ಸೋಮವಾರಪೇಟೆ, ಮೇ ೧೮: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡೇಗದ್ದೆ ಗ್ರಾಮದಲ್ಲಿ ರಸ್ತೆ ಹಾಗೂ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸೇತುವೆ ಕಾಮಗಾರಿಗೆ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆ ಮೂಲಕ ೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತಾಕೇರಿ ಗ್ರಾಮದ ಕೋಡೇಗದ್ದೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಒದಗಿಸುತ್ತಿದ್ದು,ಗುಣಮಟ್ಟದ ಕಾಮಗಾರಿಗೆ ಸ್ಥಳೀಯರೂ ಸಹ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು. ರಸ್ತೆಗಳ ನಿರ್ಮಾಣದಿಂದ ಸಂಚಾರ ವ್ಯವಸ್ಥೆ ಸುಗಮವಾಗಲಿದೆ. ಗ್ರಾಮೀಣ ಭಾಗದಲ್ಲಿ ಅಗತ್ಯವಿರುವ ರಸ್ತೆಗಳ ನಿರ್ಮಾಣ, ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಡಾ. ಮಂತರ್ ಗೌಡ ಹೇಳಿದರು. ನಂತರ ಶಿರಂಗಳ್ಳಿ ಗ್ರಾಮದಲ್ಲಿ ರೂ. ೩೦ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ಕಿರು ಸೇತುವೆ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಖಜಾಂಚಿ ಚೇತನ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಕಾಂಗ್ರೆಸ್ ಮುಖಂಡರಾದ ಎಸ್.ಎಂ. ಚಂಗಪ್ಪ, ಕೆ.ಎಂ. ಲೋಕೇಶ್, ಸುರೇಂದ್ರ, ಗರ್ವಾಲೆ ಕಾಂಗ್ರೆಸ್ ವಲಯಾಧ್ಯಕ್ಷ ನಾಣಿಯಪ್ಪ, ಮಾದಾಪುರದ ರಫೀಕ್ ಸೇರಿದಂತೆ ಇತರರು ಇದ್ದರು.