ಮಡಿಕೇರಿ,ಮೇ.೧೬: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ‘ಕುಟುಂಬ-೨೦೨೬’ ಕ್ರೀಡಾ ಹಬ್ಬಕ್ಕೆ ತೆರೆ ಬಿದ್ದಿದ್ದು, ಕ್ರಿಕೆಟ್ ಪಂದ್ಯಾವಳಿಯಲ್ಲಿ ಪರ್ಲಕೋಟಿ ಕುಟುಂಬ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಚೆರಿಯಮನೆ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಕಳೆದ ೧೫ದಿನಗಳಿಂದ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕುಟುಂಬವಾರು ಕ್ರಿಕೆಟ್ ಹಬ್ಬದ ಅಂತಿಮ ಪಂದ್ಯಾಟ ಇಂದು ನಡೆಯಿತು. ೨೧೬ ಕುಟುಂಬಗಳ ನಡುವೆ ಸೆಣಸಾಟದ ಬಳಿಕ ಅಂತಿಮ ಹಂತಕ್ಕೆ ಪ್ರವೇಶ ಪಡೆದ ಚೆರಿಯಮನೆ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ ೬ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ಕೇವಲ ೩೮ ರನ್ ಮಾತ್ರ ಗಳಿಸಲು ಶಕ್ತವಾಯಿತು. ಉತ್ತರವಾಗಿ ಆಡಿದ ಪರ್ಲಕೋಟಿ ತಂಡ ಕೇವಲ ೩.೫ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ೪೧ ರನ್ ಗಳಿಸಿ ವಿಜಯಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡಿತು. ರಕ್ಷಿತ್ ಪರ್ಲಕೋಟಿ ೨ ವಿಕೆಟ್ ಕಬಳಿಸಿ ಗಮನ ಸೆಳೆದರು.

ಸೆಮಿಫೈನಲ್

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೆರಿಯಮನೆ ತಂಡ ೨ ವಿಕೆಟ್‌ಗೆ ೬೫ ರನ್ ಗಳಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿ ಕೊನೆಯ ಹಂತದವರೆಗೂ ಪ್ರೇಕ್ಷಕರನ್ನು ತುದಿಕಾಲಿನಲ್ಲಿ ನಿಲ್ಲುವಂತೆ ಮಾಡಿತು. ೫ ವಿಕೆಟ್ ಕಳೆದುಕೊಂಡು ಕುಡೆಕಲ್ಲು ತಂಡ ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸಿತಾದರೂ ಅಂತಿಮವಾಗಿ ೬೨ ರನ್ ಗಳಿಸಿ ೩ ರನ್‌ಗಳ ಅಂತರದಿAದ ಸೋಲನುಭವಿಸಿತು. ಚೆರಿಯಮನೆ ನಯನ್ ೬ ಸಿಕ್ಸರ್, ೧ ಬೌಂಡರಿ ಸಹಿತ ಔಟಾಗದೇ ೪೬ ರನ್ ಬಾರಿಸಿದರು.

ಮತ್ತೊಂದು ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ಲಕೋಟಿ ತಂಡ ಎಡಿಕೇರಿ ತಂಡದ ವಿರುದ್ಧ ೨ ವಿಕೆಟ್‌ಗೆ ಭರ್ಜರಿ ೧೦೧ ರನ್‌ಗಳನ್ನು ಕಲೆ ಹಾಕಿತು. ಉತ್ತರವಾಗಿ ಆಡಿದ ಎಡಿಕೇರಿ ತಂಡ ೨ ವಿಕೆಟ್ ಕಳೆದುಕೊಂಡು ಕೇವಲ ೪೦ ರನ್ ಮಾತ್ರ ಗಳಿಸಿ ೬೧ ರನ್‌ಗಳ ಬಾರೀ ಅಂತರದಿAದ ಸೋಲನುಭವಿಸಿತು. ದರ್ಶನ್ ಪರ್ಲಕೋಟಿ ೧೯ ಎಸೆತದಲ್ಲಿ ೬ ಸಿಕ್ಸರ್ ಹಾಗೂ ೧ ಬೌಂಡರಿ ಸಿತ ೪೫ ರನ್ ಬಾರಿಸಿದರು. ಮೂಡಗದ್ದೆ ವಿನೋದ್ ಹಾಗೂ ಚೋಂಡಿರ ಲಿಖಿತ್ ವೀಕ್ಷಕ ವಿವರಣೆ ನೀಡಿದರು.