ಸಿದ್ದಾಪುರ, ಮೇ ೨೧: ಹಾಡಹಗಲೇ ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಮಹಿಳೆ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ - ಬಾಣಂಗಾಲ ಗ್ರಾಮ ವ್ಯಾಪ್ತಿಯ ಬಜೆಕೊಲ್ಲಿ ಎಂಬಲ್ಲಿ ಸಂಭವಿಸಿದೆ. ಬಜೆಕೊಲ್ಲಿ ಪೈಸಾರಿ ನಿವಾಸಿ ಕಾರ್ಮಿಕ ಮಹಿಳೆ ಆಯಿಷಾ (೫೮) ಎಂಬವರು ಸಮೀಪದ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿ ಕೆಲಸ ಮುಗಿಸಿ ತನ್ನ ಮನೆಗೆ ಅಪರಾಹ್ನ ಅಂದಾಜು ೩.೩೦ರ ಸಮಯಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಸಂದರ್ಭ ಮನೆಯ ಸಮೀಪದಲ್ಲಿ ಕಾಫಿ ತೋಟದಿಂದ ಹಠಾತ್ತನೆ ಬಂದ ಕಾಡಾನೆ ದಾಳಿ ಮಾಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಾಡಾನೆ ದಾಳಿಗೆ ಸಿಲುಕಿ ಆಯಿಷಾ ಅವರ ಮುಖದ ಒಂದು ಭಾಗಕ್ಕೆ ಮತ್ತು ಕೈ, ಕಾಲು ಹಾಗೂ ಎದೆಯ ಸಮೀಪ ಗಾಯವಾಗಿದ್ದು ಗಾಯಗೊಂಡ ಮಹಿಳೆಯು ಕಿರುಚಾಡುತ್ತಿರುವಾಗ ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ಮಹಿಳೆಯನ್ನು ಎತ್ತಿಕೊಂಡು ಕಾರಿನಲ್ಲಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಆಯಿಷಾ ಅವರನ್ನು ರವಾನೆ ಮಾಡಲಾಯಿತು. ಹಾಡಹಗಲೇ ಕಾಡಾನೆ ದಾಳಿ ನಡೆಸಿದ ಪರಿಣಾಮ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಾರ್ಮಿಕರು ಭಯಭೀತರಾಗಿದ್ದಾರೆ. ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಒಂಟಿಸಲಗವೊAದು ಸುತ್ತಾಡುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು. ಕಾಡಾನೆ ದಾಳಿ ನಡೆಸಿದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಹಾಗೂ ಉಪವಲಯ ಅರಣ್ಯ ಅಧಿಕಾರಿ ಶಶಿ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಬಾಡಗ - ಬಾಣಂಗಾಲ ಗ್ರಾಮದ ವ್ಯಾಪ್ತಿಯ ಬಜೆಕೊಲ್ಲಿ, ಮಠ, ಆಲೇತೋಪು ಭಾಗದ ಕಾಫಿ ತೋಟಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.