ಮಡಿಕೇರಿ, ಮೇ ೬: ಕೊಡಗಿನ ಹಿರಿಯ ಸಾಹಿತಿ ನಾಗೇಶ್ ಕಾಲೂರು ಕೊಡವ ಭಾಷಾ ಆವೃತ್ತಿಗೆ ಸಂಪಾದಕರಾಗಿರುವ ಕನಕದಾಸರ ಸಮಗ್ರ ಸಾಹಿತ್ಯ ಕೃತಿ ತಾ. ೧೫ ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಲಿದೆ. ಕನಕದಾಸರ ಸಮಗ್ರ ಸಾಹಿತ್ಯವು ಕೊಡವ ಭಾಷೆ ಸೇರಿದಂತೆ ಭಾರತದ ೧೪ ಭಾಷೆಗಳಿಗೆ ಅನುವಾದಿಸಲ್ಪಟ್ಟಿದೆ. ಸಂತಕವಿ ಕನಕದಾ¸
À ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದಿAದ ಈ ಕೃತಿಗಳನ್ನು ಪ್ರಕಟಿಸಲಾಗಿದೆ.
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ೨೦೧೩-೨೪ ನೇ ಸಾಲಿನಲ್ಲಿ ಕನಕದಾಸರ ಸಮಗ್ರ ಸಾಹಿತ್ಯವನ್ನು ಕೊಡವ ಸೇರಿದಂತೆ ಭಾರತದ ೧೪ ಭಾಷೆಗಳಿಗೆ ಅನುವಾದ ಮಾಡುವ ಯೋಜನೆ ಹಮ್ಮಿಕೊಂಡಿತ್ತು. ಪ್ರತೀ ಭಾಷೆಯೂ ೩ ಸಂಪುಟಗಳಲ್ಲಿ ಮುದ್ರಣಗೊಂಡಿದೆ. ಕೊಡವ ಮತ್ತು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ವಚನ ಸಾಹಿತ್ಯ ಬಿಟ್ಟರೆ ಇಷ್ಟೂ ಭಾಷೆಗಳಲ್ಲಿ ಕೃತಿಯೊಂದು ಪ್ರಕಟವಾಗಿರುವುದು ಇದೇ ಮೊದಲು ಕನಕದಾಸರ ಸಮಗ್ರ ಸಾಹಿತ್ಯ ಕೃತಿಯು ಕೊಡವ, ಇಂಗ್ಲೀಷ್, ಹಿಂದಿ, ಬೆಂಗಾಳಿ, ಮರಾಠಿ, ಪಂಜಾಬಿ, ಅಸ್ಸಾಮಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಬ್ಯಾರಿ, ತುಳು, ತೆಲುಗು, ಮುಂತಾದ ೧೪ ಭಾಷೆಗಳಲ್ಲಿ ಅನುವಾದಗೊಂಡಿದೆ. ಕೊಡವ ಭಾಷಾ ಕೃತಿಗಳಿಗೆ ಸಂಪಾದಕರಾಗಿ ನಾಗೇಶ್ ಕಾಲೂರು ಕಾರ್ಯನಿರ್ವಹಿಸಿದ್ದು, ಅನುವಾದಕರಾಗಿ ನಾಗೇಶ್ ಕಾಲೂರು, ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ಮೊಣ್ಣಂಡ ಶೋಭಾ ಸುಬ್ಬಯ್ಯ, ಬಡಕಡಮ್ಮಂಡ ಕಸ್ತೂರಿ ಗೋವಿಂದಮಯ್ಯ, ಮುಲ್ಲೇಂಗಡ ದಿ. ಬೇಬಿ ಚೋಂದಮ್ಮ, ಮುಲ್ಲೇಂಗAಡ ರೇವತಿ ಪೂವಯ್ಯ ಕಾರ್ಯನಿರ್ವಹಿಸಿದ್ದಾರೆ. ಮೂರು ಸಂಪುಟಗಳ ಪೈಕಿ ಮೊದಲ ಸಂಪುಟದಲ್ಲಿ ಕನಕದಾಸರ ೩೬೦ ಕೀರ್ತನೆಗಳು ಮತ್ತು ಮುಂಡಿಗೆಗಳು, ಎರಡನೇ ಸಂಪುಟದಲ್ಲಿ ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ, ನಳಚರಿತ್ರೆ ಕಾವ್ಯಗಳು, ಮೂರನೇ ಸಂಪುಟದಲ್ಲಿ ಮೋಹನ ತರಂಗಿಣಿ ಮಹಾಕಾವ್ಯ ಸಾಹಿತ್ಯಗಳಿವೆ.
ಸಮಗ್ರ ಸಾಹಿತ್ಯ ಶ್ರೇಣಿಯೊಂದು ಅನುವಾದಗೊಂಡು ಕೊಡವ ಭಾಷೆಯಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು. ಕನಕದಾಸರ ಸಮಗ್ರ ಸಾಹಿತ್ಯವನ್ನು ಮೂಲ ಛಂದಸ್ಸಿನಲ್ಲಿಯೇ ಅನುವಾದಗೊಳಿಸಲು ಪ್ರಯತ್ನಿಸಲಾಗಿದ್ದು, ಈ ಅನುವಾದ ಯೋಜನೆ ಕೊಡವ ಭಾಷಾ ಸಾಹಿತ್ಯ ಲೋಕದಲ್ಲಿ ಒಂದು ಮೈಲುಗಲ್ಲಾಗಿದೆ. ತಾ. ೧೫ ರಂದು ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಸಂಜೆ ೫ ಗಂಟೆಗೆ ಕನಕಶಿಲ್ಪವನದ ಲೋಕಾರ್ಪಣೆಯೊಂದಿಗೆ ೧೪ ಕೃತಿಗಳ ಲೋಕಾರ್ಪಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.