ಗೋಣಿಕೊಪ್ಪ ವರದಿ, ಮೇ ೧೯ : ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಒತ್ತೋರ್ಮೆ ಕೂಟ ಕಕೂನ್ ಸಭಾಂಗಣದಲ್ಲಿ ನಡೆಯಿತು. ಚೀಯಕ್ ಪೂವಂಡ ಕೇರ್ಬಲಿ ನಮ್ಮೆ ಯಶಸ್ಸಿನಲ್ಲಿ ಕೈಜೋಡಿಸಿದ ಕುಟುಂಬ ಮತ್ತು ಅಕಾಡೆಮಿ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ವಿವಿಧ ಕ್ಷೇತ್ರಗಳ ಮೂಲಕ ನಮ್ಮೆಗೆ ಸಹಕರಿಸಿದವರನ್ನು, ಯಶಸ್ಸಿಗೆ ಪ್ರೋತ್ಸಾಹ ನೀಡಿದವರನ್ನು ಸನ್ಮಾನಿಸಲಾಯಿತು.
ಉತ್ತಮವಾಗಿ ಕೇರ್ಬಲಿ ನಮ್ಮೆ ನಡೆಸಿಕೊಟ್ಟ ಚೀಯಕ್ ಪೂವಂಡ ಕೆ. ಬೋಪಣ್ಣ, ಮಾಳೇಟಿರ ಶ್ರೀನಿವಾಸ್, ಬಾಳೆಯಡ ದಿವ್ಯ ಮಂದಪ್ಪ, ಮಾಚಿಮಡ ಹರ್ಷ ದೇವಯ್ಯ, ಬಲ್ಯಂಡ ವರ್ಷ ವಿಜಯ, ಚಿಂಡಮಾಡ ಸರಿತ, ನಾಗೇಶ್ ವರ್ಣೇಕರ್, ಸಣ್ಣುವಂಡ ಕಿಶೋರ್ ನಾಚಪ್ಪ, ಸನ್ಮಾನ ಸ್ವೀಕರಿಸಿದರು.
ಚೀಯಕ್ ಪೂವಂಡ ಕೇರ್ ಬಲಿ ನಮ್ಮೆ ಅಧ್ಯಕ್ಷ ಸಿ. ಕೆ. ಬೋಪಣ್ಣ ಮಾತನಾಡಿ, ಕೊಡವ ಟಗ್ ಆಫ್ ವಾರ್ ಅಕಾಡೆಮಿ ನೀಡಿದ ಅವಕಾಶದಿಂದ ಉತ್ತಮವಾಗಿ ಆಚರಿಸಲಾಗಿದೆ.
ಅಕಾಡೆಮಿ ಕೂಡ ಸೂಕ್ತವಾಗಿ ಸಹಕಾರ, ಪ್ರೋತ್ಸಾಹ ನೀಡಿದೆ. ನಮ್ಮ ಕುಟುಂಬದ ಹೆಸರಿಗೆ ಮತ್ತಷ್ಟು ಗೌರವ ಲಭಿಸಿದೆ. ಮುಂದಿನ ದಿನಗಳಲ್ಲಿ ಕೇರ್ಬಲಿ ನಮ್ಮೆಗೆ ಉತ್ತಮ ಸಹಕಾರ ನೀಡಲಾಗುವುದು ಎಂದರು.
ಕೊಡವ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಮಾತನಾಡಿ, ಚೀಯಕ್ ಪೂವಂಡ ಕುಟುಂಬದ ಸಹಕಾರದಲ್ಲಿ ಈ ಬಾರಿ ಉತ್ತಮ ಆಟ ಪ್ರದರ್ಶನಗೊಂಡಿದೆ. ಭವಿಷ್ಯದಲ್ಲಿ ರಾಷ್ಟçಮಟ್ಟದಲ್ಲಿ ಪ್ರತಿಭೆಗಳು ಹೊರ ಹೊಮ್ಮುವಂತಾಗಬೇಕು. ವಿಶ್ವ ಮಟ್ಟದಲ್ಲಿ ಕೊಡವ ಕೇರ್ಬಲಿ ನಮ್ಮೆ ಹೆಸರು ಪಡೆಯಬೇಕು ಎಂಬ ನಿರೀಕ್ಷೆ ಇದೆ ಎಂದರು. ನಿವೃತ್ತ ಸಹಾಯಕ ಭೂಮಾಪಕ ಅಧಿಕಾರಿ ಬಾನಂಗಡ ಅರುಣ್ ಮಾತನಾಡಿ, ಕೇರ್ಬಲಿ ಕ್ರೀಡೆಗೆ ಅಕಾಡೆಮಿ ಮೂಲಕ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಚಾರ. ಸರ್ವೇ ಇಲಾಖೆಗೆ ಸ್ಥಳೀಯರು ಕೂಡ ಉದ್ಯೋಗ ಪಡೆದು ಸೇವೆ ನೀಡುವಂತಾಗಬೇಕಿದೆ. ಪಾಲಕರು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಮಕ್ಕಳಿಗೆ ಸರ್ವೇ ಇಲಾಖೆಯಲ್ಲಿ ಉದ್ಯೋಗ ದೊರೆಯುವಂತೆ ಮಾಡಬೇಕಿದೆ ಎಂದರು.
ಕ್ರೀಡಾ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ಅಕಾಡೆಮಿಗೆ ಸೂಕ್ತ ವ್ಯಕ್ತಿಗಳನ್ನು ನಿಯೋಜಿಸಿಕೊಂಡು ಮುಂದುವರಿಯಬೇಕಿದೆ. ವ್ಯಕ್ತಿಗಳಿಂದ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಅಕಾಡೆಮಿ ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಖಜಾಂಚಿ ಜಮ್ಮಡ ಗಿಲ್ ಉಪಸ್ಥಿತರಿದ್ದರು. ಉಳುವಂಗಡ ಲೋಹಿತ್ ಪ್ರಾರ್ಥಿಸಿ, ಮುಂಡಚಾಡೀರ ರಿನಿಭರತ್ ನಿರೂಪಿಸಿದರು. ಅಕಾಡೆಮಿ ಕಾರ್ಯದರ್ಶಿ ಉಳುವಂಗಡ ಲೋಹಿತ್ ಭೀಮಯ್ಯ ವಂದಿಸಿದರು.