ಮಡಿಕೇರಿ, ಮೇ ೭: ನಾಪೋಕ್ಲುವಿನ ನಡೆದ ಚೇನಂಡ ಕಪ್ ಹಾಕಿ ಉತ್ಸವದ ವೇಳೆ ‘ಗೋಲಿಗೊಂದು ಗಿಡ’ ಎನ್ನುವ ಚಿಂತನೆಯೊAದಿಗೆ ಹಾಕಿ ಉತ್ಸವ ಆಯೋಜನಾ ಸಮಿತಿ ಜಿಲ್ಲೆಯ ವಿವಿಧೆಡೆಗಳಲ್ಲಿ ೨೨೦೦ಕ್ಕೂ ಹೆಚ್ಚಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಕೊಡುಗೆಯನ್ನು ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಚೇನಂಡ ಕಪ್ ಹಾಕಿ ನಮ್ಮೆಯ ಆಯೋಜನಾ ಸಮಿತಿಯ ಪದಾಧಿಕಾರಿಗಳು ಮಾತನಾಡಿ, ಚೇನಂಡ ಕಪ್ ಹಾಕಿ ಉತ್ಸವದಲ್ಲಿ ಪ್ರದರ್ಶನ ಪಂದ್ಯಗಳನ್ನು ಒಳಗೊಂಡAತೆ ಒಟ್ಟು ೩೮೫ ಪಂದ್ಯಗಳು ನಡೆದು ೧೫೨೦ ಗೋಲುಗಳು ದಾಖಲಾಗಿವೆ. ಗೋಲಿಗೊಂದು ಗಿಡ ಎನ್ನುವ ಪರಿಕಲ್ಪನೆಯನ್ನು ಮೀರಿ ಹೆಚ್ಚಿನ ಪ್ರಮಾಣದ ಗಿಡಗಳನ್ನು ವಿವಿಧೆಡೆಗಳಲ್ಲಿ ನೆಟ್ಟು, ಅವುಗಳ ಪೋಷಣೆಗೂ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚೇನಂಡ ಕಪ್ ಹಾಕಿ ಉತ್ಸವ ಸಮಿತಿ ಹಸಿರ ಪರಿಸರಕ್ಕೆ ಒತ್ತು ನೀಡುವ ಗಿಡಗಳನ್ನು ನೆಡುವ ಕಾರ್ಯಕ್ರಮದೊಂದಿಗೆ, ಕಾಡು ಜಾತಿಯ ಹಣ್ಣು ಹಂಪಲು ಗಿಡಗಳ ಸಸ್ಯಾಭಿವೃದ್ಧಿ ಮಾಡಿ, ಮತ್ತೆ ಅರಣ್ಯ ಭಾಗಗಳಲ್ಲಿ ಅವುಗಳನ್ನು ಬೆಳೆಸುವ ಚಿಂತನೆಯನ್ನು ಹೊಂದಿರುವುದಾಗಿ ತಿಳಿಸಿದರು. ಜಿಲ್ಲೆಯ ಯಾವುದೇ ಭಾಗದಲ್ಲಿರುವವರು ಅಪರೂಪದ ಕಾಡು ಜಾತಿಯ ಹಣ್ಣು ಹಂಪಲು ಗಿಡಗಳನ್ನು ಹೊಂದಿದ್ದು ಆ ಬಗ್ಗೆ ಮಾಹಿತಿ ನೀಡಿದಲ್ಲಿ ಚೇನಂಡ ಹಾಕಿ ನಮ್ಮೆ ಸಮಿತಿ ಆ ಗಿಡಗಳ ಸಸ್ಯಾಭಿವೃದ್ಧಿಗೆ ಅಗತ್ಯ ಪ್ರಯತ್ನಗಳನ್ನು ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಜೇನುಪೆಟ್ಟಿಗೆ ವಿತರಣೆ
ಚೇನಂಡ ಕಪ್ ಹಾಕಿ ಉತ್ಸವದ ಸಂದರ್ಭ ಪ್ರತಿ ಪಂದ್ಯದಲ್ಲಿ ಪರಾಭವಗೊಂಡ ತಂಡಕ್ಕೆ ಜೇನು ಪೆಟ್ಟಿಗೆಯನ್ನು ವಿತರಿಸಿದೆ. ಅದರಂತೆ ಒಟ್ಟು ಪಂದ್ಯಾವಳಿಯಲ್ಲಿ ೫೦೦ಕ್ಕೂ ಹೆಚ್ಚಿನ ಜೇನುಪೆಟ್ಟಿಗೆ ವಿತರಿಸಲಾಗಿದೆ. ಈ ಪೆಟ್ಟಿಗೆಗಳಿಗೆ ಜೇನುಹುಳುಗಳ ಅಗತ್ಯವಿರುವವರು ಸಮಿತಿಯನ್ನು ಸಂಪರ್ಕಿಸುವAತೆ ಮನವಿ ಮಾಡಿಕೊಂಡರು. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಗಳೊಂದಿಗೆ ಜೇನುಪೆಟ್ಟಿಗೆ ವಿತರಣೆಯ ಮೂಲಕ ಜೇನು ಕೃಷಿಗೆ ಉತ್ತೇಜನ ನೀಡುವ ಮೂಲಕ ಹಾಕಿ ಉತ್ಸವದ ಆಯೋಜನೆಯೊಂದಿಗೆ ಚೇನಂಡ ಕುಟುಂಬವು ಪರಿಸರ ಸಂರಕ್ಷಣೆಯ ನೆಲೆಯಲ್ಲಿ ಮಹತ್ವದ ಹೆಜ್ಜೆ ಇರಿಸಿರುವುದಾಗಿ ಸಂತಸ ವ್ಯಕ್ತಪಡಿಸಿದರು.
ಪೂರ್ಣ ಸಹಕಾರ
ಮುಂದಿನ ೨೦೨೭ನೇ ಸಾಲಿನಲ್ಲಿ ಪೊನ್ನಂಪೇಟೆಯಲ್ಲಿ ‘ಅಜ್ಜಿಕುಟ್ಟಿರ ಕಪ್ ಹಾಕಿ ನಮ್ಮೆ’ ನಡೆಯಲಿದೆ. ಉತ್ಸವ ಆಯೋಜನೆ ಮಾಡುವ ಅಜ್ಜಿಕುಟ್ಟಿರ ಕುಟುಂಬಕ್ಕೆ ಸರ್ವ ಸಹಕಾರವನ್ನು ಚೇನಂಡ ಕುಟುಂಬ ನೀಡಲಿದೆ ಎಂದು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಚೇನಂಡ ಕಪ್ ಹಾಕಿ ನಮ್ಮೆ ಆಯೋಜನಾ ಸಮಿತಿಯ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ, ಕಾರ್ಯಾಧ್ಯಕ್ಷ ಚೇನಂಡ ದೀನಾ ಚಂಗಪ್ಪ, ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ, ಸಹ ಕಾರ್ಯದರ್ಶಿ ಚೇನಂಡ ತಮ್ಮಿ ತಮ್ಮಯ್ಯ, ವಕ್ತಾರರಾದ ಚೇನಂಡ ಸುರೇಶ್ ನಾಣಯ್ಯ ಉಪಸ್ಥಿತರಿದ್ದರು.