ಕುಶಾಲನಗರ, ಮೇ ೨೨: ದುಬಾರೆ ಸಾಕಾನೆ ಶಿಬಿರದಲ್ಲಿ ತಾ. ೧೮ ರಂದು ಆನೆಗಳ ಕಾದಾಟದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಜಿಲ್ಲೆಯ ಇಬ್ಬರು ಅರಣ್ಯ ಅಧಿಕಾರಿಗಳ ಮೇಲೆ ಸುಮೊಟೊ ಕೇಸ್ ದಾಖಲೆ ಮಾಡಿದ್ದು, ಸಮಗ್ರ ವರದಿಯೊಂದಿಗೆ ಕಚೇರಿಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಗುರುವಾರ ಆದೇಶ ಹೊರಡಿಸಿದ್ದು, ಅರಣ್ಯ ಇಲಾಖೆಯ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಮತ್ತು ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಅವರುಗಳ ಮೇಲೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ ರ ಕಲಂ ೭(೨) ಮತ್ತು ೯ (೩)(ಎ) ಪ್ರಕಾರ ತನ್ನ ಅಧಿಕಾರವನ್ನು ಚಲಾಯಿಸಿ ಸ್ವಯಂ ಪ್ರೇರಿತ ಪ್ರಕ್ರಿಯೆ ಆರಂಭಿಸಿದ್ದಾರೆ.

ದಿನಪತ್ರಿಕೆಗಳ ಸುದ್ದಿಯನ್ನು ಆಧರಿಸಿ ಸ್ವಯಂಪ್ರೇರಿತ ಅಧಿಕಾರ ಚಲಾಯಿಸಲು ಮಾಹಿತಿಗಳನ್ನು ಪರಿಗಣಿಸಿದ್ದಾರೆ. ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿದ್ದು, ಸರ್ವೋಚ್ಚ ನ್ಯಾಯಾಲಯದ ೨೧ನೇ ವಿಧೇಯಕದಲ್ಲಿ ಮೂಲಭೂತ ಹಕ್ಕುಗಳ ವ್ಯಾಪ್ತಿಯನ್ನು ವಿಸ್ತರಿಸಿ ಅದರಲ್ಲಿ ಮೂಲಭೂತ ಹಕ್ಕುಗಳನ್ನು ಉಲ್ಲೇಖಿಸಿ ಉಪ ಲೋಕಾಯುಕ್ತರು ಆದೇಶ ಹೊರಡಿಸಿದ್ದಾರೆ. ದುಬಾರೆ ಸಾಕಾನೆ ಶಿಬಿರದಲ್ಲಿ ಯಾವುದೇ ಮುನ್ನೆಚ್ಚರಿಕೆ ಮತ್ತು ಸುರಕ್ಷಿತ ಕ್ರಮಗಳನ್ನು ಅನುಸರಿಸದೇ ಸಾರ್ವಜನಿಕರು ಮತ್ತು ಪ್ರಾಣಿಪ್ರೇಮಿಗಳನ್ನು ಆನೆಗಳೊಂದಿಗೆ ಇರಲು ಅನುವು ಮಾಡಿಕೊಡುತ್ತಿದ್ದು, ಇದರಿಂದಾಗಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಒಂದು ಸಾಕಾನೆ ಇನ್ನೊಂದು ಸಾಕಾನೆಯ ಮೇಲೆ ದಾಳಿ ನಡೆಸಿ ಅದನ್ನು ಗಾಯಗೊಳಿಸಿದ್ದು, ಅಲ್ಲದೆ ಸ್ಥಳಕ್ಕೆ ಪ್ರವಾಸಕ್ಕೆ ಬಂದ ಓರ್ವ ಮಹಿಳೆಯನ್ನು ಸಹ ತೀವ್ರ ಗಾಯಗೊಳಿಸಿ ಅದರಿಂದ ಮಹಿಳೆ ಮೃತಪಟ್ಟಿರುವ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪತ್ರಿಕೆಗಳಲ್ಲಿ ಪ್ರಕಟಗೊಂಡ ವಿಚಾರಗಳ ಪ್ರಕಾರ ನಿಯಮಗಳನ್ನು ಪಾಲನೆ ಮಾಡದೆ ಇರುವುದು ವ್ಯಕ್ತಿಯ ಸಂವಿಧಾನ ಹಕ್ಕನ್ನು ಉಲ್ಲಂಘಿಸಿದAತಾಗಿದೆ. ಸಂವಿಧಾನದ ವಿಧೇಯಕ ೨೧ ರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಸುರಕ್ಷತೆ ಮತ್ತು ಆರೋಗ್ಯಕರ ವಾತಾವರಣದೊಂದಿಗೆ ಬದುಕಲು ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ‍್ಯ ಇದೆ. ಸಂಬAಧಪಟ್ಟ ಅಧಿಕಾರಿಗಳು ಜವಾಬ್ದಾರಿಯಾಗಿ ಕೆಲಸ ನಿರ್ವಹಿಸದಿರುವ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಈ ನಿಟ್ಟಿನಲ್ಲಿ ನಡೆದ ಘಟನೆಯ ಸಮಗ್ರ ವರದಿಯೊಂದಿಗೆ ತಮ್ಮ ಕಚೇರಿಗೆ ಇಬ್ಬರು ಅಧಿಕಾರಿಗಳು ಹಾಜರಾಗುವಂತೆ ಉಪಲೋಕಾಯುಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. - ಸಿಂಚು