ಕುಶಾಲನಗರ, ಮೇ ೮: ೨೦೨೫-೨೬ ನೇ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಚಾಲನೆ ನೀಡಿದರು.

ಕುಶಾಲನಗರ ಪುರಸಭೆ ವ್ಯಾಪ್ತಿಯ ಸೋಮೇಶ್ವರ ದೇವಾಲಯದಿಂದ ಗುಂಡೂರಾವ್ ಬಡಾವಣೆಯ ಸಂಪರ್ಕ ರಸ್ತೆ ತನಕ ಒಂದು ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಒಟ್ಟು ೫.೫ ಕೋಟಿ ರೂ ವೆಚ್ಚದ ೧೧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಡಾ ಮಂತರ್ ಗೌಡ, ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿ ಜಿಲ್ಲೆಗೆ ೫೦ ಕೋಟಿ ಅನುದಾನ ಲಭಿಸಿದ್ದು, ಅದರಲ್ಲಿ ಕುಶಾಲನಗರ ಪಟ್ಟಣದ ಅಭಿವೃದ್ಧಿ ಕಾಮಗಾರಿಗೆ ೫.೫ ಕೋಟಿ ರೂ ಮೀಸಲಿರಿಸಲಾಗಿದೆ. ಪಟ್ಟಣದ ಸಂಪರ್ಕ ರಸ್ತೆಗಳು ಮತ್ತು ಸುತ್ತಮುತ್ತ ವ್ಯಾಪ್ತಿಯ ಬಡಾವಣೆಗಳ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದರು. ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕುಶಾಲನಗರ ಗೊಂದಿ ಬಸವನ ಹಳ್ಳಿ ದೇವಸ್ಥಾನದ ಕಮಾನು ಉದ್ಘಾಟನೆ, ರಸ್ತೆ ಕಾಮಗಾರಿ ಪುರಸಭೆ ವ್ಯಾಪ್ತಿಯ ಸಾಯಿ ಆಸ್ಪತ್ರೆಯ ಮುಂಭಾಗದ ರಸ್ತೆ ಅಭಿವೃದ್ಧಿ, ಕರಿಯಪ್ಪ ಬಡಾವಣೆಯ ರಸ್ತೆ ಕಾಮಗಾರಿ, ಹಿಂದು ರುದ್ರಭೂಮಿಗೆ ತೆರಳುವ ರಸ್ತೆ, ಅಭಿವೃದ್ಧಿ, ಹೌಸಿಂಗ್ ಬೋರ್ಡ್ ತೆರಳುವ ರಸ್ತೆ ಕಾಮಗಾರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಒತ್ತಿನಲ್ಲಿರುವ ಚರ್ಚ್ ತೆರಳುವ ಮಾರ್ಗ, ಉರ್ದು ಶಾಲೆ ಬಳಿ ರಸ್ತೆಯ ಅಭಿವೃದ್ಧಿ ಸೇರಿದಂತೆ ಸುಮಾರು ೧೧ ಕಡೆ ಶಾಸಕರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷÀ ಪ್ರಮೋದ್ ಮುತ್ತಪ್ಪ, ಸದಸ್ಯ ಸಜಿ, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಗಿರೀಶ್, ಇಂಜಿನಿಯರ್ ಅರ್ಬಸ್ ಅಹಮದ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪಕ್ಷದ ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಜಿ.ಆರ್. ಪುಷ್ಪಲತಾ, ಪ್ರಕಾಶ್, ಜಗದೀಶ್, ವಿ.ಎಸ್. ಆನಂದ್ ಕುಮಾರ್ ಗೋವಿಂದಪ್ಪ, ಹರೀಶ್, ದಿನೇಶ್ ಎಂ.ಕೆ., ಕೆ.ಎನ್. ಅಶೋಕ್, ನಂಜುAಡಸ್ವಾಮಿ, ಜಯಲಕ್ಷö್ಮಮ್ಮ, ವಿ.ಪಿ. ಸುಕೇಶ್ ಮತ್ತಿತರರು ಇದ್ದರು.