ಸೋಮವಾರಪೇಟೆ, ಮೇ ೫: ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.

ತಾಲೂಕು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ೬ ವೈದ್ಯರು ಸೇವೆ ಮಾಡುತ್ತಿದ್ದಾರೆ. ಅನಸ್ತೇಷಿಯಾ, ಮಕ್ಕಳ ತಜ್ಞರು, ನೇತ್ರ ತಜ್ಞರು, ರೇಡಿಯಾಲಜಿಸ್ಟ್ ಹಾಗೂ ತುರ್ತು ವೈದ್ಯಾಧಿಕಾರಿಗಳ ಸೇವೆ ಅಗತ್ಯವಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತಂದು ವೈದ್ಯರ ನೇಮಕ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಪ್ರತಿಯೋರ್ವ ವೈದ್ಯರು ಸರಕಾರದ ನಿಯಮಾವಳಿಗಳಲ್ಲಿ ಸೂಚಿಸಿರುವಂತೆ ಕರ್ತವ್ಯದ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಇರಬೇಕು. ಸರಕಾರದ ನಿಯಮದ ಪ್ರಕಾರ ಬೆಳಿಗ್ಗೆ ೯.೩೦ ರಿಂದ ಸಂಜೆ ೪.೩೦ ರವರೆಗೆ ಕರ್ತವ್ಯದಲ್ಲಿರಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕಂದು ವೈದ್ಯಾಧಿಕಾರಿ ಡಾ.ಜಮೀರ್ ಅವರಿಗೆ ಸೂಚನೆ ನೀಡಿದರು.

ಪರ್ಯಾಯವಾಗಿ ರಾತ್ರಿ ಪಾಳಿ ಮತ್ತು ಹಗಲು ಪಾಳಿಯಲ್ಲೂ ಕೆಲಸ ಮಾಡಬೇಕಿದೆ. ಶಸ್ತçಚಿಕಿತ್ಸಾ ವಿಭಾಗವನ್ನು ಮಾಡ್ಯುಲರ್ ಆಪರೇಷನ್ ಥೀಯೇಟರ್ ಮಾಡುವ ಬಗ್ಗೆ ಎರಡು ವರ್ಷಗಳÀ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದರೂ ಯಾವುದೇ ಪತ್ರವ್ಯವಹಾರವನ್ನು ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಶೀಘ್ರದಲ್ಲಿಯೇ ಮಾಡ್ಯುಲರ್ ಆಪರೇಷನ್ ಥೀಯೇಟರ್ ಮಾಡಬೇಕೆಂದು ವೈದ್ಯಾಧಿಕಾರಿಗೆ ಸೂಚನೆ ನೀಡಿದರು.

ಶೀಘ್ರದಲ್ಲಿಯೇ ಆಸ್ಪತ್ರೆಗೆ ಅತ್ಯಗತ್ಯವಾಗಿ ಬೇಕಾಗಿರುವ ವಾಶಿಂಗ್ ಮೆಷಿನ್ ಮತ್ತು ಡ್ರೆöÊಯರ್ ಖರೀದಿಸಲು ಸೂಚನೆ ನೀಡಿದರು. ಇದರಿಂದ ಮಳೆಗಾಲದಲ್ಲಿ ರೋಗಿಗಳಿಗೆ ಸಮಸ್ಯೆಯಾಗುವುದಿಲ್ಲ ಎಂದ ಅವರು, ರೋಗಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನೇ ಒದಗಿಸಬೇಕು. ಯಾವುದೇ ದೂರುಗಳು ಬಂದರೂ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲಾಗು ವುದು ಎಂದರು.

ಮಕ್ಕಳಿಗೆ ಚಿಕಿತ್ಸೆ ನೀಡಲು ಬೇರೆಯೇ ಕೊಠಡಿಯನ್ನು ಬಳಸಬೇಕು ಎಂದ ಶಾಸಕರು, ಆಸ್ಪತ್ರೆಗೆ ನೀಡಲಾದ ಒಂದು ಆಂಬುಲೆನ್ಸ್ನ ಎಫ್.ಸಿ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ನೀರಿನ ಲಭ್ಯತೆಯ ಪ್ರಮಾಣ ಕಡಿಮೆ ಇರುವುದರಿಂದ ಕೊಳವೆ ಬಾವಿಯ ದುರಸ್ತಿಯ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಅಲ್ಲದೆ ಆಸ್ಪತ್ರೆಯ ಎಲ್ಲಾ ವಿಭಾಗಗಳಲ್ಲಿ ವಿದ್ಯುತ್ ಶಕ್ತಿಗೆ ಸಂಬAಧಿಸಿದ ಕೆಲಸವನ್ನು ತುರ್ತಾಗಿ ಮಾಡಿಸಬೇಕೆಂದು ಶಾಸಕರು ಹೇಳಿದರು.

ಆಸ್ಪತ್ರೆಗೆ ಭದ್ರತಾ ಸಿಬ್ಬಂದಿಯ ಅವಶ್ಯಕತೆ ಇರುವುದರಿಂದ ಪೊಲೀಸ್ ಇಲಾಖೆಯ ಮೂಲಕ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಕಳುಹಿಸಿಕೊಡಬೇಕೆಂದು ವೈದ್ಯಾಧಿಕಾರಿ ಡಾ.ಜಮೀರ್ ಮನವಿ ಮಾಡಿದರು.

ಶವಾಗಾರದ ಕೊಠಡಿಗೆ ಮೂಲಭೂತ ಅವಶ್ಯಕತೆಗಳು ಹಾಗೂ ಶವ ಪರೀಕ್ಷೆ ಸಂದರ್ಭ ಬೇಕಾಗಿರುವ ಅತ್ಯಾಧುನಿಕ ಉಪಕರಣಗಳ ಖರೀದಿ ಮಾಡಬೇಕೆಂದು ಶಾಸಕರು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯ ಒಳರೋಗಿಗಳಿಗೆ ಆಹಾರ ವಿತರಿಸಿದ ಬಾಪ್ತು ಒಂದೂವರೆ ಲಕ್ಷ ರೂ.ಗಳಷ್ಟು ಹಣ ಇನ್ನೂ ಪಾವತಿಯಾಗಿಲ್ಲ ಎಂದು ಪಟ್ಟಣದ ಹೊಟೇಲ್ ಮಾಲೀಕರೊಬ್ಬರು ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು. ಈ ಸಮಸ್ಯೆ ಪರಿಹರಿಸುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್, ತಹಶೀಲ್ದಾರ್ ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಇಂದೂಧರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಆರಕ್ಷಕ ಉಪ ನಿರೀಕ್ಷಕರು, ಸೆಸ್ಕ್ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದ ಅಭಿಯಂತರರು, ವೈದ್ಯರುಗಳು, ಆಸ್ಪತ್ರೆ ಸಿಬ್ಬಂದಿಗಳು ಇದ್ದರು.