ಗೋಣಿಕೊಪ್ಪ ವರದಿ, ಮೇ ೭: ಅಖಿಲ ಅಮ್ಮ ಕೊಡವ ಸಮಾಜದ ಹಾಗೂ ಬಾನಂಡ ಒಕ್ಕ ಸಹಯೋಗದಲ್ಲಿ ಮಾಯªÄÄಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಬಾನಂಡ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಅಮ್ಮತ್ತೀರ ಒಕ್ಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್ನಲ್ಲಿ ಸೋಲನುಭವಿಸಿದ ಅಚ್ಚಿಯಂಡ ಒಕ್ಕ ರನ್ನರ್ ಅಪ್, ಹೆಮ್ಮಚ್ಚಿಮನೆ ಮೂರನೇ ತಂಡವಾಗಿ, ಅಣ್ಣೀರ ನಾಲ್ಕನೇ ತಂಡವಾಗಿ ಹೊರಹೊಮ್ಮಿತು.
ಫೈನಲ್ ಪಂದ್ಯದಲ್ಲಿ ಅಮ್ಮತ್ತೀರ ಒಕ್ಕ ಅಚ್ಚಿಯಂಡ ಒಕ್ಕವನ್ನು ೮ ವಿಕೆಟ್ಗಳಿಂದ ಮಣಿಸಿತು. ಅಚ್ಚಿಯಂಡ ಮೊದಲು ಬ್ಯಾಟ್ ಮಾಡಿ, ನಿಗದಿತ ೧೦ ಓವರ್ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೫೧ ರನ್ ಕಲೆ ಹಾಕಿತು. ಅಮ್ಮತ್ತೀರ ೨ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಅಮ್ಮತ್ತೀರ ದೀಕ್ಷಿತ್ ೫ ವಿಕೆಟ್ ಸಾಧನೆ ಮಾಡಿದರು. ಕೊನೆಯ ಓವರ್ನಲ್ಲಿ ೩ ವಿಕೆಟ್ ಕಿತ್ತು ಸುಲಭ ಗುರಿ ಬೆನ್ನೆತ್ತುವಂತೆ ಮಾಡಿದರು. ಬ್ಯಾಟಿಂಗ್ನಲ್ಲಿ ಕೂಡ ಉತ್ತಮ ಕಾಣಿಕೆ ನೀಡಿದರು. ಉತ್ತಮ ಪ್ರದರ್ಶನ ನೀಡುವ ಮೂಲಕ ಅಮ್ಮತ್ತೀರ ೬ ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಹೆಮ್ಮಚ್ಚಿಮನೆ ಅಣ್ಣೀರ ವಿರುದ್ಧ ಗೆಲುವು ಪಡೆಯಿತು. ಅಣ್ಣಿರ ೮೬ ರನ್ ದಾಖಲಿಸಿತು. ಹೆಮ್ಮಚಿಮನೆ ೮೭ ರನ್ ಬಾರಿಸಿ ಗೆದ್ದುಕೊಂಡಿತು.
ಅಮ್ಮತ್ತೀರ ದೀಕ್ಷಿತ್ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ಫೈನಲ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು. ಅಚ್ಚಿಯಂಡ ದಿಲಿಪ್ ಬೆಸ್ಟ್ ಬ್ಯಾಟ್ಸ್ಮನ್, ಮನ್ನಕಮನೆ ದೀಕ್ಷಿತ್ ಬೆಸ್ಟ್ ವುಮೆನ್ ಪ್ಲೇಯರ್, ಅಣ್ಣೀರ ಆಕಾಶ್ ಎಮೆರ್ಜಿಂಗ್ ಪ್ಲೇಯರ್ ಪ್ರಶಸ್ತಿ ಸ್ವೀಕರಿಸಿದರು.
ಹೆಮ್ಮಚ್ಚಿಮನೆ, ಪರಿಯಮ್ಮಂಡ, ಪುತ್ತಾಮನೆ, ಗುಂಬೀರ, ನೆರಿ ಯಂಡಮ್ಮAಡ, ಅಮ್ಮತ್ತೀರ, ಚೀರಮ್ಮನ, ಕೊಂಡಿಜಮ್ಮನ, ನಾಳಿಯಮ್ಮಂಡ, ಬಾನಂಡ (ಕುಟ್ಟಂದಿ), ಚಿಲ್ಲಜಮ್ಮನ, ಅಣ್ಣೀರ, ಅಚ್ಚೀಯಂಡ, ಬಾಚಮಂಡ, ಕುಮಚಮ್ಮಂಡ, ಪಡಿಞರಮ್ಮಂಡ, ಬಾನಂಡ, ಆಂಡಮಾಡ, ಮನ್ನಕಮನೆ, ಮಂಜುವAಡ, ಬಲ್ಯಂಡ, ಪರಿಯಪ್ಪಮ್ಮನ, ಚೊಟ್ಟೋಳಿಮ್ಮಂಡ ತಂಡಗಳು ಪಾಲ್ಗೊಂಡಿದ್ದವು.
ಜನಾಂಗದ ಅಭಿವೃದ್ಧಿಗೆ ಸಂಘಟನೆ
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಜನಾಂಗದ ಅಭಿವೃದ್ದಿಗೆ ಸಂಘಟನೆ ಮುಖ್ಯ. ಈ ನಿಟ್ಟಿನಲ್ಲಿ ಜನಾಂಗದ ಪ್ರತಿಯೊಬ್ಬರೂ ಸಂಘಟನಾತ್ಮಕವಾಗಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಸಮಾಜದ ಸದಸ್ಯರು ಜನಾಂಗದ ಅಭಿವೃದ್ಧಿಗೆ ಪೂರಕವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿದೆ. ಇದರಿಂದ ಸಾಕಷ್ಟು ಬೆಳವಣಿಗೆ ಕಾಣಬಹುದಾಗಿದೆ. ಬಾನಂಡ ಒಕ್ಕ ೨ ನೇ ಬಾರಿಗೆ ನಮ್ಮೆ ಆಯೋಜಿಸಿ ಜನಾಂಗಕ್ಕೆ ನೆರವಾಗಿದೆ. ಈ ನಿಟ್ಟಿನಲ್ಲಿ ಪ್ರೋತ್ಸಾಹ ಅಗತ್ಯವಾಗಿದೆ. ಮಕ್ಕಳನ್ನು ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಸಲು ಸರ್ಕಾರದ ಸವಲತ್ತು ಪಡೆದುಕೊಳ್ಳಲು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಬಾನಂಡ ಒಕ್ಕ ಅಧ್ಯಕ್ಷ ಬಾನಂಡ ಎಸ್. ರಮೇಶ್ ಮಾತನಾಡಿ, ಉತ್ತಮ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ನಮ್ಮ ಪ್ರತಿಭೆಗಳು ಅವಕಾಶ ಮಾಡಿಕೊಟ್ಟಿವೆ. ಪ್ರತಿಭೆಗೆ ಪ್ರೋತ್ಸಾಹ ಸಿಗುತ್ತಿದೆ ಎಂದರು.
ದಾನಿ ಚೆಪ್ಪುಡೀರ ಕಿಟ್ಟು ಅಯ್ಯಪ್ಪ ಮಾತನಾಡಿ, ಮಾಯಮುಡಿ ಶಾಲಾ ಮೈದಾನ ಸಾಕಷ್ಟು ಕ್ರೀಡೆಗೆ ಹೆಸರುವಾಸಿಯಾಗಿದೆ. ಕ್ರೀಡಾ ವಿಶೇಷತೆಗೆ ಸಾಕ್ಷಿಯಾಗಿದೆ. ಮೈದಾನದ ಅಭಿವೃದ್ದಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಬಾನಂಡ ಕ್ರೀಡಾ ಸಮಿತಿ ಅಧ್ಯಕ್ಷ ಬಾನಂಡ ಎ. ಸುನಿತ್ ಮಾತನಾಡಿ, ಅಮ್ಮಕೊಡವರಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಪ್ರೋತ್ಸಾಹಿಸಿ ಮುಂದಿನ ಹಂತಕ್ಕೆ ಪ್ರವೇಶ ನೀಡುವಂತೆ ಪ್ರಯತ್ನ ನಡೆಸಬೇಕಿದೆ ಎಂದರು. ಕಂಗಳತ್ನಾಡ್ ಅಮ್ಮಕೊಡವ ಸಂಘ ಅಧ್ಯಕ್ಷೆ ಬಾನಂಡ ಆಶಾ ಸೂದನ್, ದಾನಿ ಬಾನಂಡ ಕಾಂತಿ ಅಪ್ಪಣಮಯ್ಯ, ಬೆಂಗಳೂರು ಅಮ್ಮಕೊಡವ ಸಮಾಜದ ಅಧ್ಯಕ್ಷೆ ಹೆಮ್ಮಚ್ಚಿಮನೆ ಸರಸ್ವತಿ ಸೋಮೇಶ್, ಹಿರಿಯರಾದ ಬಾನಂಡ ರವಿ ಇದ್ದರು. ಬಾನಂಡ ಕ್ರಿಶ್ರಾಜ್ ನಿರೂಪಿಸಿದರು.