ಗೋಣಿಕೊಪ್ಪಲು, ಮೇ ೨೦: ಇದೇ ಮೊದಲ ಬಾರಿಗೆ ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ೫ ದಿನಗಳ ಕಾಲ ಆದಿವಾಸಿ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯು ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಪಂದ್ಯಾವಳಿಯನ್ನು ಉದ್ಘಾಟಿಸಿದರು.

ಮೊದಲ ಬಾರಿಗೆ ಆದಿವಾಸಿ ಪುರುಷ ಹಾಗೂ ಮಹಿಳೆಯರು ದಿ.ಶಶಿಕುಮಾರ್ ಜ್ಞಾಪಕಾರ್ಥವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ೬೭ ಪುರುಷರ ಹಾಗೂ ೧೧ ಮಹಿಳೆಯರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಆದಿವಾಸಿಗಳಿಗೆ ಕ್ರೀಡಾ ಶಾಲೆ

೫ ದಿನಗಳ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಆದಿವಾಸಿಗಳಲ್ಲಿ ಪ್ರತಿಭೆಗೆ ಕೊರತೆಗಳಿಲ್ಲ. ಇವರಿಗೆ ಉತ್ತಮ ವೇದಿಕೆಗಳು ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಆದಿವಾಸಿಗಳಿಗಾಗಿಯೇ ಕ್ರೀಡಾ ಶಾಲೆಯನ್ನು ಕೊಡಗಿನಲ್ಲಿ ಆರಂಭಿಸಿಲು ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಮುಂದೆ ಆದಿವಾಸಿಗಳಿಗೆ ಸಾಕಷ್ಟು ಅವಕಾಶಗಳು ಲಭಿಸಲಿದೆ. ಕ್ರೀಡೆಯೊಂದಿಗೆ ಶೇ.೨ರ ಉದ್ಯೋಗ ಕೂಡ ಲಭ್ಯವಾಗಲಿದ್ದು, ಆದಿವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಆದಿವಾಸಿಗಳ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಹಲವು ಪುರಸ್ಕಾರಗಳನ್ನು ನೀಡಲಾಗುತ್ತಿದೆ. ಕೊಡಗು ಹಾಗೂ ರಾಯಚೂರಿಗೆ ಕ್ರೀಡಾ ಶಾಲೆ ಆದಿವಾಸಿಗಳಿಗಾಗಿ ನಿರ್ಮಿಸಲಾಗುವುದು. ಮೊದಲ ಹಂತದಲ್ಲಿ ಕೊಡಗಿಗೆ ಕ್ರೀಡಾ ಶಾಲೆಯ ಆರಂಭಕ್ಕೆ ಅನುಮತಿ ದೊರೆತಿದೆ. ಯಾವ ಪ್ರದೇಶದಲ್ಲಿ ಆದಿವಾಸಿಗಳ ಕ್ರೀಡಾ ಶಾಲೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಆರಂಭವಾಗಬೇಕು ಎಂಬುದನ್ನು ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ನಿರ್ಧಾರ ಮಾಡಲಿದ್ದಾರೆ. ತಮ್ಮ ಮಕ್ಕಳನ್ನು ಕ್ರೀಡೆಗೆ ಹೆಚ್ಚಾಗಿ ಪ್ರೋತ್ಸಾಹಿಸಿ ಎಂದು ಆದಿವಾಸಿಗಳಿಗೆ ಕರೆ ನೀಡಿದರು.

ಸುಜಿನ್ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಪಂದ್ಯಾವಳಿಯಲ್ಲಿ ಕ್ರೀಡಾಕೂಟದ ಸಂಚಾಲಕ ಮುಸ್ತಫಾ ಹಾಗೂ ಅಫ್ರೋಜ್ ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಿದ್ದನ್ನು ಆದಿವಾಸಿಗಳು ಪ್ರಸಂಶಿಸಿದರು.ವೇದಿಕೆಯಲ್ಲಿ ಕಾರ್ಯದರ್ಶಿ ಶಿವಕುಮಾರ್, ಉಪಕಾರ್ಯದರ್ಶಿ ಅನಿಲ್ ಬಾಬು, ಖಜಾಂಜಿ ಸುಜಯ್, ಶಶಿಧರ್, ಸದಸ್ಯರಾದ ರಮಣಿ, ಭಾಗ್ಯ ಮತ್ತಿತರರು ಉಪಸ್ಥಿತರಿದ್ದರು. ಸುತ್ತಮುತ್ತಲಿನ ಗ್ರಾಮದ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಪಂದ್ಯಾವಳಿಯ ಸಂಚಾಲಕರಾದ ಮುಸ್ತಫಾ ಸ್ವಾಗತಿಸಿ, ವಂದಿಸಿದರು. -ಹೆಚ್.ಕೆ. ಜಗದೀಶ್