ವೀರಾಜಪೇಟೆ, ಮೇ ೧೨: ಇಲ್ಲಿಗೆ ಸಮೀಪದ ಬಾಳುಗೋಡು ಗ್ರಾಮದ ಶ್ರೀ ಅಗ್ನಿ ಚಾಮುಂಡಿ ದೇವಾಲಯದಲ್ಲಿ ಶ್ರೀ ಅಗ್ನಿ ಚಾಮುಂಡಿ ದೇವರ ೩೨ನೇ ವಾರ್ಷಿಕ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.

ಗಣಪತಿ ಹೋಮ ದೊಂದಿಗೆ ವಾರ್ಷಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ದೇವರ ದರ್ಶನ ಹಾಗೂ ಚಂಡೆಮೇಳದೊAದಿಗೆ ತಕ್ಕರ ಮನೆಯಿಂದ ದೇವರ ಭಂಡಾರ ತರಲಾಯಿತು. ಬಳಿಕ ನಾಗ, ಗುಳಿಗ, ಚಾಮುಂಡಿ ದೇವರಿಗೆ ಹಾಲಿನ ಅಭಿಷೇಕ ಹಾಗೂ ಅಲಂಕಾರ ಮಾಡಲಾಯಿತು. ಬಳಿಕ ಚಾಮುಂಡೇಶ್ವರಿಗೆ ಮಹಾಪೂಜೆ ನಡೆದು ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಕೊಟ್ಟಿ ಹಾಡುವುದು, ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಿದ ನಂತರ ಕುಟ್ಟಿಚಾತ, ಕಾಲಬೈರವ, ಕರಿವಾಳ್ ಭಗವತಿ ಮತ್ತು ನುಚ್ಚುಟ್ಟಿ, ವಿಷ್ಣುಮೂರ್ತಿ, ಗುಳಿಗ, ಚಾಮುಂಡಿ ನಡೆಯಿತು. ಈ ಸಂದರ್ಭ ಭಕ್ತಾಧಿಗಳಿಂದ ಹರಕೆ ಒಪ್ಪಿಸಿದರು. ಎರಡು ದಿನಗಳ ಕಾಲ ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯವರು, ತಕ್ಕ ಮುಖ್ಯಸ್ಥರು, ಊರಿನವರು ಇದ್ದರು.