ಕುಶಾಲನಗರ, ಮೇ ೬: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಪ್ರಬಲವಾಗಿ ಜಾರಿಗೆ ತರುವ ಮೂಲಕ ಸಮಾನತೆ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಅಭಿಪ್ರಾಯಿಸಿದರು.
ಕುಶಾಲನಗರ ಟ್ರಸ್ಟ್ ಕ್ಲಬ್ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಅಂಗವಾಗಿ ನಡೆದ ಸಾಮಾಜಿಕ ಕ್ರಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಸಮಾನತೆಯ ಕನಸು ಕಂಡ, ಎಲ್ಲರ ಬದುಕಿಗೆ ಸ್ಫೂರ್ತಿಯಾದ ಮಹಾನ್ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶಿಕ್ಷಣದ ಮಹತ್ವ, ಸಂಘಟನಾತ್ಮಕ ಹೋರಾಟ, ಸಮಾನತೆ, ಸ್ವಾವಲಂಬಿ ಬದುಕು, ಜಾತಿ ರಹಿತ ಸಮಾಜ, ಮಹಿಳಾ ಸಬಲೀಕರಣ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಜೀವನದುದ್ದಕ್ಕೂ ಹೋರಾಡಿದ್ದು ಅವರ ಸೇವೆ ಅವಿಸ್ಮರಣೀಯವಾಗಿದೆ.
ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರು, ಸುದೀರ್ಘ ಕಾಲದವರೆಗೆ ಕೇಂದ್ರದ ಸಚಿವರಾಗಿ ಸೇವೆ ಸಲ್ಲಿಸಿದವರು. ಜಾತ್ಯತೀತತೆ, ಸಾಮಾಜಿಕ ಸಾಮರಸ್ಯ, ಕೃಷಿ, ಅರ್ಥಶಾಸ್ತç, ಆಹಾರ ಉತ್ಪಾದನೆ, ರಕ್ಷಣಾ ನಿರ್ವಹಣೆ, ಕಾರ್ಮಿಕ ಕಲ್ಯಾಣ, ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆ ಶ್ಲಾಘನೀಯವಾಗಿದೆ. ನಮ್ಮ ದೇಶದ ಪ್ರಗತಿಗೆ ಅವರು ವಿವಿಧ ಸಂದರ್ಭಗಳಲ್ಲಿ ನೀಡಿದ ನಿರ್ಣಾಯಕ ಪಾತ್ರಕ್ಕಾಗಿ ಅವರ ಹೆಸರು ಭಾರತದ ರಾಜಕೀಯ ಸನ್ನಿವೇಶದಲ್ಲಿ ದಾಖಲಿಸಲ್ಪಟ್ಟಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಉದ್ಘಾಟಿಸಿ ಮಾತನಾಡಿದರು. ಕುಶಾಲನಗರ ಟ್ರಸ್ಟ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದ ತೀರ್ಥ ಸಮಾಜ ಸೇವಕರಾದ ಬಿ.ಎಸ್. ಸದಾಶಿವ ಶೆಟ್ಟಿ, ಕಿರುತೆರೆ ಕಲಾವಿದೆ ಹೆಚ್.ಎಂ. ಮೀನಾಕ್ಷಿ, ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ಆರ್. ಪ್ರಭಾಕರ್, ಕೂಡುಮಂಗಳೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ್ ಕುಮಾರ್ ಮಾತನಾಡಿದರು.
ಕಾರ್ಯಕ್ರಮ ಆಯೋಜಕ ಹೆಚ್.ಎಂ. ರಘು ಅವರು ಪ್ರಾಸ್ತಾವಿಕ ನುಡಿಗಳನಾಡಿದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಮುಖರನ್ನು ಸನ್ಮಾನಿಸಿ, ಗೌರವಿಸಲಾಯಿತು. ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.