆಚ್ಚಿಸಲು ಯಾವ ರೀತಿ ಕ್ರಮ ಅನುಸರಿಸಬೇಕೆಂಬ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕಿದೆ. ಕಡಿಮೆ ಅಂಕಗಳಿಸುವ ಮಕ್ಕಳನ್ನು ಗುರುತಿಸಿ ಪ್ರೇರೇಪಿಸುವ ಕೆಲಸ ಆಗಬೇಕಿದೆ.
ಕೊಡಗು ಜಿಲ್ಲೆಯಲ್ಲಿ ಅಧಿಕಾರಿಗಳಿಂದ ಹಿಡಿದು ಶಿಕ್ಷಕರು ಉತ್ತಮ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಶೇ.೧೦೦ ಫಲಿತಾಂಶ ಪಡೆದ ಶಾಲೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ಶಾಲೆಗೆ ೧೦೦ ಪುಸ್ತಕ
ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ; ಸ್ನೇಹ ಸಿರಿ ಬಳಗದಿಂದ ಕನ್ನಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ೧೪ ವರ್ಷಗಳ ಹಿಂದೆ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳನ್ನು ಗುರುತಿಸಿ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡುವ ಕಾರ್ಯ ಮಾಡಲಾಗಿತ್ತು. ನಂತರದಲ್ಲಿ ಕಸಾಪ ಅಧ್ಯಕ್ಷರಾದ ಬಳಿಕ ಕನ್ನಡದಲ್ಲಿ ಪೂರ್ಣ ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಮಾಡಲಾಗಿದ್ದು, ಇದೀಗ ಶೇ.೧೦೦ ಅಂಕ ಗಳಿಸಿದ ಶಾಲೆಗಳ ಮುಖ್ಯಸ್ಥರನ್ನು ಸನ್ಮಾನಿಸುವದರೊಂದಿಗೆ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಲಾಗುತ್ತಿದೆ. ಪುಸ್ತಕ ದಾನಿಗಳಿಂದ ಸಂಗ್ರಹಿಸಲಾದ ೨ ಸಾವಿರ ಪುಸ್ತಕಗಳನ್ನು ಶಾಲೆಗಳಿಗೆ ಕೊಡಲಾಗುತ್ತಿದೆ. ಮುಂದಿನ ವರ್ಷದಿಂದ ಪ್ರತಿ ಶಾಲೆಗೂ ೧೦೦ ಪುಸ್ತಕ ಕೊಡಲಾಗುವುದು ಎಂದು ಹೇಳಿದರು.
ಸ್ಮರಿಸುವ ಕೆಲಸ ಆಗಬೇಕಿದೆ
ಕುಶಾಲನಗರ ರೋಟರಿ ಸಂಸ್ಥೆ ಸಹಾಯಕ ರಾಜ್ಯಪಾಲ ಎಂ.ಡಿ. ರಂಗಸ್ವಾಮಿ ಮಾತನಾಡಿ; ಬಹುಭಾಷಾ ಸಂಸ್ಕೃತಿಯ ಕೊಡಗಿನಲ್ಲಿ ಕನ್ನಡ ಭಾಷಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಮೂಲಕ ಲೋಕೇಶ್ ಸಾಗರ್ ನಾಯಕತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಹಲವರು ಸಹಕರಿಸಿದ್ದಾರೆ. ಎಲ್ಲರನ್ನೂ ಸ್ಮರಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಕೊಡಗಿನಲ್ಲಿ ನಕಲು ಗೊತ್ತಿಲ್ಲ
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು ಮಾತನಾಡಿ; ಕೊಡಗು ಮೊದಲನೇ ಸ್ಥಾನದಲ್ಲಿ ಬರುವ ನಿರೀಕ್ಷೆ ಇತ್ತು . ಶೇಕಡವಾರು ಫಲಿತಾಂಶ ಹೆಚ್ಚಾದರೂ ಶ್ರೇಣಿಯಲ್ಲಿ ಸ್ಥಾನ ಪಲ್ಲಟ ಆಗಿದೆ. ಎಲ್ಲಿ ಎಡವಿದ್ದೇವೆ ಎನ್ನುವುದರ ಬಗ್ಗೆ ಅರಿವು ಆಗಿದೆ. ಮುಂದೆ ಈ ತಪ್ಪು ಆಗುವುದಿಲ್ಲ ಎಂದು ಹೇಳಿದರು. ಇತರ ಜಿಲ್ಲೆಗೆ ಹೋಲಿಸಿದರೆ ಕೊಡಗು ಜಿಲ್ಲೆಯದ್ದು ಉತ್ತಮ ಫಲಿತಾಂಶವಾಗಿದೆ. ಕೊಡಗಿನಲ್ಲಿ ನಕಲು ಎನ್ನುವುದು ಗೊತ್ತಿಲ್ಲ. ಶಿಕ್ಷಕರು ಕೂಡ ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಪಿಯುಸಿಗೆ ಹೋಲಿಸಿದರೆ ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣಗೊಂಡವರ ೪ಐದನೇ ಪುಟಕ್ಕೆ
ಸ್ವೀಕರಿಸಿ ಶಾಲೆ ಹಾಗೂ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಒತ್ತಡದಲ್ಲಿ ಶಿಕ್ಷಕರು
ಕೂಡಿಗೆ ಸರಕಾರಿ ಪ್ರೌಢಶಾಲಾ ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಮಾತನಾಡಿ; ಶಿಕ್ಷಣ ಇಲಾಖೆಯಲ್ಲಿ ೨೪/೭ರಂತೆ ಕೆಲಸ ನಿರ್ವಹಿಸುವ ವಾತಾವರಣ ಇದೆ. ಶೇ. ೧೦೦ ಫಲಿತಾಂಶ ತರುವುದು ಸುಲಭವಲ್ಲ. ಸರ್ಕಾರಿ ಶಾಲೆಗಳಲ್ಲಂತೂ ಇದು ಇನ್ನೂ ಕಷ್ಟ. ರಾಜ್ಯದ ೪ ಜಿಲ್ಲೆಗಳ ಫಲಿತಾಂಶ ಮಾತ್ರ ನೈಜ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿ ಶಿಕ್ಷಕರಲ್ಲಿ ಆತ್ಮತೃಪ್ತಿ ಇದೆ. ಈ ಶ್ರಮ ಇಲ್ಲಿಗೆ ನಿಲ್ಲಬಾರದು. ಶೇ. ೧೦೦ ಫಲಿತಾಂಶ ಮುಂದೆಯೂ ನಮ್ಮೆಲ್ಲರ ಗುರಿ ಆಗಬೇಕು ಎಂದರು. ಅನುದಾನಿತ, ಸರ್ಕಾರಿ ಶಾಲೆಗಳ ಫಲಿತಾಂಶ ಕಡಿಮೆ ಆಗಿದೆ. ಅನುದಾನ ರಹಿತ ಶಾಲೆಗಳ ಫಲಿತಾಂಶ ಹೆಚ್ಚಾಗಿದೆ. ಅದರ ಹಿಂದೆ ಆ ಶಾಲೆಗಳ ಶ್ರಮ ಇದೆ. ಹಾಗಾಗಿ ಸರ್ಕಾರಿ, ಅನುದಾನ ರಹಿತ ಶಾಲೆಗಳಿಗೆ ಪ್ರವೇಶ ಕಡಿಮೆ ಆಗಿದೆ. ಇದರೊಂದಿಗೆ ಇತರ ಕೆಲಸಗಳ ನಡುವೆ ಒತ್ತಡದಲ್ಲಿ ಶಿಕ್ಷಕರು ಕೆಲಸ ಮಾಡುವ ಪರಿಸ್ಥಿತಿ ಇದೆ ಎಂದರು.
ಡಯಟ್ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್, ಎಂ. ಕೃಷ್ಣಪ್ಪ, ಟಿ.ಜೆ. ಆನಂದ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಜಿ. ಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ರವಿಕೃಷ್ಣ, ಸೋಮವಾರಪೇಟೆಯ ಟಿ.ಆರ್. ರತ್ನಕುಮಾರ್, ವೀರಾಜಪೇಟೆ ತಾಲೂಕಿನ ಕಾರ್ಯದರ್ಶಿ ಅರುಣ ಆ್ಯನ್ಸಿ ಡಿಸೋಜಾ, ಮಡಿಕೇರಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಜೆ. ಜವರಪ್ಪ, ಹಿರಿಯ ಸಾಹಿತಿಗಳಾದ ಕಿಗ್ಗಾಲು ಗಿರೀಶ್, ಮೊಣ್ಣಂಡ ಶೋಭಾ ಸುಬ್ಬಯ್ಯ, ಪಿ. ವೈಲೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಮಣಜೂರು ಮಂಜುನಾಥ್, ವಾರ್ತಾಧಿಕಾರಿ ಚಿನ್ನಸ್ವಾಮಿ ಇತರರು ಇದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರುಗಳಾದ ಪುದಿಯನೆರವನ ರೇವತಿ ರಮೇಶ್, ಚೊಕ್ಕಾಡಿ ಪ್ರೇಮಾ ರಾಘವಯ್ಯ ಹಾಗೂ ಸುಶೀಲ ತಂಡದವರು ನಾಡಗೀತೆ ಹಾಡಿದರೆ, ಸಿರಿ ಸ್ನೇಹ ಬಳಗದವರಾದ ನಿವೃತ್ತ ಶಿಕ್ಷಕ, ಸಾಹಿತಿ ಉ.ರಾ. ನಾಗೇಶ್ ನಿರೂಪಿಸಿದರು. ಶಿಕ್ಷಕಿ ಉಷಾರಾಣಿ ಸ್ವಾಗತಿಸಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಜಿ. ಕುಮಾರ್ ವಂದಿಸಿದರು. ಬಳಗದವರಾದ ಕೆ.ಜಯಲಕ್ಷಿö್ಮ, ಕೇಕಡ ಇಂದುಮತಿ, ಪುಷ್ಪ ಶಿವರಾಂ ರೈ, ಲೀಲಾದೇವಿ ತೊಡಿಕಾನ, ಮಾಲಾದೇವಿ ಮೂರ್ತಿ, ಸಿ.ಕೆ. ಮಲ್ಲಪ್ಪ, ಪ್ರಕಾಶ್ ಇತರರು ಸನ್ಮಾನದ ವೇಳೆ ಸಹಕರಿಸಿದರು.