ಶನಿವಾರಸಂತೆ, ಮೇ. ೧೩: ಪಟ್ಟಣದ ಗುಂಡೂರಾವ್ ಬಡಾವಣೆಯ ಬಾಪೂಜಿ ವಿದ್ಯಾಸಂಸ್ಥೆ ಹತ್ತಿರದ ಶ್ರೀವೀರ ಪಂಚಮ ಶನೇಶ್ಚರ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ೧೧ ನೇ ವರ್ಷದ ಜಾತ್ರಾ ಮಹೋತ್ಸವ ತಾ.೧೫ ಮತ್ತು ೧೬ ರಂದು ನಡೆಯಲಿದೆ. ತಾ.೧೫ ರ ಶುಕ್ರವಾರ ಬೆಳಿಗ್ಗೆ ೫-೪೭ ಗಂಟೆಗೆ ಗಂಗಾ ಸ್ನಾನ, ಪೂಜೆ ಸಲ್ಲಿಸಿ ಶ್ರೀವೀರ ಪಂಚಮ ಶನೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ೮-೩೦ ಕ್ಕೆ ೯ ಅಡಿ ಎತ್ತರದ ಶನೇಶ್ವರ ಸ್ವಾಮಿಯ ಬೃಹತ್ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು. ದೃಷ್ಠಿ ಪೂಜೆ, ಕಳಸ ಸ್ಥಾಪನೆ, ಶನೇಶ್ವರ ಹೋಮ ನೆರವೇರಲಿದೆ. ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿನಿಯೋಗವಾಗಿ ನಂತರ ಅಡ್ಡೆ ಕುಣಿಸುವಿಕೆ ನಡೆಯಲಿದೆ. ಮೇ. ೧೬ರ ಶನಿವಾರ ಬೆಳಿಗ್ಗೆ ೪ ಗಂಟೆಯಿAದ ಪುರೋಹಿತ ಮಂಜುನಾಥ್ ಶರ್ಮರ ನೇತೃತ್ವದಲ್ಲಿ ಶನೇಶ್ವರ ಹೋಮ, ದುರ್ಗಾ ಹೋಮ, ಗಾಯತ್ರಿ ಹೋಮ, ಗಣಹೋಮ ನೆರವೇರಲಿದೆ. ನಂತರ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸುತ್ತಾರೆ.ಮುಖ್ಯ ಅತಿಥಿಯಾಗಿ ತಹಶೀಲ್ದಾರ್ ಕೃಷ್ಣಮೂರ್ತಿ ಪಾಲ್ಗೊಳ್ಳುತ್ತಾರೆ.

ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ನಂತರ ಶ್ರೀ ದುರ್ಗಾಪರಮೇಶ್ವರಿ ಕುರುಹು ಶ್ರೀಚಕ್ರ ಸ್ಥಾಪನೆ ನಡೆದು ದೇವತೆ ಅಡ್ಡೆಯನ್ನು ಕುಣಿಸಲಾಗುವುದು. ಸಂಜೆ ೫-೩೦ ಗಂಟೆಗೆ ಕೊಣನೂರಿನ ಗೋಲ್ಡನ್ ರಥದಲ್ಲಿ ಶ್ರೀ ಶನೇಶ್ವರ ಉತ್ಸವಮೂರ್ತಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಶಕ್ತಿಪೀಠವನ್ನು ಕೂರಿಸಿ, ತರಿಕೇರೆ ದುಗ್ಲಾಪುರದ ಮಂಜುಶ್ರೀ ಮಹಿಳಾ ವೀರಗಾಸೆ, ಶ್ರೀಕಾಳಿ ನೃತ್ಯ, ಶಿವರುದ್ರ ಅಘೋರಿ ನೃತ್ಯ ವಾದ್ಯಗೋಷ್ಠಿಯ ಮೆರವಣಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಬನ್ನಿಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿ, ಮಂಡಳ ಪೂಜೆ ಹಾಗೂ ಸಿಡಿಮದ್ದಿನ ಪ್ರದರ್ಶನ ನಡೆಲಾಗುವುದು.

ನಂತರ ಬೈಪಾಸ್ ರಸ್ತೆಯ ಮುಖಾಂತರ ಗುಂಡೂರಾವ್ ಬಡಾವಣೆಗಾಗಿ ದೇವಸ್ಥಾನ ಸನ್ನಿಧಾನಕ್ಕೆ ತೆರಳುವುದು. ರಾತ್ರಿ ೧೦ ಗಂಟೆಗೆ ಬೆಂಗಳೂರು ಗ್ರಾಮಾಂತರದ ಶ್ರೀ ಛಾಯನಂದನ ಕಲಾ ತಂಡದವರಿAದ ಶ್ರೀ ರಾಜ ವಿಕ್ರಮಾದಿತ್ಯ (ಶಕಟಾದ್ರಿ ಶನಿಪ್ರಭಾವ) ಹರಿಕಥೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅರ್ಚಕ ಲೋಕೇಶ್ ಮಾಹಿತಿ ನೀಡಿದ್ದಾರೆ.