ಕುಶಾಲನಗರ, ಮೇ ೧೯: ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ನಡೆದ ಎರಡು ಗಂಡು ಆನೆಗಳ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ವಿಚಿತ್ರ ಘಟನೆಯ ನಂತರ, ಕಾದಾಟದಲ್ಲಿ ಗಾಯಗೊಂಡ ಆನೆಗಳಲ್ಲಿ ಒಂದು ಆನೆ ಮಂಗಳವಾರ ಸಾವನ್ನಪ್ಪಿದೆ. ಸುಮಾರು ೫೩ ವರ್ಷ ವಯಸ್ಸಿನ ಮಖಾನ ಆನೆ ಮಾರ್ತಾಂಡ ನಿರಂತರ ಚಿಕಿತ್ಸೆಯ ಹೊರತಾಗಿಯೂ ಸಾವನ್ನಪ್ಪಿದೆ. ವನ್ಯಜೀವಿ ತಜ್ಞರಾದ ಡಾ. ಮುಜೀಬ್ ಮತ್ತು ಡಾ. ಚಿಟ್ಟಿಯಪ್ಪ ಆನೆಗೆ ಚಿಕಿತ್ಸೆ ನೀಡಿದ್ದರೂ ಗಂಭೀರವಾಗಿ ಗಾಯಗೊಂಡ ಜಂಬೊ ಸಾವನ್ನಪ್ಪಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ದೃಢಪಡಿಸಿದರು.
ಸೋಮವಾರ ನದಿ ನೀರಿನಲ್ಲಿ ೨೬ ವರ್ಷದ ಕಂಜನ್ ಹಾಗೂ ಮತ್ತೊಂದು ಆನೆ ಮಾರ್ತಾಂಡ ನಡುವೆ ತೀವ್ರ ಸೆಣಸಾಟ ನಡೆಯಿತು. ಆ ಸಂದರ್ಭ ಬಸವಳಿದು ನೀರಿನಲ್ಲಿ ಆಯ ತಪ್ಪಿ ಉರುಳುತ್ತಿದ್ದ ಮಾರ್ತಾಂಡ ಆನೆ ತಮಿಳುನಾಡಿನ ಪ್ರವಾಸಿ ಮಹಿಳೆ ಜಿನ್ಸು (೩೩) ಮೇಲೆ ಬಿದ್ದು ಆಕೆ ಸಾವಿಗೀಡಾದರು. ಗಜಗಳ ನಡುವಿನ ಈ ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡ ಮಾರ್ತಾಂಡ ಮಂಗಳವಾರ ಸಾವನ್ನಪ್ಪಿದೆ. ಮಾರ್ತಾಂಡ ಆನೆಯ ಹೊಟ್ಟೆ ಮತ್ತು ಇತರ ಭಾಗಗಳು ಸೇರಿದಂತೆ ೭ ಸ್ಥಳಗಳಲ್ಲಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿಗೆ ಕಾರಣವಾದ ನಿಖರ ಗಾಯಗಳ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಡಿಎಫ್‌ಒ ಅಭಿಷೇಕ್ “ಶಕ್ತಿ” ಗೆ ತಿಳಿಸಿದರು. ಅವರ ಪ್ರಕಾರ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ದಾಳಿಗೊಳಗಾದ ಕಂಜನ್ ಅನ್ನು ತಾತ್ಕಾಲಿಕವಾಗಿ ಇತರ ಆನೆಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ.
ಈಶ್ವರ ಖಂಡ್ರೆ ಸಂತಾಪ - ದಸರಾಗೆ ಕಂಜನ್ ಇಲ್ಲ
ದುಬಾರೆ ಆನೆ ಶಿಬಿರದಲ್ಲಿ ನಿನ್ನೆ ಮೈಸೂರು ದಸರಾ ಆನೆ ಕಂಜನ್ ಮತ್ತು ಮಕನಾ ಆನೆ ಮಾರ್ತಾಂಡ ನಡುವೆ ನಡೆದ ಕಾಳಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಅನಿರೀಕ್ಷಿತವಾದ ಮತ್ತು ಊಹಿಸಲೂ ಆಗದ ದುರ್ಘಟನೆಯಲ್ಲಿ ಒಬ್ಬ ಪ್ರವಾಸಿ ಮಹಿಳೆ ಮತ್ತು ಒಂದು ಆನೆ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ ಎಂದು ತಿಳಿಸಿರುವ ಅವರು ಸಂತಾಪ ಸೂಚಿಸಿದ್ದಾರೆ.
ಹಾಸನ ಜಿಲ್ಲೆ ಆಲೂರಿನಲ್ಲಿ ೨೦೨೩ ರಲ್ಲಿ ಸೆರೆ ಹಿಡಿಯಲಾಗಿದ್ದ ೫೩ ವರ್ಷದ ಮಾರ್ತಾಂಡ ೪,೫೦೦ ಕೆ.ಜಿ. ತೂಕವಿತ್ತು. ಹಾಸನ ಜಿಲ್ಲೆ ಯಸಳೂರಿನ ಬಳಿ ೨೦೧೪ರಲ್ಲಿ ಸೆರೆ ಹಿಡಿಯಲಾಗಿದ್ದ ೨೬ ವರ್ಷದ ಕಂಜನ್ ೩ ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ. ಇನ್ನು ಮುಂದೆ ಮೈಸೂರು ದಸರಾ ಮಹೋತ್ಸವಕ್ಕೆ ಈ ಆನೆಯನ್ನು ಬಳಸದಂತೆ ಸೂಚಿಸಿರುವುದಾಗಿಯೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ತಕ್ಷಣ ರೂ.೨೦ ಲಕ್ಷ ಪರಿಹಾರ - ಉಸ್ತುವಾರಿ ಸಚಿವ
ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾಳಗದ ಮೂಲಕ ಮೃತಪಟ್ಟ ಪ್ರವಾಸಿ ಮಹಿಳೆಯ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ತಕ್ಷಣವೇ ರೂ.೨೦ ಲಕ್ಷ ಪರಿಹಾರ ನೀಡಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು ಅವರು ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಸಚಿವರು, ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಎರಡು ಆನೆಗಳ ಕಾದಾಟದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಅತ್ಯಂತ ದುರದೃಷ್ಟಕರ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ, ದುಬಾರೆ ಶಿಬಿರದಲ್ಲಿ ಕಟ್ಟುನಟ್ಟಿನ ಮಾರ್ಗಸೂಚಿ ಪಾಲಿಸುವಂತೆ ಕೊಡಗು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ದುರಂತದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಘಟನೆಗೆ ಸಂಬAಧಿಸಿದAತೆ ಕೊಡಗು ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಾಥಮಿಕ ಮಾಹಿತಿ ಪಡೆಯಲಾಗಿದೆ. ಘಟನೆಗೆ ನಿಖರ ಕಾರಣಗಳು ಮತ್ತು ಪ್ರವಾಸಿ ಮಾರ್ಗಸೂಚಿ ನಿರ್ವಹಣೆಯಲ್ಲಿ ಲೋಪವಿದ್ದಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವರು ತಿಳಿಸಿದ್ದಾರೆ.
ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಆನೆ ಶಿಬಿರಗಳಲ್ಲಿ ಕಟ್ಟನಿಟ್ಟಾಗಿ ಪ್ರವಾಸಿಗರ ನಿರ್ವಹಣೆಗೆ ಮಾರ್ಗಸೂಚಿ ಜಾರಿಗೆ ತರಲು ಸಚಿವರು ನಿರ್ದೇಶಿಸಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಜಿಲ್ಲಾಡಳಿತವು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಕಾಡುಪ್ರಾಣಿಗಳ ನಡಾವಳಿಕೆಯನ್ನು ಮತ್ತು ಅವುಗಳ ಪ್ರತಿಕ್ರಿಯೆಯನ್ನು ನಿಖರವಾಗಿ ಊಹಿಸಲು ಅಸಾಧ್ಯ ಎಂದ ಸಚಿವರು, ಅರಣ್ಯ ಪ್ರದೇಶಗಳು ಹಾಗೂ ಆನೆ ಶಿಬಿರಗಳಿಗೆ ಭೇಟಿ ನೀಡುವ ಪ್ರವಾಸಿಗರು ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಾಣಿಗಳನ್ನು ವೀಕ್ಷಿಸುವಾಗ ಅಂತರ ಕಾಯ್ದುಕೊಳ್ಳುವ ಜೊತೆಗೆ ತಮ್ಮ ಸುರಕ್ಷತೆಯ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.
-ಸಿಂಚು