ಕಣಿವೆ, ಮೆ ೨೧: ಕಳೆದ ಕೆಲವು ದಿನಗಳ ಈಚೆಗೆ ಕುಶಾಲನಗರ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಭಯಾನಕ ಬಿಸಿಲಿಗೆ ಕಾದು ದಣಿದಿದ್ದ ಭೂಮಿ ಈಗ ಒಂದಿಷ್ಟು ತಣಿದಿದೆ.
ಕಳೆದ ಮಾರ್ಚ್ - ಏಪ್ರಿಲ್ ನಲ್ಲಿ ಬಿತ್ತನೆ ಮಾಡಿದ್ದ ಶುಂಠಿ ಕೃಷಿಕರಿಗೂ ಈ ಮಳೆ ಖುಷಿ ತಂದಿದೆ.
ಈ ಹಿಂದೆAದೂ ಕಂಡರಿಯದ ರಣ ಭಯಾನಕ ಬಿಸಿಲು ಭೂಮಿಯನ್ನು ದಹಿಸುತ್ತಿದ್ದ ಕಾರಣ ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರು, ಅರಕಲಗೂಡು ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಕೃಷಿಗೆ ನೀರುಣಿಸುತ್ತಿದ್ದ ಕೊಳವೆ ಬಾವಿಗಳು ಸ್ಥಗಿತಗೊಂಡಿದ್ದವು. ಅಂದರೆ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿತ್ತು.
ಸAತಸ ಮೂಡಿಸಿದ ಮಳೆ
ಹಣದ ಬೆಳೆ ಶುಂಠಿ ಬೆಳೆಯ ನೆಪದಲ್ಲಿ ಭೂಮಿಗೆ ಅಪಾರ ಪ್ರಮಾಣದಲ್ಲಿ ಹಣವನ್ನು ಸುರಿದಿದ್ದ ಕೃಷಿಕರಲ್ಲಿ ಸಂಕಟ ಮನೆ ಮಾಡಿತ್ತು. ಆದರೆ ಮೇ ಎರಡನೇ ವಾರದಲ್ಲಿ ಸುರಿದ ನಿರಂತರ ಮೂರ್ನಾಲ್ಕು ಅವಧಿಯ ಮಳೆ ಶುಂಠಿ ಕೃಷಿಕರ ಸಂಕಟ ದೂರ ಮಾಡಿ ಸಂತಸ ಮೂಡಿಸಿತ್ತು. ಮಳೆ ಭೂಮಿಯನ್ನು ತಣಿಸಿ ಬೆಳೆಗೆ ಹದ ನೀಡಿದ್ದೇ ತಡ, ಇದೀಗ ಕೃಷಿಕರು ಶುಂಠಿಯ ಹೊಲ ಗದ್ದೆಗಳಲ್ಲಿ ಕಳೆ ತೆಗೆದು ಮಣ್ಣು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ.
ಹಳೆಯ ಶುಂಠಿಗೆ ಉತ್ತಮ ದರ
ಕಳೆದ ವರ್ಷ ಕೃಷಿಕರು ಬೆಳೆದಿದ್ದ ಅಪಾರ ಪ್ರಮಾಣದ ಶುಂಠಿ ಫಸಲು ಬೆಲೆ ಏರಿಕೆಯಾಗದ ಕಾರಣ ಕಟಾವು ಆಗದೇ ಹೊಲದಲ್ಲೇ ಬಾಕಿಯಾಗಿತ್ತು. ಆದಾಗ್ಯೂ ಮೇ ಎರಡನೇ ವಾರದಲ್ಲಿ ಅಂತರಾಷ್ಟಿçÃಯ ಮಾರುಕಟ್ಟೆಯಿಂದ ಶುಂಠಿಯ ದರ ಒಂದಷ್ಟು ಜಿಗಿದ ಕಾರಣ ಹಳೆಯ ಶುಂಠಿಯನ್ನು ಕಟಾವು ಮಾಡಲಾಗುತ್ತಿದ್ದು ಇದೀಗ ಮಾರುಕಟ್ಟೆ ಯಲ್ಲಿ ೫ ಸಾವಿರ ರೂಗಳನ್ನು ದಾಟಿದೆ. ಈ ಮಧ್ಯೆ ಕಳೆದ ಮಾರ್ಚ್ ನಿಂದ ಮೇ ಮೊದಲ ವಾರದವರೆಗೂ ಭೂಮಿ ಬಿಸಿಲಿಗೆ ಬಾಡಿದ ಕಾರಣ ಭೂಮಿಯಲ್ಲಿದ್ದ ಹಳೆಯ ಶುಂಠಿಯ ಇಳುವರಿ ಗಣನೀಯವಾಗಿ ಕುಸಿದಿದೆ ಎಂಬುದು ಕೃಷಿಕರ ಅಳಲು.
ಲಕ್ಷಾಂತರ ಹೆಕ್ಟೇರ್ ಗಳಲ್ಲಿ ಶುಂಠಿ
ಈ ಬಾರಿಯೂ ಕೊಡಗು ಸೇರಿದಂತೆ ಸುತ್ತಲಿನ ಹಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಶುಂಠಿ ಬೆಳೆಗೆ ಕೃಷಿಕರು ಹೆಚ್ಚು ಒತ್ತು ನೀಡಿರುವ ಕಾರಣ ಲಕ್ಷಾಂತರ ಹೆಕ್ಟೇರ್ ಗಳಲ್ಲಿ ಶುಂಠಿ ಬೆಳೆಯಲಾಗಿದೆ. ಈಗಾಗಲೇ ಈ ಬಾರಿ ಬಿತ್ತನೆ ಯಾದ ಬೆಳೆಗೆ ಮೂರು ತಿಂಗಳು ಕಳೆದಿದ್ದು ಇನ್ನು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಮತ್ತೆ ಇದೇ ಹೊಸ ಶುಂಠಿ ಮಾರುಕಟ್ಟೆಗೆ ಅಣಿಯಾಗಲಿದೆ. ಆದರೆ ಈ ಬಾರಿಯ ಹೊಸ ಶುಂಠಿಯ ಹೊಸ ದರ ರೈತರ ಖಾಲಿಯಾದ ಜೇಬನ್ನು ಯಾವ ರೀತಿ ತುಂಬಿಸುವುದೋ ಕಾದು ನೋಡಬೇಕಿದೆ. - ಕೆ.ಎಸ್.ಮೂರ್ತಿ