ಯಾವ ನೆಲದಲ್ಲಿ ಮಹಿಳೆ ಗೌರವಿಸಲ್ಪಡುವುದಿಲ್ಲವೊ... ಯಾವ ದೇಶದಲ್ಲಿ ಮಹಿಳೆಗೆ ಗೌರವ ಸಿಕ್ಕುವುದಿಲ್ಲವೋ. ಯಾವ ಮಣ್ಣಿನಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತದೆಯೋ ಅಂಥ ಸಂದರ್ಭಗಳಲ್ಲಿ ಅಸಹಾಯಕ ಮಹಿಳೆಯೂ ಮಾ ರೂಪ ತಳೆಯುತ್ತಾಳೆ. ಮತ ಎಂಬ ಬಹ್ಮಾಸ್ತçದ ಮೂಲಕವೇ ಮಾಟಿಯನ್ನು ಸಂರಕ್ಷಿಸಲು ಮುಂದಾಗುತ್ತಾಳೆ. ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆಯಾಗಿ ಕಂಗೊಳಿಸುತ್ತಿರುವವರು ಮಾನುಷ್ ಪ್ರಾಂತ್ಯದ ಮಹಿಳೆಯರು. ಈ ಮಹಿಳೆಯರ ಪೈಕಿ ಮೂವರು ಮಹಿಳೆಯರ ಸಾಧನೆ ಗಮನಿಸಿ, ಈ ಮೂವರು ಮಹಿಳೆಯರು ಕೇವಲ ಬಂಗಾಲದ ಸ್ತಿçÃಶಕ್ತಿಗಳಾಗಿ ಮಾತ್ರವಲ್ಲ, ಭಾರತದ ಸ್ತಿçÃಶಕ್ತಿಗೇ ಉದಾಹರಣೆಯಾಗಿ ಕಂಗೊಳಿಸುತ್ತಾರೆ.

ದೌರ್ಜನ್ಯಕ್ಕೊಳಗಾದವರ ಧ್ವನಿ... ರೇಖಾ ಪಾತ್ರ

ಪಶ್ಚಿಮಬಂಗಾಳ ರಾಜ್ಯ ದಲ್ಲಿನ ಪ್ರಮುಖ ಜಿಲ್ಲೆಗಳಲ್ಲಿ ಉತ್ತರ ೨೪ ಪರಗಣ ಜಿಲ್ಲೆ ಕೂಡ ಒಂದು. ಸುಂದರಬನ್ ಕಾಡುಗಳ ಮಧ್ಯೆ ಇರುವ ಹಲವು ದ್ವೀಪಗಳಲ್ಲಿ ಸಂದೇಶ್ ಖಲಿ ವಿಭಿನ್ನ ಕಾರಣದಿಂದ ಕುಖ್ಯಾತಿ. ಇಲ್ಲಿ ೨೦೨೪ರಲ್ಲಿ ಬಡ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಬಡವರ, ಜಮೀನು ಅತಿಕ್ರಮ ಮಾಡಿ ದೌರ್ಜನ್ಯ, ಹಿಂಸಾಚಾರ ಮಾಡಲಾಗಿತ್ತು. ಸ್ಥಳೀಯ ಮಹಿಳೆಯರಂತೂ ಶ್ರೀಮಂತರು ಮತ್ತು ಅವರ ಗೂಂಡಾಪಡೆಯ ಲೈಂಗಿಕ ದೌರ್ಜನ್ಯಕ್ಕೆ ನಲುಗಿಹೋಗಿದ್ದರು. ಅದೆಷ್ಟೋ ಮಹಿಳೆಯರು ಸಾವಿಗೆ ಶರಣಾಗಿದ್ದರು. ಇನ್ನಷ್ಟು ಮಹಿಳೆಯರು ನಿಗೂಢವಾಗಿ ನಾಪತ್ತೆಯಾಗಿದ್ದರು. ಹೊರಪ್ರಪಂಚದ ಪೊಲೀಸರಾಗಲೇ ಕಾನೂನು ಪಾಲಕರಾಗಲಿ ಇಲ್ಲಿಗೆ ತೆರಳಲೇ ಸಾಧ್ಯವಾಗದಷ್ಟು ಹದಗೆಟ್ಟ ಪರಿಸ್ಥಿತಿ ಇಲ್ಲಿನ ದ್ವೀಪಗಳಲ್ತಿ ಇತ್ತು. ಟಿಎಂಸಿ ಸಲಹಿದ್ದ ಕುಖ್ಯಾತ ಗೂಂಡಾ, ಶೇಖ್ ಶಾಜಹಾನ್ ಮಹಿಳೆಯರನ್ನು ಸದಾ ಬಯಸುತ್ತಿದ್ದ. ಆದಿವಾಸಿ ಮಹಿಳೆಯರು ಸುಂದರವಾಗಿರುವುದೇ ತಪ್ಪು ಎಂಬAತೆ ಅಂಥ ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಈತ ಬಳಸುತ್ತಿದ್ದ. ಬಡವರ ಜಮೀನು ಕಸಿದುಕೊಂಡು ಅಲ್ಲಿ ತನ್ನದೇ ಸಾಮ್ರಾಜ್ಯ ಸ್ಥಾಪಿಸುತ್ತಿದ್ದ ಶೇಖ್‌ಷಾಜಹಾನ್ ಎಂಬ ಹೆಸರು ಹೇಳಿದರೆ ಸಾಕು, ಮಹಿಳೆಯರು, ಯುವತಿಯರು ಕಂಗೆಡುತ್ತಿದ್ದರು. ನಾನೋರ್ವ ವಿಲನ್, ನನ್ನನ್ನು ಯಾರಿಂದಲೂ ಏನೂ ಮಾಡಲಾಗದು ಎಂದು ಸಾರ್ವಜನಿಕವಾಗಿಯೇ ಬೊಬ್ಬಿಡುತ್ತಿದ್ದ ಈ ಶೇಖ್.

ಈತನ ದೌರ್ಜನ್ಯವನ್ನು ಎಷ್ಟು ದಿನ. ಎಷ್ಟು ತಿಂಗಳು, ಎಷ್ಟು ವರ್ಷ ಸಹಿಸಿಕೊಳ್ಳಲು ಸಾಧ್ಯ ? ಕೊನೆಗೊಂದು ದಿನ ಶೋಷಿತ ಮಹಿಳೆಯರಿಗೆ ದೈವೀ ರೂಪದಲ್ಲಿ ಈಕೆ ಸಹಾಯಹಸ್ತ ಚಾಚಿದಳು. ರೇಖಾ ಪಾತ್ರ ಎಂಬ ಆದಿವಾಸಿ ಮಹಿಳೆ ಕೊನೆಗೂ ಧೈರ್ಯ ಮಾಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶೇಖ್ ವಿರುದ್ದ ದೂರು ದಾಖಲಿಸಿಯೇಬಿಟ್ಟಳು. ರೇಖಾಳದ್ದು ಹುಂಬತನ, ಭಂಡಧೈರ್ಯ, ಆಕೆಯ ಕಥೆ ಮುಗಿದೇ ಹೋಯಿತು ಎಂದು ಗ್ರಾಮಸ್ಥರು ಮಾತ್ರವಲ್ಲ. ಸ್ವತಃ ಆಕೆಯ ಕುಟುಂಬದವರೇ ಹೇಳಿಕೊಳ್ಳತೊಡಗಿದರು. ಆದರೆ ಪವಾಡ ದೃಶ್ಯ ಎಂಬAತೆ ರೇಖಾಳ ದೂರಿಗೆ ಮತ್ತಷ್ಟು ಮಹಿಳೆಯರ ದೂರುಗಳು ಸಲ್ಲಿಕೆಯಾದವು. ಪೊಲೀಸರು ಬೇಕೆಂದೇ ತನಿಖೆ ವಿಳಂಬ ಮಾಡಿದಾಗ ರೇಖಾ ಪಾತ್ರ ಸುಮ್ಮನಿರಲಿಲ್ಲ. ಇತರ ಶೋಷಿತ ಮಹಿಳೆಯರ ಪಡೆಯನ್ನೇ ಕಟ್ಟಿ ಶೇಖ್ ಷಾಜಹಾನ್ ವಿರುದ್ದ ರಸ್ತೆಗಿಳಿದು ಪ್ರತಿಭಟನೆ ಮಾಡತೊಡಗಿದಳು. ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಸರ್ಕಾರಿ ಪೋಷಿತ ಗೂಂಡಾಪಡೆ, ರೇಖಾ ಪಾತ್ರಾಳ ಹೋರಾಟವನ್ನು ಬಗ್ಗು ಬಡಿಯಲು ಸಾಕಷ್ಟು ಕಸರತ್ತು ನಡೆಸಿತ್ತು. ರೇಖಾ ಪಾತ್ರ ಸೇರಿದಂತೆ ಹೋರಾಟಗಾರ್ತಿಯರ ಮನೆಗಳ ಮೇಲೆ ಧಾಳಿಗಳಾದವು. ಹಲ್ಲೆಗಳು ಸಾಮಾನ್ಯ ಎಂಬAತಾದವು. ಇವರ ಕೃಷಿ ಜಮೀನನ್ನು ಶೇಖ್‌ನ ನಿಕಟವರ್ತಿಗಳಾದ ಶಿವಪ್ರಸಾದ್ ಹಜ್ರ ಮತ್ತು ಉತ್ತಮ್ ಸರ್ದಾರ್ ಎಂಬ ಗೂಂಡಾಗಳು ವಶಪಡಿಸಿಕೊಂಡರು.

ಆದರೆ, ಪಶ್ಚಿಮಬಂಗಾಳ ಸರ್ಕಾರ ಮೌನವಾಗಿದ್ದರೂ ಕೇಂದ್ರ ಸರ್ಕಾರದ ‘ಇಡಿ' ಇಲಾಖೆ ಸುಮ್ಮನಿರಲಿಲ್ಲ. ಶೇಖ್ ಶಾಜಹಾನ್ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆತನ ಅಕ್ರಮ ಆಸ್ತಿಗಳ ಬಗ್ಗೆ ತನಿಖೆ ಕೈಗೊಳ್ಳಲಾರಂಭಿಸುತ್ತದೆ. ನಾಪತ್ತೆಯಾದ ಶೇಖ್ ‘ಇಡಿ' ಭೀತಿ ತಾಳಲಾರದೇ ೨ ತಿಂಗಳ ಬಳಿಕ ಶರಣಾಗಿ ಜೈಲು ಸೇರುವಂತಾಗುತ್ತದೆ. ರೇಖಾ ಪಾತ್ರಳ ಹೋರಾಟಕ್ಕೆ ಕೊನೆಗೂ ಸೈದ್ಧಾಂತಿಕ ಜಯ ಲಭಿಸುತ್ತದೆ.

ಇದನ್ನೇ ಅಸ್ತçವಾಗಿಸಿಕೊಂಡ ಬಿಜೆಪಿ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ರೇಖಾಪಾತ್ರಳನ್ನು ಅಭ್ಯರ್ಥಿಯಾಗಿಸಿ ಕಣಕ್ಕಿಳಿಸುತ್ತದೆ. ಚುನಾವಣೆಯಲ್ಲಿ ರೇಖಾ ಕ್ಷೇತ್ರದ ಮುಸ್ಲಿಂ ಅಭ್ಯರ್ಥಿ ಎದುರು ಸೋಲು ಕಾಣುತ್ತಾಳೆ.

ಇದೀಗ ೨೦೨೬ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ತಂತ್ರ ಮಾಡುತ್ತದೆ. ರೇಖಾಳ ಜಿಲ್ಲೆಯ ಪಕ್ಕದ ಕ್ಷೇತ್ರವಾದ ಹಿಂಗಲ್ ಗಂಜ್ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡುತ್ತದೆ. ರೇಖಾ ಈ ಕ್ಷೇತ್ರದಲ್ಲಿ ಕಮಾಲ್ ಮಾಡುತ್ತಾಳೆ. ಮಹಿಳೆಯರು ರೇಖಾ ಎಂಬ ಹೋರಾಟಗಾರ್ತಿಯಲ್ಲಿ ತಮ್ಮನ್ನು ತಾವೇ ಕಾಣುತ್ತಾರೆ. ಹೀಗಾಗಿಯೇ ಈ ಬಾರಿ ರೇಖಾ ಅತ್ಯಧಿಕ ಮತಗಳನ್ನು ಪಡೆದು ಪಶ್ಚಿಮ ಬಂಗಾಳದ ವಿಧಾನಸಭೆಗೆ ಶಾಸಕಿಯಾಗಿ ಪ್ರವೇಶಿಸುತ್ತಾರೆ. ಮಂತ್ರಿಯಾಗುವ ಎಲ್ಲಾ ಸಾಧ್ಯತೆ ನಿಚ್ಚಳವಾಗಿದೆ. ಯಾವ ಮಹಿಳೆ ಶೋಷಣೆಯ ವಿರುದ್ಧ ಧ್ವನಿಯೆತ್ತಿದ್ದಳೋ, ಅಂಥ ಮಹಿಳೆಗೆ ಕ್ಷೇತ್ರದ ಇತರ ಮಹಿಳೆಯರ ಬೆಂಬಲ ದೊರಕಿದರೆ ಏನಾದೀತು ಎಂಬುದಕ್ಕೆ ರೇಖಾಪಾತ್ರ ಎಂಬ ಕೆಚ್ಚೆದೆಯ ಮಹಿಳೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.

ಹಾಂ ಮಹಿಳೆಯರನ್ನು ಲೈಂಗಿಕ ದೌರ್ಜನ್ಯ ಮಾಡಿ ಗಹಗಹಿಸುತ್ತಿದ್ದ ಗೂಂಡಾ ಪಡೆಯ ಕಥೆ.. ಅಂಥ ಗೂಂಡಾಗಳು ಆತ್ಮಹತ್ಯೆ ಮಾಡಿಕೊಳ್ಳುವುದೇ ಸದ್ಯದ ದಾರಿ. ಇಲ್ಲದೇ ಹೋದರೆ ಪೊಲೀಸರ ಗುಂಡಿಗೆ ಬಲಿಯಾಗುವುದು ಖಂಡಿತಾ ಎನ್ನುತ್ತದೆ ಆ ರಾಜ್ಯದ ವರದಿಗಳು.!

ಮಗಳ ಮೇಲೆ ಆಣೆ ಮಾಡಿದ್ದ ರತ್ನಾ ದೇಬ್ನಾಥ್

ಪಾನಿಹಾಟಿ ಎಂಬುದು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕೋತ್ತಾದಿಂದ ಕೇವಲ ೩೩ ಕಿ.ಮೀ.ದೂರದಲ್ಲಿರುವ ಮಡಿಕೇರಿಯಷ್ಟೇ ಪುಟ್ಟ ಊರು. ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಅಮ್ಮನ ಆಸೆ ಈಡೇರಿಸಿ ತಾನೂ ವೈದ್ಯೆಯಾಗಬೇಕೆಂಬ ಮಹದಾಸೆ ಹೊತ್ತು ಉತ್ತಮವಾಗಿ ವಿದ್ಯಾಭ್ಯಾಸ ಕಲಿಯುತ್ತಿದ್ದ ಆ ತರುಣಿಯ ಮೇಲೆ ಗೂಂಡಾಗಳು ಅತ್ಯಾಚಾರ ಮಾಡಿದ್ದಲ್ಲದೇ ಬರ್ಬರವಾಗಿ ಹತ್ಯೆಯನ್ನೂ ಮಾಡಿದರು. ಇಡೀ ಭಾರತ ಈ ಘಟನೆಯಿಂದ ತಲ್ಲಣಿಸಿತು. ವೈದ್ಯಕೀಯ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟಿಸಿದರು. ಮೊಂಬತ್ತಿ ಹಿಡಿದು ಕತ್ತಲಲ್ಲಿ ನ್ಯಾಯದ ಬೆಳಕನ್ನು ಹುಡುಕಿ ಹೋರಾಟ ಮಾಡಿದರು. ಎಲ್ಲರೂ ಎಚ್ಚರವಾದರೂ ಮಮತಾ ಬ್ಯಾನರ್ಜಿ ಸರ್ಕಾರ ಮಾತ್ರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಹೋರಾಟ ಮಾಡುತ್ತಿದ್ದವರ ಮೇಲೇ ಕೇಸ್ ದಾಖಲಿಸಿ ಜೈಲಿಗಟ್ಟುವ ಹೀನಾಯ ಕೆಲಸಕ್ಕೆ ಸರ್ಕಾರ ಮುಂದಾಯಿತು.

ಕೊಲೆಯಾದ ತನ್ನ ಮಗಳ ಪಾರ್ಥೀವ ಶರೀರದ ಮುಂದೆ ರೋಧಿಸುತ್ತಾ ಕುಳಿತ ಆಕೆಯ ಅಮ್ಮನ ಕಣ್ಣಲ್ಲಿ ರಕ್ತ ಹರಿದಿತ್ತು. ಮಗಳೇ ನಿನ್ನ ಹತ್ಯೆಕೋರರನ್ನು ಸದೆಬಡಿಯದೇ ನಾನಂತೂ ಸುಮ್ಮನಿರೊಲ್ಲ ಎಂದು ಮೌನವಾಗಿಯೇ ಪ್ರತಿಜ್ಞೆ ಮಾಡಿದ ಆ ಅಮ್ಮನ ಹೆಸರೇ ರತ್ನಾ ದೇಬ್ನಾಥ್.

ಈ ಬಾರಿ ಚುನಾವಣೆಯಲ್ಲಿ ರತ್ನಾ ದೇಬ್ನಾಥ್. ಮನೆ ಬಾಗಿಲು ತಟ್ಟಿದ ಬಿಜೆಪಿ. ನೀವೇ ನಮ್ಮ ಪಾಣಿಹಾಟಿ ಕ್ಷೇತ್ರದ ಅಭ್ಯರ್ಥಿ ಎಂದಿತು. ಅಕ್ಕಪಕ್ಕದ ಮನೆಯವರು ನಿಮಗೇ ನಮ್ಮೆಲ್ಲರ ಓಟ್ ಎಂದರು. ಊರಿನವರು ರತ್ನಾ ಪರ ಪ್ರಚಾರಕ್ಕೆ ನಿಂತರು. ಊರು ಪರವಾಗಿ ನಿಂತ ಮೇಲೆ ಕ್ಷೇತ್ರದ ಜನತೆ ಪರ ವಹಿಸಲು ಎಷ್ಟು ದಿನ ಬೇಕು. ಚುನಾವಣಾ ಫಲಿತಾಂಶ ಪ್ರಕಟವಾದಾಗ ಇದೇ ರತ್ನಾದೇಬ್ನಾಥ್ ಶಾಸಕಿಯಾಗಿ ಆಯ್ಕೆಯಾಗಿದ್ದರು. ಮಗಳ ಫೋಟೋದ ಮುಂದೆ ವಿಜಯದ ದಿನ ನಿಂತು ಕೈಮುಗಿದ ರತ್ನಾ ಹೇಳಿದ್ದೊಂದೇ.. ಮಗಳೇ ನ್ಯಾಯ ಕೊನೆಗೂ ಸಿಕ್ಕಿದೆ. ನಿನ್ನ ಆತ್ಮಕ್ಕೆ ಶಾಂತಿ ದೊರಕಲಿ. ನಿನಗೆ ಆದ ಸ್ಥಿತಿ ಈ ರಾಜ್ಯದಲ್ಲಿ ಮತ್ತೆ ಯಾವ ಹೆಣ್ಣುಮಗಳಿಗೂ ಆಗದಂತೆ ನೋಡಿಕೊಳ್ಳುವ ಹೊಣೆ ಇನ್ನು ನನ್ನದು..!

ಕಲಿತಾ ಮಾಂಜಿ- ಮನೆಗಳ ಸೇವೆ ಮಾಡಿದಾಕೆ...ಜನಗಳ ಸೇವೆಗೆ !

ಈಕೆಯ ಹೆಸರು ಕಲಿತಾ ಮಾಂಜಿ, ಹೆಸರಲ್ಲಿ ಮಾತ್ರ ಕಲಿತಾ ಇದೆಯೇ ವಿನಾ ಈಕೆ ಶಿಕ್ಷಣ ಕಲಿಯಲು ಶಾಲೆಯ ಮೆಟ್ಟಿಲು ಹತ್ತಿದವರೇ ಅಲ್ಲ. ಈಕೆಯ ವೃತ್ತಿ ? ಮನೆಮನೆಗಳಿಗೆ ತೆರಳಿ ಮುಸುರೆ ತಿಕ್ಕುವ ಮನೆಕೆಲಸ. ದಿನಕ್ಕೆ ೪ ಮನೆಗಳಿಗೆ ತೆರಳಿ ಕೆಲಸ ಮಾಡಿದರೂ ತಿಂಗಳಿಗೆ ಸಿಕ್ಕುತ್ತಿದ್ದುದು ೩ ಸಾವಿರ ರೂ. ಮಾತ್ರ, ಹಿಂದುಳಿದ ಜನಾಂಗದ ಈಕೆಯನ್ನೇ ಅಭ್ಯರ್ಥಿಯನ್ನಾಗಿಸುವ ದಿಟ್ಟತನ ತೋರಿದ ಬಿಜೆಪಿ ನೇತಾರರು, ಮುಸುರೆ ತಿಕ್ಕಿದ್ದು ಸಾಕು. ವಿಧಾನಸೆಭೆಗೆ ಬನ್ನಿ ಎಂದು ಅಸ್ಸಾಮು ಕ್ಷೇತ್ರದ ಅಭ್ಯರ್ಥಿಯಾಗಿ ಅವಕಾಶ ಕಲ್ಪಿಸಿತು. ಪ್ರಚಾರದಲ್ಲಿ ಭಾಷಣ ಮಾಡಿದ್ದಕ್ಕಿಂತ ಮನೆಯಲ್ಲಿ ಮಾತಾಡುವಂತೆ ಮತದಾರರ ಜತೆ ಸಹಜವಾಗಿಯೇ ಮಾತನಾಡಿದ ಕಲಿತಾ ಮಾಂಜಿ ಕೆಲವೇ ದಿನಗಳಲ್ಲಿ ತನ್ನದೇ ಬೆಂಬಲಿಗರ ಪಡೆ ಹೊಂದುವAತಾದಳು. ಈಕೆ ಎಲ್ಲಿ ಗೆಲ್ಲುತ್ತಾಳೆ ಎಂದು ಮೇಲ್ವರ್ಗದ ಜನ ಮೂಗುಮುರಿದರು. ಶ್ರೀಮಂತ ವರ್ಗ ಎಂಥ ಕಾಲ ಬಂತು. ಮನೆಕೆಲಸದವಳೂ ಚುನಾವಣೆಗೆ ನಿಲ್ಲುತ್ತಾಳೆ ಎಂದು ಮಾತಾಡಿಕೊಂಡರು. ಆದರೆ ಬಡವರ್ಗದವರು, ಹಿಂದುಳಿದ ಪಂಗಡವರು ಮಾಂಜಿ ಪರ ನಿಂತರು. ಫಲಿತಾಂಶ ಪ್ರಕಟವಾದಾಗ... ಅರೇ... ಮನೆಗಳಲ್ಲಿ ಮುಸುರೆ ತಿಕ್ಕುತ್ತಿದ್ದ ಮಾಂಜಿ... ಶಾಸಕಿಯಾಗಿಯೇಬಿಟ್ಟಿದ್ದಳು. ಮನೆಗಳ ಸೇವೆ ಮಾಡಿದಾಕೆ ಜನಗಳ ಸೇವೆ ಮಾಡಲು ವಿಧಾನಸಭೆ ಪ್ರವೇಶಿಸಿದ್ದಳು.! ಯಾರೆಲ್ಲ ಈಕೆಯನ್ನು ಟೀಕಿಸಿದ್ದರೋ.. ಅದೇ ಜನ ಈಗ ಹೇಳುತ್ತಿದ್ದಾರೆ... ವಾಂವ್... ಎಂಥ ಸಾಧನೆ... ಎಷ್ಟಾದರೂ ಈಕೆ ನಮ್ಮ ಪ್ರೀತಿಯ ಮಾಂಜಿಯಲ್ಲವೇ?!

ನೆನಪಿಡಿ.. ಮಮತಾ ಬ್ಯಾನರ್ಜಿ ಸರ್ಕಾರ ಮಹಿಳೆಯರನ್ನು ಕಡೆ ಗಾಣಿಸಿರಲಿಲ್ಲ. ಬದಲಿಗೆ, ಮಹಿಳೆಯರಿಗಾಗಿಯೇ ಲಕ್ಷಿ ಭಂಡಾರ್, ರೂಪಶ್ರೀ, ಕನ್ಯಾಶ್ರೀಯಂತಹ ಯೋಜನೆಗಳನ್ನು ಜಾರಿ ಮಾಡಿದ್ದರು. ಆದರೂ ನೆನಪಿಡಿ, ಯಾರಿಗೆ ಆದರೂ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಕೊಡುಗೆಗಳಿಗಿಂತ, ಹಣಕ್ಕಿಂತ ಮರ್ಯಾದೆ ದೊಡ್ಡದು ಸ್ವಾಭಿಮಾನ ಬಹಳ ದೊಡ್ಡದು. ಸಿಡಿದು ನಿಂತಾಗ ಆಕೆಯೊಳಗಿನ ಛಲ ಮತ್ತೂ ದೊಡ್ಡದು. ಈ ಮೂವರು ಮಹಿಳೆಯರ ಚುನಾವಣಾ ಸಾಧನೆ ಸ್ತಿçÃಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಬAಗಾಳದ ಮಹಿಳೆಯರು ದಶಕಗಳ ಕಾಲ ತಮ್ಮ ಮೇಲಿನ ದೌರ್ಜನ್ಯ, ದಬ್ಬಾಳಿಕೆಯನ್ನು ಮೌನವಾಗಿಯೇ ಸಹಿಸಿಕೊಂಡರು. ಚುನಾವಣಾ ದಿನಗಳಲ್ಲಿಯೂ ಮೌನವಾಗಿಯೇ ಇದ್ದರು.

ಮತದಾನಕ್ಕೂ ಅತ್ಯಧಿಕ ಸಂಖ್ಯೆಯಲ್ಲಿ ಶಾಂತಿಯುತವಾಗಿ ಮೌನವಾಗಿಯೇ ಸಾಗಿದರು. ಮತಯಂತ್ರದ ಮುಂದೆ ನಿಂತು ಕೊನೆಗೂ ಮಾತನಾಡಿದರು. ತಮ್ಮ ಮತಗಳ ಮೂಲಕ ಈ ಮಾತೆಯರು ಮೌನ ಮುರಿದು ಧ್ವನಿ ಎತ್ತಿದರು. ಆ ಧ್ವನಿಯೇ ಬಂಡಾಯದ ಧ್ವನಿಯಾಯಿತು. ಟಿಎಂಸಿಯ ಸದ್ದಡಗಿಸಿತು. ಗೂಂಡಾಗಳ ಪಲಾಯನಕ್ಕೆ ಕಾರಣವಾಯಿತು ಅಂಥ ಮಹಿಳಾ ಶಕ್ತಿಗೊಂದು ನಮನ.

ಕೊನೇ ಹನಿ : ಈ ಚುನಾವಣಾ ಫಲಿತಾಂಶದಲ್ಲಿ ಕಂಡುಬAದ ವಾಸ್ತವ ಏನೆಂದರೆ, ಭಾರತದಲ್ಲಿ ಎಲ್ಲಿಯೂ ಒಂದೇ ಪಕ್ಷದ ಹವಾ ಇಲ್ಲವೇ ಇಲ್ಲ. ಇಡೀ ದೇಶದಲ್ಲಿ ತನ್ನದೊಂದೇ ಪಕ್ಷ ಇದೆ ಎಂದು ಯಾರೂ ಅಹಂ ಪಡದಂತೆ ಮತದಾರ ತೀರ್ಪು ನೀಡಿದ್ದಾನೆ. ಪಶ್ಚಿಮ ಬಂಗಾಳದAಥ ಎಡಪಂಥೀಯರ ರಾಜ್ಯದಲ್ಲಿ ಹಿಂದುತ್ವವಾದಿ ಬಿಜೆಪಿ ಗೆ ಮತದಾರ ಒಲಿದಿದ್ದಾನೆ ಎನ್ನುವುದಕ್ಕಿಂತ ಆಡಳಿತಾರೂಢ ಟಿಎಂ.ಸಿ. ವಿರುದ್ದವಾಗಿ ಮತದಾರ ಬಿಜೆಪಿಗೆ ಮತ ನೀಡಿದ್ದಾನೆ ಎಂದೇ ವಿಶ್ಲೇಷಿಸಲಾಗುತ್ತದೆ. “ಅವರ ಮೇಲೆ ದ್ವೇಷವಿದೆ. ಹೀಗಾಗಿ ನಿನ್ನನ್ನು ಪ್ರೀತಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ'' ಎಂಬAತಿದೆ ಈ ತೀರ್ಪು.

ತಮಿಳುನಾಡಿನಂಥ ದ್ರಾವಿಡರ ನೆಲೆಯಲ್ಲಿ ಡಿಎಂ.ಕೆ., ಎಐಡಿಎಂಕೆಯ ಆಡಳಿತ, ಕಿತ್ತಾಟ ನೋಡಿ ರೋಸಿಹೋಗಿದ್ದ ಮತದಾರ ಹೊಸ ಅಲೆಯನ್ನು ಬಯಸಿ ಟಿವಿಕೆಯ ಲವಲವಿಕೆಯ ನವ ನಾಯಕ ವಿಜಯ್ ಪರ ವಾಲಿದ್ದಾರೆ. ಕೇರಳ ಮತ್ತೆ ತನ್ನ ಹಳೇ ಪಕ್ಷವನ್ನು ಅಪ್ಪಿಕೊಂಡಿದೆ. ತನಗೆ ಸೂಕ್ತ ಎಂದು ಕೇರಳದ ಮತದಾರ ಕಾಂಗ್ರೆಸ್ ಕೈ ಹಿಡಿದಿದ್ದರಲ್ಲಿ ಅಚ್ಚರಿಯೇನಿಲ್ಲ. ಬಿಜೆಪಿ ಕೇರಳದಲ್ಲಿ ಅರಳಲು ಸಾಕಷ್ಟು ವರ್ಷಗಳೇ ಬೇಕು. ಅಥವಾ ಅಂಥ ಸಾಧ್ಯತೆ ಕೂಡ ನಿಚ್ಚಳವಾಗಿ ಆ ರಾಜ್ಯದಲ್ಲಿ ಕಾಣಸಿಕ್ಕುವದು ಸಂಶಯವೇ. ಬಂಗಾಳ ಆರಿಸಿಕೊಂಡಿದ್ದು “ಬದಲಾವಣೆ”, ತಮಿಳುನಾಡು ಆರಿಸಿಕೊಂಡಿದ್ದು “ಬಂಡಾಯ” ಕೇರಳ ಆರಿಸಿಕೊಂಡಿದ್ದು “ಪಲ್ಲಟ” ಒಂದೇ ದೇಶವಾಗಿದ್ದರೂ. ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದರೂ ಪ್ರಕಟವಾಗಿದ್ದು ಸಂಪೂರ್ಣ ಭಿನ್ನ ತೀರ್ಪುಗಳು. ಇದೇ ಅಲ್ಲವೇ ಪ್ರಜಾಪ್ರಭುತ್ವದ ಚೆಲುವು. ಯಾರನ್ನು ಎಲ್ಲಿಡಬೇಕೋ ಅಲ್ಲಿಯೇ ಜಾಗ ತೋರಿಸುವ ಹಕ್ಕು ಮತದಾನದ ರೂಪದಲ್ಲಿ ಜನರ ಬಳಿಯಿರುತ್ತದೆ. ಅಂಥ ಹಕ್ಕು ಸುಭದ್ರವಾಗಿರುವವರೆಗೆ ಈ ದೇಶವೂ ಭದ್ರವಾಗಿರುತ್ತದೆ.

-ಅನಿಲ್ ಎಚ್.ಟಿ.,

ಮಡಿಕೇರಿ.