ಕೋವರ್‌ಕೊಲ್ಲಿ ಇಂದ್ರೇಶ್
ಮಡಿಕೇರಿ, ಮೇ ೧೯ : ಕಾಫಿ ನಾಡು ಎಂದೇ ಪ್ರಸಿದ್ಧವಾದ ಕೊಡಗು ಜಿಲ್ಲೆಯಲ್ಲಿರುವ ಉದ್ಯಮ ದಿಗ್ಗಜ ಆನಂದ್ ಮಹೀಂದ್ರಾ ಅವರ ಕುಟುಂಬದ ಕಾಫಿ ತೋಟಕ್ಕೆ ಆನೆಗಳ ಹಿಂಡು ಲಗ್ಗೆ ಇಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ವೈರಲ್ ಆಗಿದೆ.
ಶನಿವಾರ ಬೆಳಗ್ಗಿನ ಜಾವ ಎಸ್ಟೇಟ್ ಆವರಣದಲ್ಲಿ ಶಾಂತವಾಗಿ ಹಾಗೂ ಗಾಂಭೀರ್ಯದಿAದ ಹೆಜ್ಜೆ ಹಾಕುತ್ತಾ ಸಾಗಿದ ಆನೆಗಳ ಗುಂಪಿನ ವೀಡಿಯೋವನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯ ಅಧ್ಯಕ್ಷ ಸ್ವತಃ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊAಡಿದ್ದಾರೆ. ಈ ದೃಶ್ಯವು ಪ್ರಕೃತಿ ಮತ್ತು ಮಾನವ ವಾಸಸ್ಥಳದ ಸಹಬಾಳ್ವೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಅವರು, “ನಮ್ಮ ಕುಟುಂಬದ ಕೊಡಗಿನ ಕಾಫಿ ತೋಟವನ್ನು ನಾವು ಪಾರಂಪರಿಕ ಆಸ್ತಿ ಎಂದು ನೋಡುತ್ತೇವೆ. ಇದನ್ನು ನನ್ನ ಕಿರಿಯ ಸಹೋದರಿ ನಿರ್ವಹಿಸುತ್ತಿದ್ದಾಳೆ,” ಎಂದು ತಿಳಿಸಿದ್ದಾರೆ. ಆನೆಗಳ ಹಿಂಡು ಎಸ್ಟೇಟ್‌ನ ಒಂದು ಗೇಟ್‌ನಿಂದ ಇನ್ನೊಂದು ಭಾಗದ ಕಡೆಗೆ ಅತ್ಯಂತ ಶಾಂತವಾಗಿ ಸಾಗಿರುವುದನ್ನು ಅವರು ವಿವರಿಸಿದ್ದಾರೆ.
ಆನಂದ್ ಮಹೀಂದ್ರಾ ಅವರು ಹಂಚಿಕೊAಡ ವಿಡಿಯೋದಲ್ಲಿ ಆನೆಗಳು ಅರೇಬಿಕಾ ಕಾಫಿ ಬೆಳೆ ಪ್ರದೇಶದಿಂದ ರೋಬಸ್ಟಾ ಭಾಗದತ್ತ ಸಾಗುತ್ತಿರುವ ದೃಶ್ಯ ಕಂಡುಬರುತ್ತದೆ. ಈ ಸಂದರ್ಭವನ್ನು ಅವರು “ಭವ್ಯ ಅತಿಥಿಗಳ ಪ್ರವೇಶ” ಎಂದು ಹಾಸ್ಯಾತ್ಮಕವಾಗಿ ವರ್ಣಿಸಿದ್ದಾರೆ. ಇದು ವನ್ಯ ಜೀವಿಗಳ ಆವಾಸಸ್ಥಾನದ ಅತಿಕ್ರಮಣದಿಂದ ಉಂಟಾದ ಹೊಸ ವಿದ್ಯಮಾನವಲ್ಲ. ಈ ಭವ್ಯ ಸಂದರ್ಶಕರು ದಶಕಗಳಿಂದ ಬೆಳೆದಿರುವ ಹಲಸಿನ ಮರಗಳನ್ನು ಆಕ್ರಮಿಸಲು ಬರುತ್ತಿದ್ದಾರೆ. ಆದರೆ ಈ ಬಾರಿ ಅವರು ಮುಖ್ಯ ದ್ವಾರಗಳ ಮೂಲಕ ಎಷ್ಟು ವಿಶ್ವಾಸದಿಂದ ನಡೆಯುತ್ತಿದ್ದಾರೆಂದರೆ ಅವರಿಗೆ ಚಹಾ ಮತ್ತು ತಿಂಡಿಗೆ ನಾವು ಅಧಿಕೃತವಾಗಿ ಆಹ್ವಾನ ನೀಡಿದ್ದೇವೆಯೋ ಎಂಬAತೆ ಭಾಸವಾಗುತ್ತದೆ. ತೋಟ ಯಾವಾಗಲೂ ಅವರದು ಎಂದು ಅವರಿಗೆ ತಿಳಿದಿದೆ ಮತ್ತು ನಾವು ಕೇವಲ ತಾತ್ಕಾಲಿಕ ಬಾಡಿಗೆದಾರರು ಎಂದು ಅವರು ಎಕ್ಸ್ ನಲ್ಲಿ (ಹಿಂದೆ ಟ್ವಿಟರ್) ಪೋಸ್ಟ್ ಮಾಡಿದ್ದಾರೆ. ಸಂಜೆ ೬ ಘಂಟೆಗೆ ಪೋಸ್ಟ್ ಮಾಡಿರುವ ಸುಮಾರು ೧೫ ರಿಂದ ೨೦ ಆನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತಾರು ರಸ್ತೆ ದಾಟಿಕೊಂಡು ಹೋಗುತ್ತಿರುವ ೯ ಸೆಕೆಂಡ್‌ಗಳ ವೀಡಿಯೋ ಎರಡು ಘಂಟೆಗಳಲ್ಲಿಯೇ ೩೫ ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರ ಮನಗೆದ್ದಿದೆ.
ಈ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು , ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಕೃತಿ ಮತ್ತು ಮಾನವನ ನಡುವಿನ ಸಹಬಾಳ್ವೆಯ ಸುಂದರ ಉದಾಹರಣೆಯಾಗಿ ಈ ವಿಡಿಯೋ ಗಮನ ಸೆಳೆಯುತ್ತಿದೆ