ಮಡಿಕೇರಿ, ಮೇ ೧೧: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ಕೊಡಗು ಜಿಲ್ಲಾಮಟ್ಟದ ಎ ಡಿವಿಷನ್ ಫುಟ್ಬಾಲ್ ಲೀಗ್ ಪಂದ್ಯಾಟ ತಾ. ೧೪ ರಿಂದ ೧೭ ರವರೆಗೆ ಅಮ್ಮತ್ತಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಪಂದಿಕAಡ ನಾಗೇಶ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು ಈ ಬಾರಿಯ ಲೀಗ್ ಪಂದ್ಯಾಟದಲ್ಲಿ ೧೦ ನೋಂದಾಯಿತ ತಂಡಗಳು ಭಾಗವಹಿಸಲಿದ್ದು, ಎರಡು ಗುಂಪುಗಳಲ್ಲಿ ತಲಾ ಐದು ತಂಡಗಳು ಆಡಲಿವೆ. ಪ್ರತಿ ತಂಡವು ನಾಲ್ಕು ಲೀಗ್ ಪಂದ್ಯಾಟ ಆಡಲಿದ್ದು, ಎರಡು ಗುಂಪುಗಳಲ್ಲಿ ಅಗ್ರ ಸ್ಥಾನಗಳಿಸುವ ತಲಾ ಎರಡು ತಂಡಗಳು ಸೆಮಿಫೈನಲ್ ಪ್ರವೇಶ ಮಾಡಲಿವೆ. ಪಂದ್ಯಾಟವನ್ನು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಹಾ ಪೋಷಕರಾದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಉದ್ಘಾಟಿಸಲಿದ್ದಾರೆ.

ಫೈನಲ್ ಪಂದ್ಯಾಟ ತಾ. ೧೭ ರಂದು ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಲೀಗ್ ಪಂದ್ಯಾವಳಿಯ ರೂಪುರೇಷೆ ಸಿದ್ಧಪಡಿಸಲು ನಡೆದ ಸಭೆಯಲ್ಲಿ ಕೆಡಿಎಫ್‌ಎ ಅಧ್ಯಕ್ಷ ಪಾಣತ್ತಲೆ ಜಗದೀಶ್, ಉಪಾಧ್ಯಕ್ಷ ಕ್ರಿಸ್ಟೋಫರ್, ಖಜಾಂಜಿ ದೀಪು ಮಾಚಯ್ಯ, ರಾಜ್ಯ ಪ್ರತಿನಿಧಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಬ್ರಿಜೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.