ಮಡಿಕೇರಿ, ಮೇ ೧೫: ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ತಡೆಗೋಡೆ, ಚರಂಡಿ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಡಿಕೇರಿ ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಡಿಕೇರಿ ನಗರದ ಅಭಿವೃದ್ಧಿಗೆ ಪ್ರಥಮ ಆದ್ಯತೆ ಮೇಲೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದರು.

ಈಗಾಗಲೇ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅದೇ ರೀತಿ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚುವುದು, ಹಲವು ಕಡೆಗಳಲ್ಲಿ ರಸ್ತೆ ನಿರ್ಮಿಸುವುದು, ಅಗತ್ಯವಿರುವ ಕಡೆ ತಡೆಗೋಡೆ ನಿರ್ಮಾಣ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕರು ವಿವರಿಸಿದರು.

ನಗರಸಭೆ ಅಧ್ಯಕ್ಷೆ ಪಿ .ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪೌರಾಯುಕ್ತ ಹೆಚ್.ಆರ್. ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಅರುಣ್ ಶೆಟ್ಟಿ, ಶಾರದ ನಾಗರಾಜು, ನಗರಸಭೆ ಸದಸ್ಯರು ಇತರರು ಇದ್ದರು.

ಕಾಮಗಾರಿಗಳ ವಿವರ

ಅಬ್ಬಿಪಾಲ್ಸ್ ರಸ್ತೆ ಅಭಿವೃದ್ಧಿ (ರೂ.೧೮ ಲಕ್ಷ), ಗೌಳಿಬೀದಿ ರಸ್ತೆ (೨೮ ಲಕ್ಷ), ಗೌಡ ಸಮಾಜದ ಚೈನ್‌ಗೇಟ್‌ವರೆಗೆ ರಸ್ತೆ ಅಭಿವೃದ್ಧಿ (೨೦ ಲಕ್ಷ), ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ಮೋರಿ ಹಾಗೂ ರಸ್ತೆ ಅಭಿವೃದ್ಧಿ (೨೭ ಲಕ್ಷ), ಸಂತ ಜೋಸೆಫರ ಶಾಲೆಗೆ ಹೋಗುವ ರಸ್ತೆ ಅಭಿವೃದ್ಧಿ (೧೭ ಲಕ್ಷ), ಕ್ರಿಸ್ಟಲ್ ಹಾಲ್ ಮುಂಭಾಗ ಹಾದು ಹೋಗುವ ರಸ್ತೆ ಅಭಿವೃದ್ಧಿ (೧೦ ಲಕ್ಷ), ಕೊಡವರ ರುದ್ರಭೂಮಿಗೆ ಹೋಗುವ ರಸ್ತೆ ಅಭಿವೃದ್ಧಿ (೫ ಲಕ್ಷ), ವಾರ್ಡ್ ಸಂಖ್ಯೆ -೪ ಬ್ಲಾಕ್ ಸಂಖ್ಯೆ ೨೪ ರಲ್ಲಿ ಶರೀಫ್ ಮತ್ತು ಸಲೀಂ ಮನೆಯ ಮುಂಭಾಗದಲ್ಲಿ ತಡೆಗೋಡೆ ನಿರ್ಮಾಣ (೧೫ ಲಕ್ಷ), ವಾರ್ಡ್ ಸಂಖ್ಯೆ ೬, ಬ್ಲಾಕ್ ಸಂಖ್ಯೆ ೨೩ ರಲ್ಲಿ ನೇತಾಜಿ ಜಂಕ್ಷನ್ ಹತ್ತಿರ ರಾಘವೇಂದ್ರ ದೇವಾಲಯದ ರಸ್ತೆ ಬದಿಯಲ್ಲಿ ಅಯ್ಯಪ್ಪ ಹಾಗೂ ಮಾದಪ್ಪ ಅವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ತಡೆಗೋಡೆ ನಿರ್ಮಾಣಕ್ಕೆ (೧೦ ಲಕ್ಷ), ವಾರ್ಡ್ ಸಂಖ್ಯೆ ೯, ಬ್ಲಾಕ್ ಸಂಖ್ಯೆ ೧ ರಲ್ಲಿ ಮಲ್ಲಿಕಾರ್ಜುನ ನಗರದ ಅದ್ದೂರು ಅವರ ಮನೆ ಮುಂಭಾಗದಲ್ಲಿ ತಡೆಗೋಡೆ ನಿರ್ಮಾಣ (೫ ಲಕ್ಷ), ವಾರ್ಡ್ ಸಂಖ್ಯೆ ೧೩, ಬ್ಲಾಕ್ ಸಂಖ್ಯೆ ೧೮ ರಲ್ಲಿ ಲತಾ ರವಿ ಅವರ ಮನೆಯ ಹತ್ತಿರ ತಡೆಗೋಡೆ ನಿರ್ಮಾಣ ಕಾಮಗಾರಿ (೧೦ ಲಕ್ಷ), ವಾರ್ಡ್ ನಂ. ೨೨, ಬ್ಲಾಕ್ ಸಂಖ್ಯೆ ೧೬ ರಲ್ಲಿ ರೋಸ್ನಿ ಕಾವೇರಪ್ಪ ಅವರ ಮನೆ ಮುಂಭಾಗ ತಡೆಗೋಡೆ ನಿರ್ಮಾಣ ಕಾಮಗಾರಿ (೧೫ ಲಕ್ಷ), ವಾರ್ಡ್ ಸಂಖ್ಯೆ ೧೫, ಬ್ಲಾಕ್ ಸಂಖ್ಯೆ ೧೩ ರಲ್ಲಿ ರೆಡ್‌ಫರ್ನ್ ಹತ್ತಿರ ತಡೆಗೋಡೆ ನಿರ್ಮಾಣ ಕಾಮಗಾರಿ (೧೫ ಲಕ್ಷ), ವಾರ್ಡ್ ಸಂಖ್ಯೆ ೧೭, ಬ್ಲಾಕ್ ಸಂಖ್ಯೆ ೯ ರಲ್ಲಿ ರೈಸ್‌ಮಿಲ್ ಹಿಂಭಾಗ ಮತ್ತು ಕುಮಾರ ಅವರ ಮನೆ ಮುಂಭಾಗ ತಡೆಗೋಡೆ ನಿರ್ಮಾಣ ಕಾಮಗಾರಿ(೫ ಲಕ್ಷ ರೂ), ವಾರ್ಡ್ ಸಂಖ್ಯೆ ೨೩, ಬ್ಲಾಕ್ ಸಂಖ್ಯೆ ೧೯ ರಲ್ಲಿ ಹಿರೇ ಅವರ ಮನೆಯ ಹಿಂಭಾಗ ತಡೆಗೋಡೆ ನಿರ್ಮಾಣ ಕಾಮಗಾರಿ (೧೦ ಲಕ್ಷ ರೂ.) ಒಟ್ಟು ಸುಮಾರು ೨೭೨ ಲಕ್ಷ ರೂ.ಗಳ ಕಾಮಗಾರಿಗೆ ಶಾಸಕರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.