ಮಡಿಕೇರಿ, ಮೇ ೭: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಡಿ ಹಿರಿಯ ಪತ್ರಕರ್ತ, ಸಂಘದ ಮಾಜಿ ಅಧ್ಯಕ್ಷ ಚಿ.ನಾ.ಸೋಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೋಮವಾರಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿರುವ ಸೋಮೇಶ್ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮೇಶ್ ಅವರು, ಡಿ.ವಿ. ಗುಂಡಪ್ಪ ಅವರು ಸ್ಥಾಪಿಸಿದ ಕಾರ್ಯನಿರತ ಪತ್ರಕರ್ತರ ಸಂಘ ಇಂದಿಗೂ ಗಟ್ಟಿಯಾಗಿ ನೆಲೆಯೂರಿದೆ. ಈ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ದೊರೆತ್ತಿದ್ದು, ನನ್ನ ಸೌಭಾಗ್ಯವಾಗಿದೆ. ನಿವೃತ್ತಿ ನಂತರ ಸಂಘದವರು ಮನೆಗೆ ಬಂದು ಗೌರವಿಸುತ್ತಿರುವುದು ಹೆಮ್ಮೆ ಮೂಡಿಸುವುದರೊಂದಿಗೆ ಹಳೆಯ ನೆನೆಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ ಎಂದರು.
ಸಾಕಷ್ಟು ಏಳುಬೀಳುಗಳ ನಡುವೆ ಕಾರ್ಯನಿರತ ಪತ್ರಕರ್ತರ ಸಂಘ ಗಟ್ಟಿಯಾಗಿ ನಿಂತಿದೆ. ೧೯೮೨ರಲ್ಲಿ ಬೆಂಗಳೂರಿನಲ್ಲಿ ವಿಕ್ರಮ್ ಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸದ ನಾನು ನವಶಕ್ತಿ ಪತ್ರಿಕೆಯಲ್ಲಿ ಕೆಲಸ ಮಾಡಿದ ನಂತರ ಶಕ್ತಿ ಪತ್ರಿಕೆಯಲ್ಲಿ ಸುದೀರ್ಘ ಅವಧಿ ಕೆಲಸ ಮಾಡುವ ಅವಕಾಶ ದೊರೆಯಿತು. ಪತ್ರಕರ್ತನಾಗಿ ಕೆಲಸ ಮಾಡುವಾಗ ಸಿಗುವ ಅನುಭವ ಬೇರೆ ಯಾವುದೇ ವೃತ್ತಿಯಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ಚಿ.ನಾ ಸೋಮೇಶ್ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭ ಸಾಕಷ್ಟು ಕೆಲಸಗಳು ನಡೆದಿವೆ. ಸಂಘದ ಹಿತಕ್ಕಾಗಿ ಸಾಕಷ್ಟು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ನೇರ ನಡೆನುಡಿಯ ಪತ್ರಕರ್ತರಾಗಿ ಸೋಮೇಶ್ ಅವರು ಹೆಸರು ಮಾಡಿದವರು. ಈಗ ಸಂಘದ ಸದಸ್ಯರಲ್ಲದಿದ್ದರೂ ಅದೇ ಸಂಬAಧ ಒಡನಾಟವನ್ನು ಹೊಂದಿದ್ದಾರೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಸವಿತಾ ರೈ ಮಾತನಾಡಿ, ಸೋಮೇಶ್ ಅವರು ಅಗಾಧವಾದ ಪಾಂಡಿತ್ಯವನ್ನು ಹೊಂದಿದ್ದಾರೆ. ಅವರೊಟ್ಟಿಗೆ ಒಡನಾಡಿಯಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಅವರು ಹಾಕಿಕೊಟ್ಟ ಹೆಜ್ಜೆಯಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಹಿರಿಯರ ಅನುಭವವನ್ನು ಹಂಚಿಕೊಳ್ಳಲು ಸಂಘ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದು ತಿಳಿಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಸತ್ಯಾಸತ್ಯತೆಯನ್ನು ತಿಳಿದು ಮಾತನಾಡುವ ಸೋಮೇಶ್ ಅವರು ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ನೇರನಡೆನುಡಿಯ ವ್ಯಕ್ತಿಯಾಗಿದ್ದು ಇದೀಗ ಅಧ್ಯಾತ್ಮದತ್ತ ಮುಖ ಮಾಡಿದ್ದಾರೆ. ಸಂಘಕ್ಕೆ ಸೋಮೇಶ್ ಅವÀರು ಮಾರ್ಗದರ್ಶನ ನೀಡಬೇಕೆಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷÀ ನವೀನ್ ಸುವರ್ಣ, ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ವಿಶ್ವಕುಮಾರ್, ನಿರ್ದೇಶಕರಾದ ಶಿವಕುಮಾರ್, ಸದಸ್ಯರಾದ ಮಂಜು ಸುವರ್ಣ, ಕೆ.ಎಂ.ವಿನೋದ್, ಸುರ್ಜಿತ್ ಉಪಸ್ಥಿತರಿದ್ದರು.