ಮುಳ್ಳೂರು, ಮೇ ೫: ಕುಲ ಗುರುಗಳು ಹೇಳಿಕೊಟ್ಟ ಸಂಸ್ಕೃತಿ ಸಂಸ್ಕಾರದ ಅಡಿಪಾಯದಲ್ಲಿ ನಾವು ಮುನ್ನಡೆದರೆ ಮಾತ್ರ ಸಮುದಾಯವೊಂದು ಬೆಳೆಯಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಹಾಸನ ಮತ್ತು ಕೊಡಗು ಶಾಖಾ ಮಠದ ಶ್ರೀ ಶಂಬುನಾಥ ಸ್ವಾಮೀಜಿ ಹೇಳಿದರು.

ಸಮೀಪದ ಶನಿವಾರಸಂತೆ ಒಕ್ಕಲಿಗರ ನೂತನ ಸಂಘದ ಉದ್ಘಾಟನೆ ಮತ್ತು ಚಿನ್ನಳ್ಳಿಯಲ್ಲಿ ನಿರ್ಮಾಣವಾಗಲಿರುವ ಸಂಘದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಶನಿವಾರಸಂತೆ ಪಟ್ಟಣದ ಯಶಸ್ವಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಆದಿಚುಂಚನಗಿರಿ ಸಂಸ್ಥಾನದ ಮೂಲ ಗುರುಗಳ ಕೃಪಾಕಟಾಕ್ಷಗಳಿಂದ ಮತ್ತು ಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಕುಲದ ಬೆಳವಣಿಗೆ ಮತ್ತು ಸಮಾಜದ ಬೆಳವಣಿಗೆಗೆ ನೀಡಿರುವ ಮಾರ್ಗದರ್ಶನದ ದಾರಿಯಲ್ಲಿ ಒಕ್ಕಲಿಗ ಸಮುದಾಯ ಮುನ್ನಡೆಯಬೇಕಿದೆ. ಅಲ್ಲದೆ ಬೆಂಗಳೂರು ನಿರ್ಮಿಸಿದ ಕೆಂಪೇಗೌಡರ ಆದರ್ಶ, ಚಿಂತನೆಗಳನ್ನು ಕುಲ ಬಾಂಧವರು ಬೆಳೆಸಿಕೊಂಡರೆ ಒಕ್ಕಲಿಗರ ಸಂಘ ಮತ್ತು ಸಂಘಟನೆ ಹಾಗೂ ಸಮುದಾಯವೂ ಬೆಳೆಯುತ್ತದೆ ಎಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ಮಾಜಿ ಪ್ರಧಾನಿ ದೇವೇಗೌಡ, ಎಸ್.ಎಂ.ಕೃಷ್ಣರAತಹ ರಾಜಕೀಯ ಕಲಿಗಳು, ಇನ್ನು ಮುಂತಾದವರು ಒಕ್ಕಲಿಗ ಸಮುದಾಯದಲ್ಲಿ ಜನಿಸಿರುವುದು ನಮಗೆ ಹೆಮ್ಮೆ ಎಂದ ಅವರು ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಂಘಟನೆಯ ಬೆಳವಣಿಗೆಗೆ ಇಲ್ಲಿ ಸಂಘದ ಅವಶ್ಯಕತೆ ಇತ್ತು ಈಗ ಇದು ಅಸ್ತಿತ್ವಕ್ಕೆ ಬಂದಿರುವುದು ಶ್ಲಾಘನೀಯ ಎಂದರು

ಮಾಜಿ ಶಾಸಕ ಮತ್ತು ಸಕಲೇಶಪುರ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಎಂ,ವಿಶ್ವನಾಥ್ ಮಾತನಾಡಿ, ಸಂಘ, ಸಂಘಟನೆ ಪ್ರಬಲವಾದರೆ ಸಮುದಾಯವೂ ಪ್ರಬಲಗೊಳ್ಳುತ್ತದೆ. ಮಲೆನಾಡು ವ್ಯಾಪ್ತಿಯಲ್ಲಿ ಸಮುದಾಯದವರು ಆರ್ಥಿಕವಾಗಿ ಸಹಾಯ ಮಾಡುವಂತಹ ಮನೋಭಾವನೆ ಉಳ್ಳವರಾಗಿದ್ದು ಈ ನಿಟ್ಟಿನಲ್ಲಿ ಸಂಘದ ಬೆಳವಣಿಗೆಗೆ ಕುಲಬಾಂಧವರು ಆರ್ಥಿಕವಾಗಿ ಕೈಜೋಡಿಸುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಒಕ್ಕಲಿಗರ ಸಂಘದ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಹಾಸನ ಜಿಲ್ಲಾಧ್ಯಕ್ಷ ಮುದ್ದೇಗೌಡ, ಕೊಡಗು ಜಿಲ್ಲಾಧ್ಯಕ್ಷ ಎಸ್.ಎಂ.ಚAಗಪ್ಪ, ಸಕಲೇಶಪುರ ಮಾಜಿ ತಾ.ಪಂ.ಅಧ್ಯಕ್ಷ ನಾಗರಾಜ್ ಮಾತನಾಡಿದರು. ಶನಿವಾರಸಂತೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವೇಗೌಡ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ಹರೀಶ್‌ಕುಮಾರ್, ಒಕ್ಕಲಿಗ ಪ್ರಮುಖರಾದ ವಿನೋದ್‌ಚಂದ್ರ, ಚೈತ್ರ, ಮುತ್ತಣ್ಣ, ಗಿರೀಶ್ ಮಲ್ಲಪ್ಪ, ಭರತ್‌ಕುಮಾರ್, ಚಂದ್ರಿಕಾ ಕುಮಾರ್ ಮತ್ತಿತರ ಪ್ರಮುಖರು ಇದ್ದರು.

- ಭಾಸ್ಕರ್ ಮುಳ್ಳೂರು