ಕುಶಾಲನಗರ, ಮೇ ೨೧ : ಎರಡು ದಿನಗಳ ಕಾಲ ನಡೆದ ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರಣ್ಯ ಇಲಾಖೆ ತಂಡ ಪ್ರಥಮ ಸ್ಥಾನ ಗಳಿಸಿದೆ. ಪೊಲೀಸ್ ಇಲಾಖೆ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಆರು ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಅರಣ್ಯ ಇಲಾಖೆ ತಂಡ ಐದು ವಿಕೆಟ್ ನಷ್ಟಕ್ಕೆ ೬೦ ರನ್‌ಗಳಿಸಿತು. ಅರಣ್ಯ ಇಲಾಖೆ ಪರವಾಗಿ ಸಮೀರ್ ೩೫ ರನ್ ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಪೊಲೀಸ್ ಇಲಾಖೆ ತಂಡ ಕೇವಲ ೪೫ ರನ್ ಗಳಿಸಿತು. ಮೂರನೇ ಸ್ಥಾನ ಕಂದಾಯ ಇಲಾಖೆ ಪಡೆದರೆ ನಾಲ್ಕನೇ ಸ್ಥಾನ ವಕೀಲರ ತಂಡ ಪಡೆದುಕೊಂಡಿತು. ಪಂದ್ಯಾವಳಿಯ ಉತ್ತಮ ಬ್ಯಾಟ್ಸ್ಮ್ಯಾನ್ ಆಗಿ ಪೊಲೀಸ್ ಇಲಾಖೆ ತಂಡದ ಜೀವನ್, ಉತ್ತಮ ವಿಕೆಟ್ ಕೀಪರ್ ಅರಣ್ಯ ಇಲಾಖೆ ತಂಡದ ಹರೀಶ್, ಉತ್ತಮ ಆಲ್ ರೌಂಡರ್ ಅರಣ್ಯ ಇಲಾಖೆ ತಂಡದ ಸಮೀರ್, ಸರಣಿ ಪುರುಷೋತ್ತಮ ಪೊಲೀಸ್ ಇಲಾಖೆ ತಂಡದ ಸ್ವಾಮಿ ಪಡೆದುಕೊಂಡರು. ತೀರ್ಪುಗಾರರಾಗಿ ಸಂತೋಷ ಗೌಡ, ಪೆಮ್ಮಯ್ಯ, ವೀಕ್ಷಕ ವಿವರಣೆ ಜಯಪ್ರಕಾಶ್ ಕಾರ್ಯನಿರ್ವಹಿಸಿದರು. ಬಹುಮಾನವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ವಿತರಿಸಿದರು. ಶಾಸಕರು ಮಾತನಾಡಿ ಕ್ರೀಡೆಯು ಸ್ನೇಹ ಬಾಂಧವ್ಯ ಬೆಸೆಯುತ್ತದೆ, ಕರ್ತವ್ಯದ ಒತ್ತಡದ ನಡುವೆ ಕ್ರೀಡೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ. ತಾಲೂಕು ಗ್ಯಾರಂಟಿ ಅನುಷ್ಠಾನದ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್. ಸೋಮವಾರಪೇಟೆ ದಂಡಾಧಿಕಾರಿ ಕೃಷ್ಣಮೂರ್ತಿ, ಕ್ರೀಡೆಯ ಆಯೋಜಕರಾದ ಸೈಜನ್ ಕೆ. ಪೀಟರ್ ಮತ್ತಿತರರು ಇದ್ದರು.