ಮಡಿಕೇರಿ, ಮೇ ೫: ಹದಗೆಟ್ಟ ರಸ್ತೆಗಳನ್ನು ದುರಸ್ತಿಪಡಿಸಲು ಸರಕಾರ ಅಗತ್ಯ ಅನುದಾನ ನೀಡಿದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹಾಗೂ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅಧ್ಯಕ್ಷತೆಯಲ್ಲಿ ಕೆಡಿಪಿ ತ್ರೆöÊಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಲೋಕೋಪಯೋಗಿ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ನಿರ್ಲಕ್ಷö್ಯ ತೋರುತ್ತಿದೆ. ಮಳೆಗಾಲ ಸಮೀಪಿಸುತ್ತಿದ್ದರೂ ರಸ್ತೆ ದುರಸ್ತಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಎಂದು ಸಚಿವರು, ಶಾಸಕರು ಅತೃಪ್ತಿ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ ಅಭಿಯಂತರುಗಳಾದ ಪ್ರಭು ಹಾಗೂ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ೨೦೨೫-೨೬ನೇ ಸಾಲಿನಲ್ಲಿ ಜಿಲ್ಲಾ ರಸ್ತೆ ನಿರ್ವಹಣೆ ಅಡಿಯಲ್ಲಿ ರಾಜ್ಯ ಹೆದ್ದಾರಿ ರಸ್ತೆಗಳಿಗೆ ರೂ. ೭.೪೪ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮಡಿಕೇರಿ ವಿಭಾಗದಲ್ಲಿ ೧೧, ಸೋಮವಾರಪೇಟೆ ವಿಭಾಗದಲ್ಲಿ ೨೦ ಹಾಗೂ ವೀರಾಜಪೇಟೆ ವಿಭಾಗದಲ್ಲಿ ೧೩ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಮುಖ್ಯರಸ್ತೆಗಳಿಗೆ ರೂ. ೧೪.೧೫ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು. ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಮಾತನಾಡಿ, ರಾಜ್ಯ ಸರಕಾರ ರಸ್ತೆ ದುರಸ್ತಿಗೆ ಹೆಚ್ಚಿನ ಅನುದಾನವನ್ನು ಜಿಲ್ಲೆಗೆ ನೀಡಿದೆ. ಅದರಲ್ಲೂ ಮಳೆಯಿಂದ ಹಾನಿಗೀಡಾಗುವ ಪ್ರದೇಶವಾಗಿರುವ ಕಾರಣ ಇದರ ಸದ್ಭಳಕೆಯಾಗಬೇಕೆಂಬ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ತೋರುತ್ತಿದೆ. ಆದರೆ, ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಳೆಗಾಲಕ್ಕೆ ಮುನ್ನ ಕೆಲಸಗಳು ಮುಕ್ತಾಯವಾಗಬೇಕು ಎಂದು ಖಡಕ್ ಸೂಚನೆ ನೀಡಿದರು.

ಗುತ್ತಿಗೆದಾರರಿಂದ ವಿಳಂಬ, ಕಚ್ಚಾವಸ್ತುಗಳ ಪೂರೈಕೆಯಲ್ಲಿ ತೊಡಕು ಉಂಟಾಗುತ್ತಿರುವುದರಿAದ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡ ಸಂದರ್ಭ ಕಿಡಿಕಾರಿದ ಸಚಿವರು, ಅಧಿಕಾರಿಗಳು ಸಮರ್ಪಕವಾಗಿ ಗುತ್ತಿಗೆದಾರರಿಗೆ ತಿಳಿಸಬೇಕು. ಯಾವುದೇ ತೊಡಕು ಉಂಟಾಗದAತೆ ಎಚ್ಚರಿಕೆ ವಹಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಶಾಸಕ ಮಂತರ್ ಗೌಡ ಮಾತನಾಡಿ, ಮುಂಗಾರು ಪೂರ್ವ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಆದರೆ, ನಿರೀಕ್ಷಿತ ವೇಗದಲ್ಲಿ ಕೆಲಸಗಳು ನಡೆಯುತ್ತಿಲ್ಲ. ಮುಟ್ಲು-ಹಮ್ಮಿಯಾಲ-ದೇವಸ್ತೂರು ರಸ್ತೆಯನ್ನು ಕಾಮಗಾರಿಗೆ ಪರಿಗಣಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ವೀರಾಜಪೇಟೆ-ಪೆರುಂಬಾಡಿ-ಮಾಕುಟ್ಟ, ಅಮ್ಮತ್ತಿ-ಕೊಂಡAಗೇರಿ-ಮೂರ್ನಾಡು, ಕರಿಕೆ-ಭಾಗಮಂಡಲ ರಸ್ತೆ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಗಮನ ಸೆಳೆದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಬಿಟ್ಟಂಗಾಲ-ಬಾಳುಗೋಡು ರಸ್ತೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.

ಶಾಸಕ ಮಂತರ್ ಮಾತನಾಡಿ, ಜೇಡಿಗುಂಡಿ ಭಾಗದಲ್ಲಿ ಪ್ರತಿಮಳೆಗಾಲದಲ್ಲೂ ಬರೆಕುಸಿತವಾಗಿ ಸಮಸ್ಯೆ ಉಂಟಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಹಾಗಾಗಿ ಈ ರಸ್ತೆಗೆ ಅನುದಾನ ಮೀಸಲಿಟ್ಟು, ಕಾಮಗಾರಿ ನಡೆಸಬೇಕು. ಗಾಳಿಬೀಡು ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಐಗೂರು ರಸ್ತೆ ಕಾಮಗಾರಿಯೂ ವಿಳಂಬವಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಭೂಮಿಪೂಜೆ ಆದ ನಂತರ ಕೆಲಸಗಳು ನಡೆಯಬೇಕು. ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಗುತ್ತಿಗೆದಾರರು ಒಪ್ಪಂದಕ್ಕೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಬದ್ಧರಾಗಿ ಕೆಲಸ ಮಾಡಬೇಕು. ಇದನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಭೋಸರಾಜು ಹೇಳಿದರು.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕಟ್ಟಡಕ್ಕೆ ಸಂಬAಧಿಸಿದAತೆ ಮಾಹಿತಿ ಪಡೆದ ಶಾಸಕರು ಪ್ರಾದೇಶಿಕ ವಿಜ್ಞಾನ ಕೇಂದ್ರ ಜನವರಿ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಹಾಗೆಯೇ ಮಡಿಕೇರಿ ಮತ್ತು ಕುಶಾಲನಗರ ಕಲಾಭವನ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಬೇಕು. ಹಾಗೆಯೇ ಕುಶಾಲನಗರ ನ್ಯಾಯಾಲಯ ಕಟ್ಟಡ ಪ್ರಗತಿ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭ ಮಾತನಾಡಿದ ಧರ್ಮಜ ಉತ್ತಪ್ಪ ಅವರು ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಕೊಠಡಿ ಶುಚಿತ್ವವಾಗಿಲ್ಲ. ಸರಿಯಾದ ನಿರ್ವಹಣೆ ಆಗಬೇಕು ಎಂದು ಸಲಹೆ ನೀಡಿದರು.

ಚೆಸ್ಕಾಂ ಅಧಿಕಾರಿ ರಾಮಚಂದ್ರ ಮಾತನಾಡಿ, ಮಳೆಗಾಲಕ್ಕೆ ಅಗತ್ಯ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ತಾಲೂಕುವಾರು ಕಂಬಗಳ ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಮಂತರ್ ಮಾತನಾಡಿ, ಕುಶಾಲನಗರ ಉಪವಿಭಾಗದಲ್ಲಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದರು.

ನಾಪೋಕ್ಲು ಭಾಗದಲ್ಲಿ ಲೈನ್‌ಮೆನ್ ಕೊರತೆ ಇರುವ ಬಗ್ಗೆ ಕೆಡಿಪಿ ಸದಸ್ಯ ಅಬ್ದುಲ್ ರೆಹಮಾನ್ ಗಮನಕ್ಕೆ ತಂದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ೧ ಮಳೆಗೆ ೪ ದಿನ ವಿದ್ಯುತ್ ಕಡಿತಗೊಳ್ಳುತ್ತಿದೆ ಎಂದು ಹೇಳಿದರು.

ಅರಣ್ಯ ಪ್ರದೇಶದಲ್ಲಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಅರಣ್ಯ ಇಲಾಖೆ ಮಾಡುತ್ತಿರುವ ಅಡ್ಡಿಯನ್ನು ಮಂತರ್ ಗೌಡ ಪ್ರಶ್ನಿಸಿದರು. ಹೀಗೆ ಮಾಡಿದರೆ ಅರಣ್ಯದೊಳಗೆ ಇರುವ ಅರಣ್ಯ ಇಲಾಖೆ ಕಚೇರಿ ಹಾಗೂ ವಸತಿಗೃಹಗಳ ವಿದ್ಯುತ್ ಅನ್ನು ಕಡಿತ ಮಾಡಬೇಕು. ಕೇವಲ ಜನಸಾಮಾನ್ಯರ ಮೇಲೆ ಏಕೆ ಈ ಕ್ರಮ ಎಂದು ಪ್ರಶ್ನಿಸಿದರು.

ಸಿಲಿಂಡರ್ ಕೊರತೆ

ಜಿಲ್ಲೆಯಲ್ಲಿ ಅಲ್ಪಪ್ರಮಾಣದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ಇದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು. ಒಟ್ಟು ೧.೯೩ ಲಕ್ಷ ಗೃಹಬಳಕೆ ಸಿಲಿಂಡರ್‌ಗಳ ಸಂಪರ್ಕವಿದ್ದು, ದಿನನಿತ್ಯ ೪ ಸಾವಿರದಷ್ಟು ಸಿಲಿಂಡರ್‌ಗಳ ಬೇಡಿಕೆಯಿದೆ. ಈ ಪೈಕಿ ೩೬೦೦ರಷ್ಟು ಸಿಲಿಂಡರ್‌ಗಳು ಪೂರೈಕೆಯಾಗುತ್ತಿವೆ. ವಾಣಿಜ್ಯ ಸಿಲಿಂಡರ್‌ಗಳ ಅಭಾವ ಕೊಂಚ ಹೆಚ್ಚಿದೆ ಎಂದು ವಿವರಿಸಿದರು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಸ್ಯೆಯಾಗದಂತೆ ಎಚ್ಚರಿಕೆವಹಿಸಲಾಗಿದೆ ಎಂದರು. ಸಿಲಿಂಡರ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳಿವೆ. ಇದರಿಂದ ಹೆಚ್ಚಿನ ಹಣಕ್ಕೆ ಮಾರಾಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಮಂತರ್ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸೋಮಶೇಖರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಹಾಜರಿದ್ದರು.

ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮ

ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಚಿವ ಭೋಸರಾಜು ಹಾಗೂ ಶಾಸಕ ಮಂತರ್ ಗೌಡ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಶೇ ೨೫ ಹೋಂಸ್ಟೇಗಳು ನೋಂದಾಯಿಸಿಕೊAಡಿಲ್ಲ. ೨೮೨ ಹೊಂಸ್ಟೇಗಳ ನೋಂದಣಿ ಬಾಕಿ ಇದ್ದು, ಅನಧಿಕೃತ ಹೋಂಸ್ಟೇಗಳಿಗೆ ನೋಟೀಸ್ ನೀಡುವ ಕೆಲಸವಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರೂ (ಪ್ರಬಾರ) ಆಗಿರುವ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ಪೊಲೀಸ್ ಇಲಾಖೆಯ ಮೂಲಕವೂ ತಪಾಸಣೆ ಮಾಡಲಾಗುತ್ತಿದೆ. ಅಪರಾಧ ಚಟುವಟಿಕೆ ನಡೆದಿದ್ದಲ್ಲಿ ನಿಗಾ ವಹಿಸಲಾಗುತ್ತದೆ. ಮಾಲೀಕರ ಬಳಿ ಕೋವಿ ಇದ್ದಲ್ಲಿ ಅದರ ಪರವಾನಗಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು. ಸಚಿವ ಎನ್.ಎಸ್. ಭೋಸರಾಜು ಮಾತನಾಡಿ, ಕಾಲಮಿತಿಯಲ್ಲಿ ಅನಿರೀಕ್ಷಿತ ಭೇಟಿಯನ್ನು ಮಾಡುವ ಮೂಲಕ ವ್ಯವಸ್ಥೆಯನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.