ಸೋಮವಾರಪೇಟೆ, ಮೇ.೧೯: ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಗಾಗಿ ನಾಯಿಗಳನ್ನು ಹಿಡಿಯಲಾಗುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮನವಿ ಮಾಡಿದ್ದಾರೆ.
ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಬೀದಿ ನಾಯಿಗಳ ಸಂತಾನ ಹರಣ ಶಸ್ತç ಚಿಕಿತ್ಸೆ ಕಾರ್ಯಕ್ಕೆ ಪಶುವೈದ್ಯ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶಸ್ತçಚಿಕಿತ್ಸಾ ಕೊಠಡಿಗೆ ಪೂಜೆ ನೆರವೇರಿಸಿ ಅವರು ಮಾಹಿತಿ ನೀಡಿದರು.
ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತç ಚಿಕಿತ್ಸೆ ಮಾಡಿ ಆರೈಕೆ ನಂತರ ಬಿಡುಗಡೆ ಮಾಡಲಾಗುವುದು ಎಂದ ಅವರು ಸಾರ್ವಜನಿಕರು ಯಾವುದೇ ಅಪಪ್ರಚಾರ ಅಥವಾ ಗೊಂದಲಕ್ಕೆ ಒಳಗಾಗದೆ ನಾಯಿಹಾವಳಿ ತಪ್ಪಿಸುವ ಈ ಯೋಜನೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜ್ ದೊಡ್ಡಮನಿ ಮಾತನಾಡಿ, ದೇಶಾದ್ಯಂತ ಬೀದಿ ನಾಯಿಗಳ ಹಾವಳಿ ಹಾಗೂ ಅವುಗಳ ಸಾವು ತಪ್ಪಿಸುವ ಸಲುವಾಗಿ ಸರ್ಕಾರ ಯೋಜನೆ ರೂಪಿಸಿದ್ದು ಅದರಂತೆ ಎನ್.ಜಿ.ಒ.ಗಳ ಮೂಲಕ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತçಚಿಕಿತ್ಸೆ ನಡೆಸಲಾಗುವುದು. ಗಂಡು ನಾಯಿಗಳಿಗೆ ೩ ದಿನ, ಹೆಣ್ಣು ನಾಯಿಗಳಿಗೆ ೫ ದಿನಗಳ ವೈದ್ಯೋಪಚಾರದ ನಂತರ ಬಿಡುಗಡೆ ಗೊಳಿಸಲಾಗುವುದು ಎಂದರು. ಇದೇ ಸಂದರ್ಭ ಮನೆಗಳಲ್ಲಿ ಸಾಕು ನಾಯಿಗಳಿದ್ದವರೂ ಕೂಡ ನಾಯಿಗಳಿಗೆ ಶಸ್ತç ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಲಸಿಕೆಯನ್ನು ಉಚಿತವಾಗಿ ಹಾಕಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಪಟ್ಟಣ ಪಂಚಾಯಿತಿ ಅಭಿಯಂತರ ಹೇಮ ಕುಮಾರ್, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್, ದಫೇದಾರ ಆದಿಲ್ ಸೇರಿದಂತೆ ಸಿಬ್ಬಂದಿಗಳು ಇದ್ದರು.