ಪಾಲಿಬೆಟ್ಟ, ಮೇ ೧೬: ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸೇವಾ ಮನೋಭಾವದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕರು ಮತ್ತು ಶಿಕ್ಷಣ ತಜ್ಞರಾದ ಡಾ. ಕೆ.ಪಿ. ಪುತ್ತೂರಾಯ ಸಲಹೆ ನೀಡಿದರು.

ಪಾಲಿಬೆಟ್ಟ ಲಯನ್ಸ್ ಕ್ಲಬ್‌ನ ಸುವರ್ಣ ಸಂಭ್ರಮದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಫಲಾಪೇಕ್ಷ್ಷೆ ಇಲ್ಲದೆ ಪ್ರಾಮಾಣಿಕತೆಯಿಂದ ಸೇವಾ ಮನೋಭಾವದೊಂದಿಗೆ ನಿರಂತರ ಸಮಾಜ ಸೇವೆಯಲ್ಲಿ ಲಯನ್ಸ್ ಸಂಸ್ಥೆ ತೊಡಗಿಸಿಕೊಂಡಿದೆ. ಸಂಸ್ಥೆಯ ಪದಾಧಿಕಾರಿಗಳ ನಿರಂತರ ಪರಿಶ್ರಮದಿಂದ ೫೦ ವರ್ಷಗಳನ್ನು ಪೂರೈಸಿ ಸುವರ್ಣ ಸಂಭ್ರಮಕ್ಕೆ ಕಾಲಿಟ್ಟಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇರಳ ಮಟ್ಟನೂರು ಲಯನ್ಸ್ ಕ್ಲಬ್ ಅಧ್ಯಕ್ಷ ವಾಸು ತೋಟತ್ತಿಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪಾಲಿಬೆಟ್ಟ ಲಯನ್ಸ್ ಸಂಸ್ಥೆ ಕಳೆದ ೫೦ ವರ್ಷಗಳಿಂದಲೂ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಮಾದರಿ ಸಂಸ್ಥೆಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಮದನ್ ಮಾದಯ್ಯ ಮಾತನಾಡಿ, ಗ್ರಾಮೀಣ ಭಾಗದ ಸಂಸ್ಥೆಯಾದರೂ ಒಗ್ಗಟ್ಟಿನ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪದಾಧಿಕಾರಿಗಳ ಸೇವಾ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಎಸ್ ಸುಬ್ರಮಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಪದಾಧಿಕಾರಿಗಳ ಸಹಕಾರದೊಂದಿಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು ಆರೋಗ್ಯ ಕಾಳಜಿಗಾಗಿ ಹಲವಾರು ಶಿಬಿರಗಳನ್ನು ಆಯೋಜಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಸಹಕಾರ ನೆರವು ನೀಡಿದ್ದೇವೆ. ರೈತರ ಅನುಕೂಲಕ್ಕಾಗಿ ಶಿಬಿರಗಳನ್ನು ಆಯೋಜಿಸಿ ಪರಿಸರ ಕಾಳಜಿಗಾಗಿ ಜಾಗೃತಿ ಕಾರ್ಯಕ್ರಮಗಳು, ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದ್ದು ಈ ಭಾಗದ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಲಯನ್ಸ್ ಕ್ಲಬ್ ವತಿಯಿಂದ ಪಾಲಿಬೆಟ್ಟ ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಪಿ.ಎಸ್ ಸುಬ್ರಮಣಿ ಅವರನ್ನು ವಿಸನ್ಮಾನಿಸಿ ಗೌರವಿಸಲಾಯಿತು.

ಪಾಲಿಬೆಟ್ಟ ಲಯನ್ಸ್ ಕ್ಲಬ್‌ನಲ್ಲಿ ಹಲವು ವರ್ಷಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರು ಹಾಗೂ ಗಣ್ಯರು, ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು.

ಈ ಸಂದರ್ಭ ಪಾಲಿಬೆಟ್ಟ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಬಿ ಸಧಾ ಕುಶಾಲಪ್ಪ, ಖಜಾಂಚಿ ಡಾ. ಭವಿಷ್ಯ ಕುಮಾರ್, ಲಯನ್ಸ್ ಮಲ್ಟಿಪಲ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಟವಿ ಸೇರಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಲಯನ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು. ಲಯನ್ಸ್ ಕ್ಲಬ್‌ನ ಸುಬ್ರಮಣಿ ಸ್ವಾಗತಿಸಿ, ಭವಿಷ್ಯ ಕುಮಾರ್ ವಂದಿಸಿ, ಕನಿಕಾ ಅಯ್ಯಪ್ಪ ಹಾಗೂ ಪುಷ್ಪಾ ಸುಬ್ಬಯ್ಯ ನಿರೂಪಿಸಿದರು.