ಪ್ರತಿ ವರ್ಷ ಮೇ ೧೮ರಂದು ವಿಶ್ವದಾದ್ಯಂತ ಅಂತರರಾಷ್ಟಿçÃಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ. ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಮಾನವ ನಾಗರಿಕತೆಯ ಅಮೂಲ್ಯ ನೆನಪುಗಳನ್ನು ಸಂರಕ್ಷಿಸುವ ಮಹತ್ವವನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ೧೯೭೭ರಲ್ಲಿ ಅಂತರರಾಷ್ಟಿçÃಯ ವಸ್ತುಸಂಗ್ರಹಾಲಯ ಮಂಡಳಿ (Iಅಔಒ) ಈ ದಿನವನ್ನು ಘೋಷಿಸಿತು. “ವಸ್ತು ಸಂಗ್ರಹಾಲಯಗಳು ಸಮಾಜದ ಸಾಂಸ್ಕೃತಿಕ ಸೇತುವೆಗಳು” ಎಂಬ ಸಂದೇಶ ಈ ದಿನದ ಮೂಲ ಆಶಯವಾಗಿದೆ.

ಈ ಮಹತ್ವದ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕೊಡಗಿನ ಕುಶಾಲನಗರದ ಬಾಚರಣಿಯಂಡ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣರ ಪುರಾತನ ವಸ್ತು ಸಂಗ್ರಹಾಲಯ ವಿಶೇಷ ಗಮನ ಸೆಳೆಯುತ್ತದೆ.

ಕಳೆದ ನಾಲ್ಕು ದಶಕಗಳ ಪರಿಶ್ರಮದ ಫಲವಾಗಿ ತಮ್ಮ ಸಾಮಾನ್ಯ ಮನೆಯನ್ನು ಅವರು ಇತಿಹಾಸದ ಜೀವಂತ ಮ್ಯೂಸಿಯಂ ಆಗಿ ರೂಪಿಸಿದ್ದಾರೆ. ಇದು ಪರಂಪರೆ ಉಳಿವಿನ ಅಪರೂಪದ ಉದಾಹರಣೆಯಾಗಿದೆ.

ಮನೆಗೆ ಕಾಲಿಟ್ಟ ಕ್ಷಣವೇ ಹಳೆಯ ಕಾಲಘಟ್ಟದ ಬದುಕಿನ ಚಿತ್ರಣ ಕಣ್ಣಮುಂದೆ ಮೂಡುತ್ತದೆ. ಚಂದೂಕು, ಕುರಿ ಮುಕ್ಕಾಲಿ, ಚೆಪ್ಪು, ಪೋಳಿಯಾ, ನೂಪೊಟ್ಟೊರ, ಸೇರ್, ಮಾನ, ತೇಂಗಲ, ಮರದ ದುಡಿ, ಕಡಾವು, ಬೀರಾಳಿ ಪೊಟ್ಟಿ, ಕಂಜಿ ಕಲ, ಕಳಿಕೋಲ್, ಎಲ್ ತಟ್ಟೆ, ಪಲಿಯ, ಚೇಕಲ, ಉಡಿ, ಪರೆ, ಗುಜಾಯಿ ಸೇರಿದಂತೆ ನೂರಕ್ಕೂ ಹೆಚ್ಚು ಪುರಾತನ ವಸ್ತುಗಳು ಇಲ್ಲಿ ಸಂರಕ್ಷಿತವಾಗಿವೆ. ಪ್ರತಿಯೊಂದು ವಸ್ತುವೂ ಗತಕಾಲದ ಬದುಕಿನ ಮೌನಸಾಕ್ಷಿಯಾಗಿದೆ.

ಕೊಡಗಿನ ಐನ್‌ಮನೆಗಳ ಅಟ್ಟಗಳಲ್ಲಿ ಮರೆತುಹೋಗುತ್ತಿದ್ದ ಈ ವಸ್ತುಗಳನ್ನು ಅಪ್ಪಣ್ಣ ಅವರು ಸಂಗ್ರಹಿಸಿ ಜೋಪಾನವಾಗಿ ಕಾಪಾಡಿದ್ದಾರೆ. ಪ್ರತಿಯೊಂದು ವಸ್ತುವಿನ ಇತಿಹಾಸವನ್ನು ಅವರು ವಿವರಿಸುವ ರೀತಿಯೇ ಈ ಸಂಗ್ರಹಾಲಯದ ವಿಶೇಷತೆ. ಆಧುನಿಕತೆಯ ಹೊಡೆತದಲ್ಲಿ ನಾಶವಾಗುತ್ತಿದ್ದ ಪುರಾತನ ಪರಂಪರೆಯನ್ನು ಉಳಿಸುವಲ್ಲಿ ಇವರ ಪ್ರಯತ್ನ ಮಹತ್ವದ್ದಾಗಿದೆ.

ವಸ್ತುಸಂಗ್ರಹಾಲಯಗಳು ಕೇವಲ ವಸ್ತುಗಳ ಸಂಗ್ರಹವಲ್ಲ; ಅವು ಸಮಾಜದ ನೆನಪುಗಳ ಜೀವಂತ ಭಂಡಾರಗಳು. ಒಂದು ಪೀಳಿಗೆಯ ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸೇತುವೆಯಾಗಿ ಅವು ಕಾರ್ಯನಿರ್ವಹಿಸುತ್ತವೆ. ಇದೇ ಕಾರ್ಯವನ್ನು ಅಪ್ಪಣ್ಣ-ರಾಣು ದಂಪತಿಗಳು ತಮ್ಮ ಮನೆಮೂಲಕ ಯಶಸ್ವಿಯಾಗಿ ಮಾಡಿದ್ದಾರೆ.

ಈ ಹಿಂದೆ ಕೈಲ್‌ಪೊಳ್ದ್ ಸಂದರ್ಭದಲ್ಲಿ ಇವರ ಮನೆಯಲ್ಲಿ ನಡೆಯುವ ವಸ್ತು ಪ್ರದರ್ಶನವೂ ವಿಶೇಷ ಆಕರ್ಷಣೆ ಯಾಗಿತ್ತು. ಹಲವಾರು ಅನುಭವಗಳ ನಡುವೆಯೂ ಅವರು ಸಂಸ್ಕೃತಿ ಉಳಿವಿಗಾಗಿ ತಮ್ಮ ಶ್ರಮವನ್ನು ಮುಂದುವರಿಸುತ್ತಿದ್ದಾರೆ. ೨೦೨೦ರಲ್ಲಿ “ಚಂಗೀರ” ಎಂಬ ದಾಖಲೀಕೃತ ಪುಸ್ತಕದ ಮೂಲಕವೂ ಈ ಸಂಗ್ರಹದ ದಾಖಲೆ ಸಂರಕ್ಷಿಸಲಾಗಿದೆ. ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಪ್ರವಾಸಿಗರಿಗೆ ಇದು ಅಮೂಲ್ಯ ಜ್ಞಾನಕೇಂದ್ರವಾಗಿದೆ.

ಮೇ ೧೮ರ ವಸ್ತುಸಂಗ್ರಹಾಲಯ ದಿನವು ನಮ್ಮ ಪರಂಪರೆಯನ್ನು ಕಾಪಾಡುವ ಜವಾಬ್ದಾರಿಯನ್ನು ನೆನಪಿಸುತ್ತದೆ. ಇತಿಹಾಸವನ್ನು ಜೀವಂತವಾಗಿ ಉಳಿಸಿರುವ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣರ ಕಾರ್ಯ ನಿಜಕ್ಕೂ ಶ್ಲಾಘನೀಯ. ಹಿರಿಯ ದಂಪತಿಯ ಇಂತಹ ಪರಂಪರೆ ಸಂರಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದೆ.

-ಪುತ್ತರಿರ ಕರುಣ್ ಕಾಳಯ್ಯ