ಮಡಿಕೇರಿ, ಮೇ ೧೯: ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ದಿಢೀರ್ ಭೇಟಿ ನೀಡಿ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.

ಆರೋಗ್ಯ ಕೇಂದ್ರದ ಸಿಬ್ಬಂದಿಯಿAದ ಮಾಹಿತಿಯನ್ನು ಪಡೆದುಕೊಂಡ ಶಾಸಕರು, ಲಭ್ಯ ಇರುವ ಔಷಧಿ, ರೋಗಿಗಳಿಗೆ ಇರುವ ಸವಲತ್ತುಗಳ ಮತ್ತು ಸಿಬ್ಬಂದಿಯ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು.

ಆರೋಗ್ಯ ಕೇಂದ್ರದ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಯಾವುದಾದರೂ ಕೊರತೆ ಇದ್ದಲ್ಲಿ ನೇರವಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಅಥವಾ ತನ್ನನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳುವಂತೆ ಸೂಚಿಸಿದರು. ಬಡ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಚಿಕಿತ್ಸೆ ನೀಡಬೇಕು. ಮುಂದಿನ ದಿನಗಳಲ್ಲಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ೨೪ ಗಂಟೆಗಳು ಕಾರ್ಯನಿರ್ವಹಿಸುವಂತೆ ಮಾಡಲು ಸರ್ಕಾರ ಮಟ್ಟದಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು, ವಲಯ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಪಿ.ಎಲ್. ಸುರೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ರಾಜೇಶ್ವರಿ, ವಿದ್ಯಾ ಸಾಗರ್, ಹನೀಫ್, ರಿತಿನ್, ಸಂತೋಷ್, ರವಿ ರಾಜ್ ಹೊಸೂರ್, ಪದ್ಮನಾಭ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.