ಕುಶಾಲನಗರ, ಮೇ ೬: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವನ್ಯಜೀವಿ ಉಪಟಳ ತಡೆಯುವಲ್ಲಿ ವಿಫಲ, ಸೆಕ್ಷನ್ ೪, ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅರಣ್ಯ ಸಚಿವರಿಗೆ ಘೇರಾವ್ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ ಘಟನೆ ನಡೆದಿದೆ.

ದುಬಾರೆಯಲ್ಲಿ ತೂಗುಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಆಗಮಿಸುತ್ತಿದ್ದ ಹಿನ್ನೆಲೆ ಸೋಮವಾರಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗುಡ್ಡೆಹೊಸೂರುವಿನಲ್ಲಿ ಸೇರಿ ಅರಣ್ಯ ಸಚಿವರ ವಾಹನಕ್ಕೆ ಅಡ್ಡಹಾಕಿ, ಜಿಲ್ಲೆಯಲ್ಲಿರುವ ಸಮಸ್ಯೆಯನ್ನು ತಿಳಿಸಲು ಮುಂದಾಗಿದ್ದರು. ಆದರೆ, ವಿಷಯ ಅರಿತ ಪೊಲೀಸರು ಮುನ್ನೆಚ್ಚರಿಕೆಯಾಗಿ ೨೪ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಮಡಿಕೇರಿಯ ಪೊಲೀಸ್ ಕವಾಯತ್ ಮೈದಾನಕ್ಕೆ ಕರೆತಂದ ಬಳಿಕ ಸಂಜೆ ಬಿಡುಗಡೆಗೊಳಿಸಿದರು. ವಾಹನದ ಒಳಗಿನಿಂದಲೇ ಬಿಜೆಪಿಗರು ಕಪ್ಪು ಬಾವುಟ ಪ್ರದರ್ಶಿಸಿ ಕಾಂಗ್ರೆಸ್ ಸರಕಾರ, ಅರಣ್ಯ ಸಚಿವ ಹಾಗೂ ಪೊಲೀಸರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಶಕ್ಕೆ ಪಡೆಯುವ ಸಂದರ್ಭ ಪೊಲೀಸರು ಹಾಗೂ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಾರ್ಯಕರ್ತರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಕಾಯಕರ್ತರು ಪ್ರತಿರೋಧವೊಡ್ಡಿ ಸರಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಈ ಸಂದರ್ಭ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಉಪಾಧ್ಯಕ್ಷ ಎಂ.ಡಿ.ಕೃಷ್ಣಪ್ಪ, ರಕ್ಷಿತ್ ಮಾವಜಿ, ಮಹೇಶ್ ತಿಮ್ಮಯ್ಯ, ಮಂಡಲ ಉಪಾಧ್ಯಕ್ಷ ಕೃಷ್ಣಪ್ಪ, ಮಂಡಲ ಪ್ರಧಾನ ಕಾರ್ಯದರ್ಶಿ ದರ್ಶನ ಜೋಯಪ್ಪ, ಒಬಿಸಿ ಮೋರ್ಚಾ ಅಧ್ಯಕ್ಷ ಸುನಿಲ್, ಎಸ್ಟಿ ಮೋರ್ಚಾ ಅಧ್ಯಕ್ಷ ಪ್ರವೀಣ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್, ಮಂಡಲ ವಕ್ತಾರ ಕಂಠಿ ಕಾರ್ಯಪ್ಪ, ಪ್ರವೀಣ್, ಸುಮನ್ ಮತ್ತಿತರರು ಇದ್ದರು.

ಮಡಿಕೇರಿಯಲ್ಲಿ ಬಿಜೆಪಿ ಆಕ್ರೋಶ

ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಮಡಿಕೇರಿಗೆ ಕರೆತರುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಪೊಲೀಸ್ ಮೈದಾನದ ಬಳಿ ತೆರಳಿ ರಾಜ್ಯ ಸರಕಾರ ಹಾಗೂ ಪೊಲೀಸ್ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ರಾಜ್ಯದಲ್ಲಿ ತುಗಲಕ್ ದರ್ಬಾರ್ ನಡೆಯುತ್ತಿದೆ. ಪ್ರಶ್ನೆ ಮಾಡಿದವರನ್ನು ಬಂಧಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಹುಲಿ, ಆನೆ ಹಾವಳಿ ಹೆಚ್ಚಾಗಿದೆ. ಇದರ ನಡುವೆ ಸೆಕ್ಷನ್ ೪, ಸಿ ಆ್ಯಂಡ್ ಡಿ ಲ್ಯಾಂಡ್ ಸಮಸ್ಯೆ ಇದೆ. ಇದಕ್ಕೆ ಪರಿಹಾರ ಹುಡುಕುವಲ್ಲಿ ಸರಕಾರ ವಿಫಲವಾಗಿದೆ. ಜಿಲ್ಲೆಯ ಸಮಸ್ಯೆಯನ್ನು ಅರಣ್ಯ ಸಚಿವರ ಗಮನಕ್ಕೆ ತರುವ ನಿಟ್ಟಿನಲ್ಲಿ ಅವರಿಗಾಗಿ ಕಾಯುತ್ತಿದ್ದ ಸಂದರ್ಭ ಏಕಾಏಕಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗಿದೆ. ರಾಜ್ಯ ಸರಕಾರ ಕೊಡಗನ್ನು ಹೇಗೆ ಪರಿಗಣಿಸುತ್ತಿದೆ ಎಂದು ಇದರಿಂದ ತಿಳಿಯುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಹುಲಿ, ಆನೆ ದಾಳಿಯಿಂದ ಹಲವು ಸಾವು-ನೋವು ಸಂಭವಿಸಿದೆ. ಈ ಸಂಬAಧ ಹಲವು ಬಾರಿ ಹೋರಾಟ ಮಾಡಲಾಗಿತ್ತು. ಅರಣ್ಯ ಸಚಿವರು ಎಲ್ಲರನ್ನೂ ಒಗ್ಗೂಡಿಸಿ ಸಭೆ ನಡೆಸಿ ಜ್ವಲಂತ ಸಮಸ್ಯೆ ಬಗೆಹರಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಇದುವರೆಗೂ ಸ್ಪಂದನ ವ್ಯಕ್ತವಾಗಿರಲಿಲ್ಲ. ಸಚಿವರ ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟಕ್ಕೆ ಮುಂದಾದಾಗ ಕಾಂಗ್ರೆಸ್ ನಾಯಕರ ಮಾತು ಕೇಳಿ ಪೊಲೀಸ್ ಇಲಾಖೆ ನಮ್ಮ ಹೋರಾಟವನ್ನು ಹತ್ತಿಕ್ಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಶಾಶ್ವತವಾಗಿ ಇರುವುದಿಲ್ಲ. ಮುಂದೆ ಅಧಿಕಾರ ಕಳೆದುಕೊಳ್ಳುತ್ತದೆ. ಜನರ ಅಹವಾಲು ಕೇಳುವ ತಾಳ್ಮೆಯೂ ಸರಕಾರಕ್ಕೆ ಇಲ್ಲ. ಇದಕ್ಕೆಲ್ಲ ಬಿಜೆಪಿ ಹೆದರಲ್ಲ ಎಂದರು.

ಸೋಮವಾರಪೇಟೆ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ಜಿಲ್ಲೆಯ ಸಮಸ್ಯೆಯನ್ನು ಹೇಳಿಕೊಳ್ಳಲು ನಿಂತಿದ್ದ ಸಂದರ್ಭ ಸಚಿವರು ಹುಣಸೂರು ದಾಟುವ ಮುನ್ನವೇ ಏಕಾಏಕಿ ಬಂಧಿಸಿ ಕರೆತರಲಾಗಿದೆ. ವಿರೋಧ ಪಕ್ಷವಾಗಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.