ಮಡಿಕೇರಿ, ಮೇ ೭: ಕಳೆದ ೨೬ ವರ್ಷಗಳಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬದೊಂದಿಗೆ ಕಳೆದ ಕೆಲವು ವರ್ಷಗಳಿಂದ ಲೆದರ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಆಯೋಜನೆ ಮಾಡಿಕೊಂಡು ಬರುತ್ತಿರುವ ಕೊಡಗು ಗೌಡ ಯುವ ವೇದಿಕೆ ಈ ಬಾರಿ ಇದೇ ಪ್ರಥಮ ಬಾರಿಗೆ ಗೌಡ ಕುಟುಂಬಗಳ ನಡುವೆ ರಿಂಕ್ ಹಾಕಿ ಪಂದ್ಯಾವಳಿ ಆಯೋಜನೆ ಮಾಡುವ ಮೂಲಕ ಮತ್ತೊಂದು ಹೊಸ ಹೆಜ್ಜೆಯನ್ನಿರಿಸಿದೆ.

ಗೌಡ ಜನಾಂಗದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವ ಹಾಗೂ ಜನಾಂಗದಲ್ಲಿ ಒಗ್ಗಟ್ಟನ್ನು ಮೂಡಿಸುವ ಸಲುವಾಗಿ ಕ್ರಿಕೆಟ್ ಹಬ್ಬದೊಂದಿಗೆ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಿರುವ ಯುವ ವೇದಿಕೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬರುತ್ತಿದ್ದು, ಈ ಬಾರಿ ಕುಟುಂಬವಾರು ಕ್ರಿಕೆಟ್ ಪಂದ್ಯಾವಳಿಯೊAದಿಗೆ ಮ್ಯಾರಥಾನ್, ಶೂಟಿಂಗ್ ಸ್ಪರ್ಧೆಯೊಂದಿಗೆ ‘ಮಿ. ಅಂಡ್ ಮಿಸಸ್ ಗೌಡತಿ’ ಎಂಬ ವಿನೂತನ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದೆ. ಇದರೊಂದಿಗೆ ಇದೇ ಪ್ರಥಮ ಬಾರಿಗೆ ಈ ಬಾರಿ ಕುಟುಂಬವಾರು ೫+೨ ಆಟಗಾರರನ್ನೊಳಗೊಂಡ ರಿಂಕ್ ಹಾಕಿ ಪಂದ್ಯಾವಳಿಯನ್ನು ಕೂಡ ಆಯೋಜನೆ ಮಾಡಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ)

೫೬ ಕುಟುಂಬಗಳು ಭಾಗಿ

ಇದೇ ಪ್ರಥಮ ಬಾರಿಗೆ ಹಾಕಿ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಈಗಾಗಲೇ ನೋಂದಾವಣಿಗೆ ಅಂತಿಮ ದಿನಾಂಕ ಮುಕ್ತಾಯಗೊಂಡಿದ್ದು, ಟೈಸ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಒಟ್ಟು ೫೬ ಕುಟುಂಬ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ತಾ. ೯ರಿಂದ ತಾ.೧೪ರವರೆಗೆ ಪಂದ್ಯಾವಳಿ ಮಡಿಕೇರಿಯ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿರುವ ರಿಂಕ್ ಹಾಕಿ ಮೈದಾನದಲ್ಲಿ ನಡೆಯಲಿದೆ. ತಾ. ೧೪ರಂದು ಅಂತಿಮ ಪಂದ್ಯಾವಳಿ ನಡೆಯಲಿದೆ.

ಹಗಲು-ರಾತ್ರಿ ಪಂದ್ಯ

ಒಟ್ಟು ೫೬ ಕುಟುಂಬ ತಂಡಗಳು ಪಾಲ್ಗೊಂಡಿರುವ ೫ ಮಂದಿ ಆಟವಾಡುವ ಒಟ್ಟು ೨೦ ನಿಮಿಷ ಅವಧಿಯ, ಆರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿ ಹೊನಲು ಬೆಳಕಿನಲ್ಲಿ ಹಗಲು-ರಾತ್ರಿ ನಡೆಯಲಿದೆ. ಫೈವ್ ಎ ಸೈಡ್ ಪಂದ್ಯಾವಳಿಗೆ ಸಂಬAಧಿಸಿದAತೆ ಎಲ್ಲಾ ರೀತಿಯ ನಿಯಮಗಳು ಅನ್ವಯಿಸಲಿವೆ.

ಆಕರ್ಷಕ ಬಹುಮಾನ

ಪ್ರಥಮ ಬಾರಿಗೆ ಆಯೋಜಿತಗೊಂಡಿರುವ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ವಿಜೇತರಾಗುವ ತಂಡಗಳಿಗೆ ಆಕರ್ಷಕ ನಗದು ಹಾಗೂ ಪಾರಿತೋಷಕಗಳನ್ನು ಬಹುಮಾನವಾಗಿ ನೀಡಲಾಗುವದು. ಇದರೊಂದಿಗೆ ವೈಯಕ್ತಿಕ ಬಹುಮಾನಗಳು ಕೂಡ ಇರಲಿವೆ. ಇದೇ ಮೊದಲ ಬಾರಿಗೆ ಆಯೋಜಿತವಾಗಿರುವ ಹಾಕಿ ಪಂದ್ಯಾವಳಿ ಯಶಸ್ಸಿಗೆ ಕೊಡಗು ಗೌಡ ಯುವ ವೇದಿಕೆ ಪದಾಧಿಕಾರಿಗಳು ಶ್ರಮ ವಹಿಸುತ್ತಿದ್ದು, ಮೈದಾನದ ತಯಾರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. - ಕುಡೆಕಲ್ ಸಂತೋಷ್