ಮಡಿಕೇರಿ, ಮೇ ೧೫: ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡೀಸಲ್ ದರವನ್ನು ಹೆಚ್ಚಳ ಮಾಡಿದ್ದು, ತಾ. ೧೫ ರಿಂದಲೇ ಹೊಸ ದರ ಜಾರಿಗೆ ಬಂದಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಇಂಧನ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದ್ದು, ಇದೀಗ ಕೇಂದ್ರ ದರ ಹೆಚ್ಚಿಸಿರುವುದು ಬಹುತೇಕ ಹಲವು ವ್ಯವಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ ರೂ. ೩.೨೬ ಹಾಗೂ ಡೀಸೆಲ್‌ಗೆ ರೂ. ೫.೨೬ ರಷ್ಟು ಹೆಚ್ಚಳವಾಗಿದೆ. ಪೆಟ್ರೋಲ್ ಪ್ರೀಮಿಯರ್ ಧಾರಣೆ ರೂ. ೫.೨೬ ಹಾಗೂ ಡೀಸೆಲ್ ಗ್ರೀನ್‌ಗೂ ರೂ. ೩.೧೧ ರಷ್ಟು ಏರಿಕೆಯಾಗಿದೆ. ನಿನ್ನೆಯ ತನಕ ಪೆಟ್ರೋಲ್‌ಗೆ ಲೀಟರ್‌ಗೆ ರಾಜ್ಯದಲ್ಲಿ ರೂ. ೧೦೩.೯೬ ದರ ಇದ್ದದು ಇದೀಗ ರೂ. ೧೦೭.೨೨ ಹಾಗೂ ಡೀಸೆಲ್‌ಗೆ ರೂ. ೯೨.೦೫ ಇದ್ದದು ರೂ. ೯೫.೧೬ ರಷ್ಟು ತುಟ್ಟಿಯಾಗಿದೆ. ನಯಾರಾ, ಶೆಲ್ ರಿಲೆಯನ್ಸ್ನಂತಹ ಖಾಸಗಿ ಕಂಪೆನಿಗಳಲ್ಲಿನ ದರ ಇನ್ನೂ ಹೆಚ್ಚಳವಾಗಲಿದೆ.
ಇದು ದೇಶವ್ಯಾಪಿಯಾಗಿ ಏರಿಕೆಯಾಗಿರುವ ದರವಾಗಿದೆ. ಇನ್ನು ರಾಜ್ಯ ಸರಕಾರ ತನಗಿರುವ ಅಧಿಕಾರದಂತೆ ಪೆಟ್ರೋಲ್, ಡೀಸೆಲ್ ಮೇಲೆ ಇನ್ನಷ್ಟು ತೆರಿಗೆ ವಿಧಿಸಿದಲ್ಲಿ ಧಾರಣೆ ಮತ್ತೂ ಹೆಚ್ಚಾಗಲಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಹಿಂದೆ ರಾಜ್ಯದಲ್ಲಿ ದರ ಏರಿಕೆ ಸಂದರ್ಭ ಜನರ ವಿರೋಧ ಎದುರಾಗಿದ್ದು, ಕರ್ನಾಟಕದಲ್ಲಿ ಇದನ್ನು ಹಿಂಪಡೆಯಲಾಗಿತ್ತು. ಕರ್ನಾಟಕ ಹಾಗೂ ನೆರೆರಾಜ್ಯ ತಮಿಳುನಾಡಿನಲ್ಲಿ ಅಲ್ಲಿನ ರಾಜ್ಯ ಸರಕಾರ ದರ ಹೆಚ್ಚಳ ಮಾಡಿರಲಿಲ್ಲ. ಆದರೆ ಕೇರಳ ರಾಜ್ಯದಲ್ಲಿ ಮಾತ್ರ ದರವನ್ನು ರಾಜ್ಯ ಸರಕಾರ ಹೆಚ್ಚಿಸಿತ್ತು. ಇದೀಗ ಕೇರಳದಲ್ಲಿ ಕರ್ನಾಟಕಕ್ಕೆ ಹೋಲಿಸಿದರೆ, ದರ ಮತ್ತಷ್ಟು ಹೆಚ್ಚಿದೆ. ಈ ರಾಜ್ಯದಲ್ಲಿ ಪೆಟ್ರೋಲ್‌ಗೆ ನಿನ್ನೆ ೧೦೭.೩೮ ರಷ್ಟಿದ್ದ ದರ ಇಂದು ರೂ. ೧೧೦.೩೬ ಹಾಗೂ ಡೀಸೆಲ್‌ಗೆ ೯೬.೨೬ ರಷ್ಟಿದ್ದ ದರ ಇದೀಗ ರೂ. ೯೯.೩೫ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಈ ಹಿಂದೆ ಪೆಟ್ರೋಲ್ - ಡೀಸೆಲ್ ಹೆಚ್ಚಳ ಮಾಡಿದ್ದ ಸಂದರ್ಭ ಅಲ್ಲಿನ ವಾಹನ ಮಾಲೀಕರು ಕರ್ನಾಟಕ ತಮಿಳುನಾಡು ಗಡಿ ಪ್ರದೇಶದಲ್ಲಿನ ಬಂಕ್‌ಗಳಿAದ ಹೆಚ್ಚಾಗಿ ಇಂಧನ ತುಂಬಿಸಿಕೊಳ್ಳುತ್ತಿದ್ದರು. ಅಲ್ಲದೆ ಕೇರಳದ ಸರಕಾರಿ ಬಸ್‌ಗಳು ಕೂಡ ಕೆಲವಾರು ಸಂದರ್ಭದಲ್ಲಿ ಕರ್ನಾಟಕ - ತಮಿಳುನಾಡು ರಾಜ್ಯದ (ಗಡಿಭಾಗ) ಬಂಕ್‌ಗಳನ್ನು ಅವಲಂಬಿಸುತ್ತಿದ್ದುದು ಕಂಡು ಬರುತ್ತಿತ್ತು ಎಂದು ಪೆಟ್ರೋಲ್ ಬಂಕ್ ಉದ್ಯಮಿ ಕೊಲ್ಲಿರ ಉಮೇಶ್ ಅವರು ತಮ್ಮ ಅನುಭವ ಹಂಚಿಕೊAಡಿದ್ದಾರೆ. ಇದೀಗ ಕೇಂದ್ರ ದರ ಹೆಚ್ಚಳ ಮಾಡಿರುವುದರಿಂದ ಕರ್ನಾಟಕ ಸರಕಾರ ಮುಂದೇನು ಮಾಡಲಿದೆ ಎಂದು ಕಾದುನೋಡುವಂತಾಗಿದೆ ಎಂದು ಉಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.