ಸೋಮವಾರಪೇಟೆ, ಮೇ, ೫: ಇಲ್ಲಿನ ಶ್ರೀ ಬಸವೇಶ್ವರ ದೇವಾಲಯ ದಲ್ಲಿ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ವೇದಿಕೆ ವತಿಯಿಂದ ಶ್ರೀ ಬಸವೇಶ್ವರ, ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಲಾಯಿತು.
ತಾಲೂಕು ಕದಳಿ ವೇದಿಕೆಯ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ಸಮಾಜ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವು. ಅವರುಗಳು ನೀಡಿದ ತತ್ವವನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಲು ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿಯವರು ಶರಣ ಸಾಹಿತ್ಯ ಪರಿಷತ್ತನ್ನು ರಚಿಸಿದ್ದಾರೆ ಎಂದರು.
ಮಹಿಳೆಯರಲ್ಲೂ ಜಾಗೃತಿ ಮನೋಭಾವ ಎಚ್ಚೆತ್ತುಕೊಳ್ಳುವಂತೆ ಮತ್ತು ಮಹಿಳೆಯರು ಸಕ್ರಿಯವಾಗಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಮಾಡಲು ಕದಳಿ ವೇದಿಕೆಯನ್ನು ಹುಟ್ಟು ಹಾಕಿ ದರು. ವಿಶ್ವಗುರು ಬಸವಣ್ಣ ನವರ ಕಾಯಕವೇ ಕೈಲಾಸ ಎಂಬ ತತ್ವ ವನ್ನ ಅಳವಡಿಸಿಕೊಂಡ ಸಿದ್ದಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಸ್ವಾಮಿಗಳು ನಡೆದಾಡುವ ದೇವರಾದರು ಎಂದರು.
ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಶೆಟ್ಟರಾದ ಮೃತ್ಯುಂಜಯ, ಅಕ್ಕನ ಬಳಗದ ಅಧ್ಯಕ್ಷೆ ಗೀತಾ ರಾಜು, ವೀರಶೈವ ಸಮಾಜದ ಕಾರ್ಯದರ್ಶಿ ಯುವರಾಜ್, ಕದಳಿ ವೇದಿಕೆ ಉಪಾಧ್ಯಕ್ಷೆ ಉಮಾ ರುದ್ರ ಪ್ರಸಾದ್ ಉಪಸ್ಥಿತರಿದ್ದರು. ಕದಳಿ ವೇದಿಕೆಯ ನಿರ್ದೇಶಕರುಗಳಾದ ನಾಗಮಣಿ ಯುವರಾಜ್, ಜಲಜ ವಿಜಯ್ ಕುಮಾರ್, ಕವಿತಾ ಸಂಜಯ್, ಸರೋಜಮ್ಮ, ಸುಶೀಲಮ್ಮ, ಮಾಯಾ ಗಿರೀಶ್, ಶೈಲಜ ಸೇರಿದಂತೆ ಇತರರು ಕಾರ್ಯಕ್ರಮ ನಿರ್ವಹಿಸಿದರು.