ನವದೆಹಲಿ, ಮೇ ೨೧: ಫೆಬ್ರವರಿ ೧೪, ೨೦೧೯ ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಭೀಕರ ಆತ್ಮಾಹುತಿ ಉಗ್ರರ ದಾಳಿಯಲ್ಲಿ ೪೦ ಸಿಆರ್‌ಪಿಎಫ್ (ಯೋಧರನ್ನು ಬಲಿಪಡೆದಿದ್ದ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ ಹಮ್ಜಾ ಬುರ್ಹಾನ್‌ನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ‘ಡಾಕ್ಟರ್’ ಎಂದು ಕರೆಯಲಾಗುತ್ತಿದ್ದ ಪುಲ್ವಾಮ ನಿವಾಸಿ ಹಮ್ಜಾ ಬುರ್ಹಾನ್‌ನನ್ನು ೨೦೨೨ ರಲ್ಲಿ ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕ ಎಂದು ಘೋಷಿಸಿತ್ತು. ಬುರ್ಹಾನ್ ಮೂಲ ಹೆಸರು ಅರ್ಜುಮಂದ್ ಗುಲ್ಜಾರ್‌ದಾರ್. ಮುಜಫರಾಬಾದ್‌ನಲ್ಲಿ ಅಪರಿಚಿತ ದಾಳಿಕೋರರಿಂದ ದಾಳಿಗೊಳಗಾದ ನಂತರ ಗುಂಡೇಟಿನಿAದ ಗಂಭೀರವಾಗಿ ಗಾಯಗೊಂಡಿದ್ದ ಹಮ್ಜಾ ಬುರ್ಹಾನ್ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ವಾಸ್ತವವಾಗಿ ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನ ಮತ್ತು ಪಿಓಕೆಯಲ್ಲಿ ಹಲವು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

ಹಮ್ಜಾ ಬುರ್ಹಾನ್ ಯಾರು?

ಪುಲ್ವಾಮಾದ ರತ್ನಿಪೋರಾ ಪ್ರದೇಶದ ಖಾರ್ಬತ್ಪೋರಾದಲ್ಲಿ ಜನಿಸಿದ ಬುರ್ಹಾನ್ ೨೦೧೭ ರಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವ ನೆಪದಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ. ಆದರೆ ಆತ ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಬದರ್‌ಗೆ ಸೇರ್ಪಡೆಯಾಗಿದ್ದ. ಅಲ್ಲದೆ ಅತಿ ಕಡಿಮೆ ಅವಧಿಯಲ್ಲಿಯೇ ಆ ಸಂಘಟನೆಯಲ್ಲಿ ಕಮಾಂಡರ್ ಹುದ್ದೆ ದಕ್ಕಿಸಿಕೊಂಡಿದ್ದ. ನಂತರ ಆತ ಕಾಶ್ಮೀರಕ್ಕೆ ಹಿಂತಿರುಗಿ ಯುವಕರನ್ನು ಧಾರ್ಮಿಕ ಮತಾಂಧರನ್ನಾಗಿ ಮಾಡುವ ಮತ್ತು ಅವರಿಗೆ ಧರ್ಮಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ. ದಕ್ಷಿಣ ಕಾಶ್ಮೀರದಲ್ಲಿ ಬುರ್ಹಾನ್ ತನ್ನ ಜಾಲವನ್ನು ಪುಲ್ವಾಮಾದಿಂದ ಶೋಫಿಯಾನ್‌ಗೆ ವಿಸ್ತರಿಸಿದ್ದ ಎನ್ನಲಾಗಿದೆ. ಫೆಬ್ರವರಿ ೧೪, ೨೦೧೯ ರಂದು ನಡೆದ ಪುಲ್ವಾಮಾ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದನಾ ಸಂಬAಧಿತ ಚಟುವಟಿಕೆಗಳೊಂದಿಗೆ ಬುರ್ಹಾನ್ ಸಂಬAಧ ಹೊಂದಿದ್ದಾನೆ ಎಂದು ತಿಳಿದುಬಂದಿದೆ.

ಪುಲ್ವಾಮಾ ಘಟನೆಯು ಭಾರತದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಜೈಶ್-ಎ-ಮೊಹಮ್ಮದ್ ನಡೆಸಿದ ಅತ್ಯಂತ ಭೀಕರ ದಾಳಿಯಾಗಿದೆ. ಜೆಇಎಂ ಭಯೋತ್ಪಾದಕನೊಬ್ಬ ಲೆಥ್‌ಪೋರಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ಸ್ಫೋಟಕಗಳಿಂದ ತುಂಬಿದ ಕಾರನ್ನು ಡಿಕ್ಕಿ ಹೊಡೆಸಿದ ನಂತರ ೪೦ ಸಿಬ್ಬಂದಿ ಸಾವನ್ನಪ್ಪಿದ್ದರು.