ಸೋಮವಾರಪೇಟೆ, ಮೇ ೫: ನಿನ್ನೆ ದಿನ ಜಮ್ಮು ಮತ್ತು ಕಾಶ್ಮೀರಾದ ಪುಲ್ವಾಮಾದಲ್ಲಿ ರಕ್ಷಣಾ ಕರ್ತವ್ಯದಲ್ಲಿದ್ದಾಗಲೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಸಿ.ಆರ್.ಪಿ.ಎಫ್. ಯೋಧ ಕೆ.ಜೆ. ನವೀನ್ ಅವರ ಪಾರ್ಥೀವ ಶರೀರ ಇಂದು ರಾತ್ರಿ ಸ್ವಗ್ರಾಮಕ್ಕೆ ಆಗಮಿಸುವ ಬಗ್ಗೆ ಕುಟುಂಬ ಮೂಲಗಳು ತಿಳಿಸಿದ್ದು, ತಾ.೬ ರಂದು ಸ್ವಗ್ರಾಮ ಯಡವಾರೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ತಾಲೂಕಿನ ಐಗೂರು ಗ್ರಾ.ಪಂ. ವ್ಯಾಪ್ತಿಯ ಯಡವಾರೆ ನಿವಾಸಿ ಕೀಜನ ಜೋಯಪ್ಪ ಹಾಗೂ ವಿಶಾಲಾಕ್ಷಿ ಅವರ ಪುತ್ರ, ಕೆ.ಜೆ. ನವೀನ (೪೦) ಅವರು ನಿನ್ನೆ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಪುಲ್ವಾಮಾದಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭವೇ ರಕ್ಷಣಾ ಕಾರ್ಯಕ್ಕೆ ನೀಡಿದ್ದ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಇಂದು ಶ್ರೀನಗರಕ್ಕೆ ಪಾರ್ಥೀವ ಶರೀರವನ್ನು ತಂದು ಕೇಂದ್ರ ಕಚೇರಿಯಲ್ಲಿ ಸಿ.ಆರ್.ಪಿ.ಎಫ್. ನಿಂದ ಗೌರವ ವಂದನೆ ಸಲ್ಲಿಸಿ ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಲಾಯಿತು. ಬೆಂಗಳೂರಿನಿAದ ಸಿ.ಆರ್.ಪಿ.ಎಫ್. ವಾಹನದಲ್ಲಿ ನವೀನ್ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಸಿದ್ಧತೆಗಳು ನಡೆದಿದ್ದು, ಮಧ್ಯರಾತ್ರಿಯ ವೇಳೆಗೆ ಯಡವಾರೆ ತಲುಪಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾ. ೬ ರಂದು (ಇಂದು) ಅಪರಾಹ್ನ ಒಳಗೆ ಯಡವಾರೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತದೇಹದೊಂದಿಗೆ ೮ ಮಂದಿ ಸಿ.ಆರ್.ಪಿ.ಎಫ್.ನ ಯೋಧರು ಆಗಮಿಸುತ್ತಿದ್ದು, ಸೇನಾ ಪ್ರಕ್ರಿಯೆಗಳನ್ನು ನಡೆಸಲಿದ್ದಾರೆ. ತಾ.೬ ರಂದು ಹಿರಿಯ ಅಧಿಕಾರಿಗಳು ಭೇಟಿ ನೀಡಿದ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ. ನವೀನ್ ಅವರು ಪುಲ್ವಾಮಾದ ವಾಚ್ ಟವರ್‌ನಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗಲೇ ಗುಂಡು ಹಾರಿಸಿಕೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಅಲ್ಲಿನ ಮೂಲಗಳು ತಿಳಿಸಿವೆ.