ಕುಶಾಲನಗರ, ಮೇ. ೨೦ : ಕುಶಾಲನಗರ ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಕಚೇರಿ ಉದ್ಘಾಟನೆ ತಾ.೩೧ ರಂದು ನಡೆಯಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎನ್ ಅಶೋಕ್ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ತಿಂಗಳ ೨೦ ರಂದು ನಡೆಯಬೇಕಾಗಿದ್ದ ಕಾರ್ಯಕ್ರಮವನ್ನು ಕಾರಣಾಂತರಗಳಿAದ ಮುಂದೂಡಲಾಗಿದ್ದು, ಕುಶಾಲನಗರ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಶಾಸಕರಾದ ಅನಿಲ್ ಚಿಕ್ಕಮಾದು ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವರು.

ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಅಶೋಕ್ ಅಧ್ಯಕ್ಷತೆಯಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ನೆರವೇರಿಸಲಿದ್ದಾರೆ.

ಡಾ ಪ್ರಸನ್ನಾನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಸದಸ್ಯರಿಗೆ ಪಾಲು ಬಂಡವಾಳ ದೃಢೀಕರಣ ಪತ್ರ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ ಅವರು ಪಾಲ್ಗೊಂಡು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಹೇಳಿದರು. ಸಂಘದಲ್ಲಿ ಪ್ರಸಕ್ತ ೩೦೦ ಸದಸ್ಯರು ನೋಂದಾಯಿಸಿದ್ದು, ೧,೦೦೦ ಸದಸ್ಯರ ಗುರಿ ಹೊಂದಲಾಗಿದೆ. ಸಂಘದ ಮೂಲಕ ಠೇವಣಿ ಹಾಗೂ ಜಾಮೀನು ಸಾಲ, ವೈಯಕ್ತಿಕ ಸಾಲ, ಆಭರಣ ಸಾಲ ನೀಡಲಾಗುವುದು ಎಂದು ಮಾಹಿತಿ ಒದಗಿಸಿದರು. ನಿರ್ದೇಶಕರಾದ ಬಿ.ಎಸ್ ಚಂದನ್ ಕುಮಾರ್ ಮಾತನಾಡಿ, ಉದ್ಘಾಟನೆಯ ದಿನದಂದು ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಆರ್ ಕೃಷ್ಣ, ಎನ್ ಶ್ರೀನಿವಾಸ ಕುಮಾರ್, ಎಸ್ ಮಂಜುನಾಥ್ ಮತ್ತು ನಾರಾಯಣಸ್ವಾಮಿ ಅವರು ಇದ್ದರು.