ಚೆಟ್ಟಳ್ಳಿ, ಮೇ ೬: ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪೊನ್ನತ್‌ಮೊಟ್ಟೆ ಪ್ರದೇಶದ ನಿವೇಶನ ರಹಿತರು ಹೋರಾಟ ತೀವ್ರಗೊಳಿಸಿದ್ದು, ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಘೋಷಣೆ ಮಾಡಿದ್ದಾರೆ.

ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪೯/೧೩ ಸರ್ವೇ ನಂಬರಿನ ೧.೮೦ ಎಕರೆ ಜಾಗವನ್ನು ೨೦೨೦-೨೧ರಲ್ಲಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಹೆಸರಿಗೆ ಆರ್‌ಟಿಸಿ ಮಾಡಲಾಗಿತ್ತು. ಆದರೆ ಪಂಚಾಯಿತಿ ನಿರ್ಲಕ್ಷ್ಯದಿಂದ ಕಳೆದ ಆರು ವರ್ಷಗಳಿಂದ ಜಾಗ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಾಡಿಗೆ ಮನೆಗಳು ಹಾಗೂ ತೋಟದ ಲೈನ್ ಮನೆಗಳಲ್ಲಿ ವಾಸಿಸುತ್ತಿದ್ದ ೨೯ ಕುಟುಂಬಗಳು ಮಂಜೂರಾದ ಜಾಗದಲ್ಲೇ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿವೆ. ಆದರೆ ಅದೇ ಪ್ರದೇಶದಲ್ಲಿ ೧೧ ಕೆವಿ ಹೈಟೆನ್ಷನ್ ವಿದ್ಯುತ್ ಸಂಪರ್ಕ ನೀಡಿರುವುದು ಅಪಾಯಕಾರಿ ಯಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಪಂಚಾಯಿತಿ ನೀರಿನ ಪೈಪ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ತಾವೇ ಬಾವಿಯನ್ನು ತೋಡಿ ನೀರನ್ನು ಬಳಸಿಕೊಳ್ಳಲಾದರೂ ಬಸಿಲಿನ ತಾಪಕ್ಕೆ ಬಾವಿ ನೀರು ಬತ್ತುತಿದೆ. ಕಸ ವಿಲೇವಾರಿಯಲ್ಲೂ ಅವೈಜ್ಞಾನಿಕ ಕ್ರಮಗಳಿಂದ ತೊಂದರೆ ಉಂಟಾಗಿದೆ ಎಂದು ದೂರಿದ್ದಾರೆ.

“ನಮ್ಮ ಜಾಗ ನಮ್ಮ ಹಕ್ಕು. ಸುಳ್ಳು ಭರವಸೆ ನೀಡಿ ನಮ್ಮಿಂದ ಮತ ಪಡೆದು ಈಗ ನಮಗೇ ತೊಂದರೆ ನೀಡಲಾಗುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿರುವ ನಿವಾಸಿಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಗಮನ ಸೆಳೆಯಲು ಮಂಜೂರಾದ ಜಾಗದಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭ ವಲಯ ಅಧ್ಯಕ್ಷ ಸೌಕತ್ ಆಲಿ, ಮೇಲ್ವಿಚಾರಕ ಚಂದ್ರಶೇಖರ್, ಸಮಿತಿ ಸದಸ್ಯರಾದ ಶಕೀರ್, ಸಫಿ, ಭಾರತಿ ಹಾಗೂ ಭವ್ಯ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.