ಶನಿವಾರಸಂತೆ, ಮೇ ೬: ಸಮೀಪದ ಮಾಲಂಬಿ ಗ್ರಾಮ ದೇವತಾ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಸಮಾರೋಪ ಸಮಾರಂಭ ದೇವಾಲಯದ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶನಿವಾರಸಂತೆ ಸರ್ಕಲ್ ಇನ್ಸ್ಪೆಕ್ಟರ್ ಜಿ. ಕೃಷ್ಣರಾಜ್ ಮಾತನಾಡಿ, ಇಂದು ಗ್ರಾಮೀಣ ಭಾಗದಲ್ಲಿ ದೇವಾಲಯಗಳು ತಲೆ ಎತ್ತುತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಒಗ್ಗಟ್ಟು ಕಾಣುತ್ತಿದೆ ಎಂದರು. ಇಂದು ಪೊಲೀಸ್ ಇಲಾಖೆ ಜನಸ್ನೇಹಿ ಇಲಾಖೆಯಗಿದ್ದು, ಯಾವುದೇ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದರು ತಕ್ಷಣ ಕರೆ ಮಾಡಿದರೆ ತಕ್ಷಣ ಸ್ಪಂದನ ನೀಡುವ ಇಲಾಖೆ ನಮ್ಮದಾಗಿದೆ. ಇಂದು ತಮ್ಮ ಮಕ್ಕಳಿಗೆ ಮೊಬೈಲ್ ಕೊಡುವಾಗ ಎಚ್ಚರಿಕೆ ವಹಿಸಿ ಮೊಬೈಲ್ ಕೊಡದಿರುವುದು ಒಳ್ಳೆಯದು ಎಂದರು.

ಶಿಕ್ಷಕ ಸಾಹಿತಿ ಉ,ರಾ. ನಾಗೇಶ್ ಮಾತನಾಡಿ, ಇಂದು ಈ ಕೊಡಗಿನ ಮಣ್ಣು ಅನೇಕರಿಗೆ ಉದ್ಯೋಗ ಒದಗಿಸಿದೆ ಅಂತಹ ಜಿಲ್ಲೆ ಕೊಡಗು, ಇಲ್ಲಿ ಬಂದು ಅನೇಕರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮೀಣ ಭಾಗದ ದೇವಾಲಯಗಳಲ್ಲಿ ಇಂದು ಯಾವುದೇ ಸಂಪ್ರದಾಯ ಬದಲಾಗದೆ ಪೂರ್ವಜರು ಮಾಡಿಕೊಂಡು ಬರುವಂತೆ ಹಳೆಯ ಸಂಪ್ರದಾಯ ಉಳಿದಿದ್ದು ಇವುಗಳು ಉಳಿಯಬೇಕು. ಇಂದು ಆಧುನಿಕ ಭರಾಟೆಯಲ್ಲಿ ಹಳೆಯ ಸಂಪ್ರದಾಯಗಳನ್ನು ಅನೇಕರು ಮರೆಯುತ್ತಿದ್ದಾರೆ. ಈ ರೀತಿ ಗ್ರಾಮೀಣ ಭಾಗದಲ್ಲಿ ಆಗಿಲ್ಲಾ. ಗ್ರಾಮ ದೇವತೆ ಪೂಜೆ ಸೇರಿದಂತೆ ಇನ್ನಿತರ ದೇವಾಲಯ ಪೂಜೆಗಳು ಅಚ್ಚುಕಟ್ಟಾಗಿ ನಡೆಯುತ್ತಿದೆ ಇದು ಆ ಗ್ರಾಮದ ಶಕ್ತಿ ಎಂದರು.

ಗ್ರಾಮಸ್ಥರಾದ ಸುರೇಶ್ ಎಂ.ಡಿ. ಮಾತನಾಡಿ, ಈ ದೇವಾಲಯ ಮಳೆ ಗಾಳಿಗೆ ಮರ ಬಿದ್ದು ಭಗ್ನಗೊಂಡಿತ್ತು. ನಂತರ ಇದನ್ನು ಸರಿಪಡಿಸುವ ಬಗ್ಗೆ ಗ್ರಾಮದ ಎಲ್ಲರ ಸಲಹೆ, ಸಹಕಾರ ಪಡೆದು ಈ ಗುಡಿ ಅಭಿವೃದ್ಧಿಪಡಿಸಲಾಗಿದೆ ಎಂದರು. ಸಮಿತಿ ಅಧ್ಯಕ್ಷ ಎಂ.ಈ. ವೆಂಕಟೇಶ್ ಮಾತನಾಡಿ, ಇಂದು ಈ ದೇವಾಲಯ ಅಭಿವೃದ್ಧಿ ಹೊಂದಲು ದಾನಿಗಳು ಕಾರಣ. ಮುಂದೆಯೂ ಇದೆ ರೀತಿ ಸಹಕಾರ ನೀಡಿ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಕೃಷಿಕ ರಾಮಣ್ಣ ಮಾತನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಕಡ್ಯದ ಮಾಚಯ್ಯ, ಹಣಕೋಡು ರಮೇಶ್, ಎಸ್.ಪಿ. ರಾಜಪ್ಪ, ಆಲೂರು-ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಜೆ. ಪ್ರಸನ್ನಕುಮಾರ್, ಮಾಲಂಬಿ ಗ್ರಾಮ ಸಮಿತಿ ಅಧ್ಯಕ್ಷ ಶಶಿಧರ್ ಮುಂತಾದವರಿದ್ದರು. ಇದೆ ಸಂದರ್ಭ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣರಾಜ್, ಕೃಷಿಕ ರಾಮಣ್ಣ, ಉ.ರಾ. ನಾಗೇಶ್ ಅವರನ್ನು ಸನ್ಮಾನಿಸಲಾಯಿತು.