ಶನಿವಾರಸಂತೆ, ಮೇ ೧೯: ಸಂಪನ್ಮೂಲ ಕ್ರೋಢೀಕರಿಸಿ ಸಮಾಜಮುಖಿ ಕೆಲಸ ಮಾಡುವುದೇ ರೋಟರಿ ಸಂಸ್ಥೆಯ ಧ್ಯೇಯವಾಗಿದ್ದು; ಯುವಜನತೆಗೆ ಜವಾಬ್ದಾರಿ ನೀಡಿದರೆ ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂದು ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ ಆಶಯ ವ್ಯಕ್ತಪಡಿಸಿದರು.

ಶನಿವಾರಸಂತೆ ಸಮೀಪದ ಚಿನ್ನಳ್ಳಿಯ ಖಾಸಗಿ ರೆಸಾರ್ಟ್ನಲ್ಲಿ ರೋಟರಿ ಹೇಮಾವತಿ ಕೊಡ್ಲಿಪೇಟೆ ವತಿಯಿಂದ ನಡೆದ ಜಿಲ್ಲಾ ಗವರ್ನರ್ಸ್ ಸೌಹಾರ್ದ ಭೇಟಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಪೋಲಿಯೋ ಮುಕ್ತ ದೇಶವಾಗಿದೆ. ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಮಾಡುವ ಸಹಾಯ ಸರಪಳಿಯಂತೆ ಮುಂದುವರೆಯಬೇಕು. ವಿದ್ಯಾಸಂಸ್ಥೆಗಳಲ್ಲಿ ರೋರ‍್ಯಾಕ್ಟ್ ಇಂರ‍್ಯಾಕ್ಟ್ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ ಮಾತನಾಡಿ, ಸೇವೆ ಮಾಡುವ ಕಾರ್ಯದಲ್ಲಿ ಒಂದು ಸಂದೇಶ ಇರಬೇಕು. ಪರಿಸರ ಸಂರಕ್ಷಣೆಗೆ ಸ್ವಯಂ ಜಾಗೃತಿ ಮುಖ್ಯವಾಗಿದ್ದು, ಜನರಿಗೆ ಉಪಯೋಗವಾಗುವ ಸೇವೆ ಮಾಡಬೇಕು. ರೋಟರಿ ಹೇಮಾವತಿ ಕೊಡ್ಲಿಪೇಟೆ ೨೦೨೫-೨೬ರಲ್ಲಿ ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡಿದೆ ಎಂದು ಪ್ರಶಂಶಿಸಿದರು.

ವಲಯ ಸೇನಾನಿ ಎ.ಎಸ್.ರಾಮಣ್ಣ ಮಾತನಾಡಿ, ಆಡಳಿತಗಾರರ ಇಚ್ಛಾಶಕ್ತಿಯಿಂದ ಮಾತ್ರ ಪರಿಸರ ಸ್ವಚ್ಛತೆ ಸಾಧ್ಯವಾಗಿದ್ದು ಪರಿಸರ ಸ್ವಚ್ಛವಾಗಿದ್ದರೇ ಜೀವರಾಶಿ ಆರೋಗ್ಯವಾಗಿರುತ್ತದೆ ಎಂದರು.

ರೋಟರಿ ಹೇಮಾವತಿ ಕೊಡ್ಲಿಪೇಟೆ ಅಧ್ಯಕ್ಷ ಯು.ಎಚ್. ಉಮೇಶ್ ಮಾತನಾಡಿ, ಸಂಸ್ಥೆಯ ಸಮಾಜಮುಖಿ ಕೆಲಸಗಳ ಬಗ್ಗೆ, ಅಭಿವೃದ್ಧಿ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಗಣೇಶ್ ಚೌಧರಿ ವಾರ್ಷಿಕ ವರದಿ ಮಂಡಿಸಿದರು.

ರೋಟರಿ ಹೇಮಾವತಿ ಕೊಡ್ಲಿಪೇಟೆಯ ಮುಂದಿನ ಸಾಲಿನ ಆಧ್ಯಕ್ಷ ಭಾನುಪ್ರಕಾಶ್, ಕಾರ್ಯದರ್ಶಿ ಮೋಹನ್ ಕುಮಾರ್ ಲೆಕ್ಕ ಪರಿಶೋಧಕ ಎಚ್.ಜೆ.ಪ್ರವೀಣ್ ಉಪಸ್ಥಿತರಿದ್ದರು.

ನಿಕಟಪೂರ್ವ ಅಧ್ಯಕ್ಷ ದಿವಾಕರ್, ಬಿ.ಕೆ.ಯತೀಶ್ ಕುಮಾರ್, ದಿನೇಶ್, ಉಮೇಶ್, ಅಮೃತ್, ನಿರ್ದೇಶಕರು, ಸದಸ್ಯರು, ಶನಿವಾರಸಂತೆ ರೋಟರಿ ಸಂಸ್ಥೆ ಮತ್ತು ಆಲೂರುಸಿದ್ದಾಪುರ ರೋಟರಿ ಸಂಸ್ಥೆ ಪದಾಧಿಕಾರಿಗಳು ಹಾಜರಿದ್ದರು. ಸಮಾರಂಭಕ್ಕೆ ಮೊದಲು ಬೆಳಿಗ್ಗೆ ರೋಟರಿ ಹೇಮಾವತಿ ಕೊಡ್ಲಿಪೇಟೆ ವತಿಯಿಂದ ದೊಡ್ಡಕುಂದ ಅಂಗನವಾಡಿಗೆ ೧೫ ಡೆಸ್ಕ್, ೧೫ ಕುರ್ಚಿಗಳು ಹಾಗೂ ಬೀರು ಕೊಡುಗೆ ನೀಡಲಾಯಿತು. ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಬಾಟಲ್ ಬೂತ್ ನೀಡಲಾಯಿತು.