ಸೋಮವಾರಪೇಟೆ, ಮೇ. ೫ : ಜೀವನದಲ್ಲಿ ದುಶ್ಚಟಗಳಿಂದ ದೂರವಿದ್ದು, ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಿಸಿದರು. ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಇದೇ ಪ್ರಥಮ ಬಾರಿಗೆ ಸೋಮವಾರಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮೇ ೭ ರಿಂದ ೧೦ ರವರೆಗೆ ಆಯೋಜಿಸಿರುವ ಯಿಫಾ ಹಾಕಿ ಚಾಂಪಿಯನ್ ಟ್ರೋಫಿ ಕ್ರೀಡಾಕೂಟದ, ಆತಿಥೇಯ ಯಿಫಾ ತಂಡದ ಜರ್ಸಿಗಳನ್ನು ಅನಾವರಣ ಮಾಡಿ ಅವರು ಮಾತನಾಡಿದರು.

ಶಾಸಕರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಜನಾಂಗಕ್ಕೆ ಹಾಕಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ ತಂಡಗಳಾದ ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಎಜಿಓಆರ್.ಸಿ., ಸೌತ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್, ಡಿವೈಇಎಸ್, ಸೌತರ್ನ್ ಕಮಾಂಡ್ ಹಾಗೂ ಆತಿಥೇಯ ಯಿಫಾ ತಂಡಗಳು ಭಾಗವಹಿಸುತ್ತಿವೆ ಎಂದು ಹೇಳಿದರು.

ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮುವ ತಂಡಕ್ಕೆ ರೂ. ೨ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೧ ಲಕ್ಷ ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯಕ್ತಿಕ ವಿಭಾಗದಲ್ಲಿಯೂ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದರು. ವೇದಿಕೆಯಲ್ಲಿ ಯಿಫಾ ಸಂಘಟನೆಯ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ, ಪ್ರಣವ್ ಫೌಂಡೇಷನ್ ಅಧ್ಯಕ್ಷ ರಾಕೇಶ್ ರೈ ಉಪಸ್ಥಿತರಿದ್ದರು. ಸದಸ್ಯೆ ಮಾನಸ ಕಾರ್ಯಕ್ರಮ ನಿರ್ವಹಿಸಿದರು.