ಸೋಮವಾರಪೇಟೆ, ಮೇ ೫: ಕ್ರೀಡೆ ಹಾಗೂ ಕೃಷಿ ಕೊಡಗಿನ ಮಣ್ಣಿನಲ್ಲಿ ಅಡಗಿದೆ. ಭೂಲೋಕದ ಸ್ವರ್ಗದಂತಿರುವ ಕೊಡಗಿನ ಕೃಷಿ ಭೂಮಿಯನ್ನು ಯಾರೂ ಸಹ ಮಾರಾಟ ಮಾಡಬಾರದು. ನೆಲದ ಸಂಸ್ಕೃತಿಯೊAದಿಗೆ ಜೀವನ ಸಾಗಿಸಬೇಕೆಂದು ಮಾಜಿ ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.

ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಇದೇ ಪ್ರಥಮ ಬಾರಿಗೆ ಸೋಮವಾರಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ತಾ.೭ ರಿಂದ ೧೦ರವರೆಗೆ ಆಯೋಜಿಸಿರುವ ಯಿಫಾ ಹಾಕಿ ಚಾಂಪಿಯನ್ಸ್ ಟ್ರೋಫಿ ಕ್ರೀಡಾಕೂಟದ ಟೈಸ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅವರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡಗಿನ ಹಾಕಿಪಟುಗಳಿಗೆ ಹೆಚ್ಚಿನ ಸೌಕರ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ತಾನು ಕ್ರೀಡಾ ಸಚಿವನಾಗಿದ್ದ ಸಂದರ್ಭ ಜಿಲ್ಲೆಯ ಸೋಮವಾರಪೇಟೆ, ಕೂಡಿಗೆ, ಪೊನ್ನಂಪೇಟೆಗೆ ಆಸ್ಟೊçà ಟರ್ಫ್ ಹಾಕಿ ಮೈದಾನಕ್ಕೆ ಅನುದಾನ ಒದಗಿಸಿದ್ದು, ಮೂರು ಕಡೆಗಳಲ್ಲಿಯೂ ಸುಸಜ್ಜಿತ ಮೈದಾನ ನಿರ್ಮಾಣವಾಗಿ ರಾಜ್ಯಮಟ್ಟದ ಪಂದ್ಯಾಟ ಆಯೋಜನೆಯಾಗುತ್ತಿರುವುದು ಸಂತಸದ ವಿಚಾರ ಎಂದರು.

ಕೊಡಗಿನ ಮಣ್ಣಿನಲ್ಲಿ ಕ್ರೀಡೆ ಅಡಗಿದೆ. ಈ ಭೂಮಿ ನಿಸರ್ಗದ ಸೃಷ್ಟಿಯ ಸೊಬಗು. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಕೊಡಗಿನಂತಹ ವಾತಾವರಣ ಸಿಗುವುದಿಲ್ಲ. ಈ ಹಿನ್ನೆಲೆ ಕೊಡಗಿನಲ್ಲಿ ಕೃಷಿ ಭೂಮಿ ಹೊಂದಿರುವವರು ಎಂತಹ ಸಂದರ್ಭದಲ್ಲಿಯಾದರೂ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.

ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಸಂಘಟನೆಯು ಹಲವಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಿರುವುದನ್ನು ಸಮಾಜ ಗಮನಿಸಿದೆ. ಇದೇ ಪ್ರಥಮ ಬಾರಿಗೆ ಹಾಕಿ ಕ್ರೀಡಾಕೂಟ ಆಯೋಜಿಸುವ ಮೂಲಕ ಹಾಕಿ ಕ್ರೀಡೆಗೆ ಪ್ರೋತ್ಸಾಹ ತುಂಬಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಕೊಡಗಿನಲ್ಲಿ ಜಲಪ್ರಳಯ ಸಂಭವಿಸಿದ ಸಂದರ್ಭ ಸಮಾನ ಮನಸ್ಕರ ತಂಡ ಸಮಾಜ ಸೇವೆಯಲ್ಲಿ ತೊಡಗಿಕೊಂಡಿತು. ನಂತರದ ದಿನಗಳಲ್ಲಿಯೂ ಸಮಾಜ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ಸಂಸ್ಥೆಯನ್ನು ಹುಟ್ಟುಹಾಕಿ, ಹಲವಾರು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ ಎಂದರು.

ಇದೇ ಪ್ರಥಮ ಬಾರಿಗೆ ಕೊಡಗಿನಲ್ಲಿ ೨೫ ವರ್ಷಗಳ ನಂತರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ ತಂಡಗಳಾದ ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಎಜಿಓಆರ್‌ಸಿ, ಸೌತ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್, ಡಿವೈಇಎಸ್, ಸೌತರ್ನ್ ಕಮಾಂಡ್ ಹಾಗೂ ಆತಿಥೇಯ ಯಿಫಾ ತಂಡಗಳು ಭಾಗವಹಿಸುತ್ತಿವೆ ಎಂದು ಹೇಳಿದರು.

ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡಕ್ಕೆ ರೂ.೨ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.೧ ಲಕ್ಷ ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.೫೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯುಕ್ತಿಕ ವಿಭಾಗದಲ್ಲಿಯೂ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಯಿಫಾ ಸಂಘಟನೆಯ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ ಸೇರಿದಂತೆ ಪದಾಧಿಕಾರಿಗಳು, ಮಹಿಳಾ ಘಟಕದ ಸದಸ್ಯರುಗಳು ಇದ್ದರು.

ಪಂದ್ಯಾಟದಲ್ಲಿ ಒಟ್ಟು ೮ ತಂಡಗಳು ಭಾಗವಹಿಸಲಿದ್ದು, ಎ. ಗುಂಪಿನಲ್ಲಿ ಕೆನರಾ ಬ್ಯಾಂಕ್, ಡಿವೈಇಎಸ್, ಕಸ್ಟಮ್ಸ್ ಅಂಡ್ ಸೆಂಟ್ರಲ್ ಎಕ್ಸೆöÊಜ್, ಎ.ಜಿ.ಓ.ಆರ್.ಸಿ. ತಂಡಗಳು ಹಾಗೂ ಬಿ. ಗುಂಪಿನಲ್ಲಿ ಸೌತ್ ವೆಸ್ಟರ್ನ್ ರೈಲ್ವೇಸ್, ಸೌತರ್ನ್ ಕಮಾಂಡ್, ಯಿಫಾ ಹಾಗೂ ಕರ್ನಾಟಕ ಸ್ಟೇಟ್ ಪೊಲೀಸ್ ತಂಡಗಳು ಸೆಣಸಲಿವೆ.