ಐಗೂರು, ಮೇ.೬: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದಲ್ಲಿ ಅಭಿವೃದ್ಧಿಯ ಹೆಜ್ಜೆಗಳು ವೇಗವಾಗಿ ಸಾಗುತ್ತಿದ್ದರೂ ಒಂದು ಕುಟುಂಬ ಮಾತ್ರ ಇನ್ನೂ ಮೂಲಭೂತ ಸೌಲಭ್ಯಗಳಿಲ್ಲದೆ ಪ್ಲಾಸ್ಟಿಕ್ ಟೆಂಟಿನಲ್ಲಿ ಕಳೆದ ಮೂರೂವರೆ ವರ್ಷದಿಂದ ಬದುಕು ಸಾಗಿಸುತ್ತಿದ್ದಾರೆ. ಕೂಲಿ ಕಾರ್ಮಿಕರಾದ ವಿಜಯ ಮತ್ತು ಪೊನ್ನಮ್ಮ ದಂಪತಿ ಕಳೆದ ಮೂರುವರೆ ವರ್ಷಗಳಿಂದ ಪ್ಲಾಸ್ಟಿಕ್ ಟೆಂಟಿನಲ್ಲಿ ಜೀವನ ನಡೆಸುತ್ತಿದ್ದಾರೆ.
೨೦೨೨ರ ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆ ಮತ್ತು ಬೀಸಿದ ಗಾಳಿಯ ಸಂದರ್ಭದಲ್ಲಿ ದಂಪತಿಯ ಹಂಚಿನ ಮನೆ ಕುಸಿದು ಬಿತ್ತು. ಆ ಸಮಯದಲ್ಲಿ ಅವರು ಕೂಲಿ ಕೆಲಸಕ್ಕೆ ತೆರಳಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದರು. ಆದರೆ ಮನೆಯೊಳಗಿದ್ದ ನಿತ್ಯೋಪಯೋಗಿ ವಸ್ತುಗಳಾದ ಟಿವಿ, ಪಾತ್ರೆಗಳು, ಧರಿಸುವ ಬಟ್ಟೆ ಹಾಗೂ ದಾಖಲೆ ಪತ್ರಗಳು ಸೇರಿದಂತೆ ಎಲ್ಲವೂ ಸಂಪೂರ್ಣ ನಾಶವಾಯಿತು.
ನಂತರ ಆರು ತಿಂಗಳು ಬಾಡಿಗೆ ಮನೆಯಲ್ಲಿ ವಾಸಿಸಿದ್ದರು. ಬಾಡಿಗೆ ಪಾವತಿಸಲು ಸಾಧ್ಯವಾಗದೆ ಕುಸಿದು ಬಿದ್ದ ಮನೆಯ ಪಕ್ಕದ ತಮ್ಮ ಸ್ವಂತ ಜಾಗದಲ್ಲಿ ಪ್ಲಾಸ್ಟಿಕ್ ಟೆಂಟಿನ ಮನೆ ನಿರ್ಮಿಸಿ ಅದರಲ್ಲಿ ಆಶ್ರಯ ಪಡೆದಿದ್ದಾರೆ. ಈ ಟೆಂಟಿನಲ್ಲಿ ಕಿಟಕಿ, ಬಾಗಿಲು, ಶೌಚಾಲಯದಂತಹ ಮೂಲಭೂತ ಸೌಲಭ್ಯಗಳೇ ಇಲ್ಲ, ಗಾಳಿ-ಬೆಳಕು ಸರಿಯಾಗಿ ಪ್ರವೇಶಿಸದ ಕಾರಣ ಕತ್ತಲಿನ ಜೀವನ ನಡೆಸಬೇಕಾಗಿದೆ.ಮನೆ ನೆಲಸಮವಾದ ನಂತರ ಭೇಟಿ ನೀಡಿದ ತಾಲೂಕು ಆಡಳಿತ ಕೇವಲ ರೂ.೧೦,೦೦೦ ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ಈ ಮೊತ್ತದಲ್ಲಿ ಮನೆ ನಿರ್ಮಿಸಲು ಸಾಧ್ಯವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.
ಪ್ರತಿ ಮಳೆಗಾಲದಲ್ಲಿ ಟೆಂಟು ಹರಿದು ಹೋಗುವುದರಿಂದ ಪ್ರತಿ ವರ್ಷ ಹೊಸ ಪ್ಲಾಸ್ಟಿಕ್ ಅಳವಡಿಸಬೇಕಾದ ಪರಿಸ್ಥಿತಿ ಇದೆ. ವಿಜಯ್ ಅವರು ವಯೋವೃದ್ಧರಾಗಿದ್ದು ಆರೋಗ್ಯ ಸಮಸ್ಯೆಯಿಂದ ಕೆಲಸಕ್ಕೆ ತೆರಳಲು ಅಸಮರ್ಥರಾಗಿದ್ದಾರೆ. ಪತ್ನಿ ಪೊನ್ನಮ್ಮ ಒಬ್ಬರೇ ಕೂಲಿ ಕೆಲಸ ಮಾಡಿ ಜೀವನ ನಡೆಸಬೇಕಾಗಿದೆ. ಇವರ ಏಕೈಕ ಪುತ್ರ ದರ್ಶನ್ ವಿಶೇಷಚೇತನರಾಗಿದ್ದು ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. “ಮಳೆ ಬಂದರೆ ಬದುಕೇ ನೀರಿನಲ್ಲಿ ತೇಲುತ್ತದೆ. ಬಿಸಿಲಾದರೆ ಒಳಗೆ ಉಸಿರಾಡಲು ಸಾಧ್ಯವಿಲ್ಲ. ನಮಗೂ ಒಂದು ಸುರಕ್ಷಿತ ಮನೆ ಬೇಕೆಂಬುದು ನಮ್ಮ ಏಕೈಕ ಆಸೆ” ಎಂದು ವಿಜಯ ಹೇಳುತ್ತಾರೆ.
ಒಂದೆಡೆ ವಸತಿ ಯೋಜನೆಯಲ್ಲಿ ಗ್ರಾಮದ ಸುತ್ತಮುತ್ತ ಆರ್‌ಸಿಸಿ ಮನೆಗಳು ನಿರ್ಮಾಣವಾಗುತ್ತಿದ್ದರೆ ಇನ್ನೊಂದೆಡೆ ಈ ಕುಟುಂಬಕ್ಕೆ ಪ್ಲಾಸ್ಟಿಕ್ ಟೆಂಟೇ ಅರಮನೆಯಾಗಿದೆ. ಕಳೆದ ಮೂರು ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಸ್ಥಿತಿಯನ್ನು ನೋಡಿ ಹೋಗುತ್ತಿದ್ದರೂ ಶಾಶ್ವತ ಮನೆ ನಿರ್ಮಾಣದ ಬಗ್ಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ದಂಪತಿಗೆ ಆಘಾತ ತಂದಿದೆ. ಪರಿಹಾರ ದೊರಕದ ಹಿನ್ನೆಲೆ ವಿಜಯ-ಪೊನ್ನಮ್ಮ ದಂಪತಿ ಕಣ್ಣೀರಿನಲ್ಲಿ ತಮ್ಮ ಆಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಬಿಸಿಲಿನ ಉರಿ, ರಾತ್ರಿ ಚಳಿ, ಹಾವುಗಳ ಭಯ ಹಾಗೂ ಮಳೆಗಾಲದಲ್ಲಿ ನೀರು ಸೋರಿಕೆಯ ಆತಂಕದ ನಡುವೆ ಬದುಕು ನಡೆಸುತ್ತಿದ್ದಾರೆ. ಇದೀಗ ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟೆಂಟ್ ಆಶ್ರಯವು ಉಳಿಯುತ್ತದೆಯೇ ಎಂಬ ಭಯ ಕುಟುಂಬವನ್ನು ಕಾಡುತ್ತಿದೆ.
- ಸುಕುಮಾರ್, ಐಗೂರು.