ಸೋಮವಾರಪೇಟೆ, ಮೇ ೧೯: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯಲು ಒಲಿಂಪಿಯಾಡ್ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ವಿಠಲ್ ಸಾಲ್ಯಾನ್ ಅಭಿಪ್ರಾಯಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಒಲಿಂಪಿಯಾಡ್ ೬.೦ ಪರೀಕ್ಷೆ ಬರೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೂ ಅದಕ್ಕೆ ಸಾಕಷ್ಟು ಪೂರ್ವ ತಯಾರಿಗಳು, ಪರೀಕ್ಷೆ ಬರೆಯುವ ಕೌಶಲ್ಯ ಇರಬೇಕು. ಸಿಎಸ್ಸಿ ಕೇಂದ್ರಗಳ ಮೂಲಕ ಒಲಿಂಪಿಯಾಡ್ ಪರೀಕ್ಷೆಗೆ ನೊಂದಾವಣೆ ಮಾಡಿಸಿ ಆನ್ಲೈನ್ ಮೂಲಕ ಪರೀಕ್ಷೆ ಬರೆದು ಪ್ರಮಾಣ ಪತ್ರ ಪಡೆಯಬಹುದು. ಅಂತಿಮ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಪಡೆಯುವ ಅವಕಾಶವಿದ್ದು, ೩ನೇ ತರಗತಿಯಿಂದ ೧೨ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶವಿದೆ ಎಂದರು.
ಒಲಿAಪಿಯಾಡ್ ೬.೦ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತಡಮುಕ್ತ ವಾತಾವರಣವನ್ನು ರೂಪಿಸಲಿದ್ದು, ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕಲಿಕೆಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಸಂವಹನ ಕೌಶಲ್ಯಗಳನ್ನು ಬೆಳೆಸಲು ವೇದಿಕೆಯಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಡಿಜಿಟಲ್ ಮಾಧ್ಯಮದ ಮೂಲಭೂತ ತಿಳುವಳಿಕೆ ಪಡೆಯಲು ಉಪಯುಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಎಂಐಎಸ್ ಯೋಜನಾಧಿಕಾರಿ, ನೋಡೆಲ್ ಅಧಿಕಾರಿ, ಸಿಎಸ್ಸಿ ಸೇವಾದಾರರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.