ಮಡಿಕೇರಿ, ಮೇ ೧೪ : ನಿವೇಶನಕ್ಕಾಗಿ ಒತ್ತಾಯಿಸಿ ಕಳೆದ ೧೩ ದಿನಗಳಿಂದ ಕುಂಬೂರಿನಲ್ಲಿ ಹೋರಾಟ ನಡೆಸುತ್ತಿದ್ದು, ನಮ್ಮ ನ್ಯಾಯಯುತ ಬೇಡಿಕೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಗಣಿಸಿ ಸೂಕ್ತ ಕ್ರಮವಹಿಸಿ ನಿವೇಶನ ಮಂಜೂರು ಮಾಡುವಂತೆ ಬಹುಜನ ಕಾರ್ಮಿಕ ಸಂಘ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜೆ. ಶಿವಪ್ಪ, ಕುಂಬೂರಿನ ಲಕ್ಕೇರ ಪೈಸಾರಿ ಜಾಗದಲ್ಲಿ ಸಂಘಟನೆಯಿAದ ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವಂತೆ ಕಳೆದ ೧೩ ದಿನಗಳಿಂದ ಪ್ರತಿಭಟನೆ ಕೈಗೊಂಡಿದ್ದು, ಇದುವರೆಗೂ ಸೂಕ್ತ ಸ್ಪಂದನ ದೊರಕ್ಕಿಲ್ಲ. ಈಗಾಗಲೇ ೬೦೦ ಕುಟುಂಬಗಳ ಸಾವಿರಾರು ಮಂದಿ ಇಲ್ಲಿ ಹೋರಾಟ ನಡೆಸುತ್ತಿದ್ದಾರೆ. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಮಾದಾಪುರ, ಸುಂಟಿಕೊಪ್ಪ, ಗರಗಂದೂರು, ಕೆದಕಲ್ ಇನ್ನಿತರ ವ್ಯಾಪ್ತಿಯ ನಿವಾಸಿಗಳು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಎಐಟಿಯುಸಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಅವರು ಕುಂಬೂರಿನಲ್ಲಿ ಹೋರಾಟ ನಡೆಸುವವರಿಗೆ ಜಾಗ ನೀಡಬಾರದು. ಕೇವಲ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರಿಗೆ ಜಾಗ ಒದಗಿಸಬೇಕು ಎಂದು ನೀಡಿರುವ ಹೇಳಿಕೆ ಖಂಡನೀಯ. ನಾವು ಜಾಗ ಗುರುತಿಸಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲಿನ ನಿವಾಸಿಗಳಿಗೂ ಜಾಗ ಗುರುತಿಸಿ ನೀಡಲಿ. ಅದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದು ಹೇಳಿದರು.

ಸಂಘಟನೆಯ ತಾಲೂಕು ಕಾರ್ಯದರ್ಶಿ ವಿ. ಜಾನಕಿ ಮಾತನಾಡಿ, ಅಧಿಕಾರಿಗಳು, ಶಾಸಕರು ಸ್ಥಳಕ್ಕಾಗಮಿಸಿ ನಮ್ಮ ಸಮಸ್ಯೆಯನ್ನು ಆಲಿಸಬೇಕು. ಹೋರಾಟವನ್ನು ಅಣಕಿಸುವವರ ಮಾತಿಗೆ ಮನ್ನಣೆ ನೀಡಬಾರದು. ಸೂಕ್ತ ಕ್ರಮವಹಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು,

ಗೋಷ್ಠಿಯಲ್ಲಿ ಸುಂಟಿಕೊಪ್ಪ ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಟಿ.ಎ. ಜಾನ್ಸಿ, ಹೋಬಳಿ ಅಧ್ಯಕ್ಷ ಹೆಚ್.ಬಿ. ಮುತ್ತ, ಕಾರ್ಯದರ್ಶಿ ಕೆ.ಎನ್. ಗೀತಾ, ಸಹಕಾರ್ಯದರ್ಶಿ ಆರ್. ಸುಂದರಿ ಹಾಜರಿದ್ದರು.