ಮಡಿಕೇರಿ, ಮೇ ೧೮: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಜಿಲ್ಲಾಡಳಿತ ಭವನ ಎದುರು ಜಮಾಯಿಸಿದ ಆಶಾ ಕಾರ್ಯಕರ್ತೆಯರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಕಳೆದ ಒಂದು ವರ್ಷದಿಂದ ಕೇಂದ್ರದ ಪ್ರೋತ್ಸಾಹ ಧನ ಸಂದಾಯವಾಗದೆ ಬಾಕಿ ಉಳಿದಿದೆ. ಮಾಸಿಕ ವೇತನ ನಿಗದಿತವಾಗಿ ಪಾವತಿಯಾಗುತ್ತಿಲ್ಲ. ಹಲವು ವರ್ಷಗಳಿಂದ ಬಾಕಿ ಇರುವ ಕಂಪೋನೆAಟ್‌ಗಳ ಹಣ ಬಿಡುಗಡೆಯಾಗಿಲ್ಲ. ಕಾರ್ಯಕರ್ತೆಯರ ಗೌರವಧನ, ಪ್ರೋತ್ಸಾಹ ಧನವನ್ನು ಕಡಿತ ಮಾಡಲಾಗಿದೆ. ೯ ಆಶಾ ಸೇವೆ ಕಡಿತ ಮಾಡಿದ ಪರಿಣಾಮ ಪ್ರೋತ್ಸಾಹ ಧನ ಕಡಿಮೆಯಾಗಿದೆ. ಆ್ಯಪ್ ಮೂಲಕ ದಾಖಲಾತಿ ಕ್ರಮ ಕೈಬಿಡಬೇಕು, ನಿವೃತ್ತಿಯಾದವರಿಗೆ ತಕ್ಷಣ ಇಡಿಗಂಟು ನೀಡಬೇಕು, ಮಾಸಿಕ ಗೌರವ ಧನವನ್ನು ಹೆಚ್ಚಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಆಶಾ ಕಾರ್ಯಕರ್ತೆಯರು ಮುಂದಿಟ್ಟರು. ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷೆ ತೆಕ್ಕಡೆ ಪೂರ್ಣಿಮ, ಜಿಲ್ಲಾ ಸಂಚಾಲಕಿ ಉಮಾದೇವಿ, ಕಾರ್ಯದರ್ಶಿ ನಾಗಮಣಿ, ಪ್ರಮಿತ, ಮಾಲಾಶ್ರೀ ಸೇರಿದಂತೆ ಜಿಲ್ಲೆಯ ನೂರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.