ಭಾರತದ ಪ್ರಜಾಪ್ರಭುತ್ವದ ಸೌಂದರ್ಯ ಗಮನಿಸಲು ಇಲ್ಲಿನ ಚುನಾವಣಾ ಫಲಿತಾಂಶವನ್ನು ನೋಡಬೇಕು.
ಪ್ರಜೆ ಎಂಬ ಮಹಾಪ್ರಭು ನೀಡುವ ಮತದಾನ ಎಂಬ ತನ್ನ ಹಕ್ಕು ಚಲಾವಣೆಯಲ್ಲಿ ಎಂಥ ಬಲಿಷ್ಟರನ್ನೂ ಅಧಿಕಾರದಿಂದ ಕೆಡವಿ ಹಾಕುತ್ತಾನೆ. ಅಪರಿಚಿತರಾದವರನ್ನೂ ಮತದ ಮೂಲಕ ಅಧಿಕಾರದ ಗದ್ದುಗೆಗೆ ಆಯ್ಕೆ ಮಾಡುತ್ತಾನೆ.
ಈ ಮಾತಿಗೆ ಮತ್ತೊಂದು ಉದಾಹರಣೆಯಾಗಿ ಕಂಡುಬರುವುದೇ ಈ ಸಲದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ.
ಮತದಾನೋತ್ತರ ಸಮೀಕ್ಷೆಗಳೆಲ್ಲವನ್ನೂ ಸುಳ್ಳು ಮಾಡುವಂತೆ ಇಂಥ ಸಮೀಕ್ಷಾ ಸಂಸ್ಥೆಗಳ ಮಾದರಿಯನ್ನೇ ಪೊಳ್ಳು ಎಂಬುದನ್ನು ನಿರೂಪಿಸುವಂತೆ ಪಂಚರಾಜ್ಯಗಳಲ್ಲಿ ವಿಭಿನ್ನ ರೀತಿಯ ಫಲಿತಾಂಶಕ್ಕೆ ಕಾರಣವಾದ ಈ ಸಲದ ಫಲಿತಾಂಶ ನಿಜಕ್ಕೂ ಮತದಾರರ ತೀರ್ಮಾನದ ಬಗ್ಗೆ ಅಚ್ಚರಿ ಮೂಡಿಸುವಂತಿದೆ.
ವಿಜಯ್ ಈಗ ನಿಜವಾಗಿಯೂ ಜನನಾಯಕ!
ತಮಿಳುನಾಡನ್ನೇ ಗಮನಿಸಿ - ಪಾರಂಪರಿಕವಾಗಿ ತಮಿಳುನಾಡಿನಲ್ಲಿ ಒಮ್ಮೆ ನಾನು-ಮತ್ತೊಮ್ಮೆ ನೀನು ಎಂಬAತೆ ಅಧಿಕಾರಕ್ಕೇರುತ್ತಲೇ ಬಂದಿದ್ದ ಡಿ.ಎಂ.ಕೆ. ಮತ್ತು ಎ.ಐ.ಎ.ಡಿ.ಎಂ.ಕೆ.ಯನ್ನು ಈ ಬಾರಿ ಮೂಲೆಗುಂಪು ಮಾಡಲಾಗಿದೆ. ಅದರಲ್ಲಿಯೂ ಬಲಿಷ್ಟ ಪಕ್ಷ ಎಂದೇ ನಂಬಲಾಗಿದ್ದ ಡಿ.ಎಂ.ಕೆ.ಯನ್ನೂ ಕನಿಷ್ಟ ಸಂಖ್ಯೆಗಳೊAದಿಗೆ ಕೆಡವಲಾಗಿದೆ. ಇಷ್ಟಕ್ಕೂ ಹೀಗೆ ಕೆಡವಿದ್ದು ಯಾರು ಎಂದು ನೋಡಿದರೆ, ಕೇವಲ ಎರಡೇ ವರ್ಷಗಳ ಮೊದಲು ತಮಿಳುನಾಡಿನಲ್ಲಿ ಸಾಕಷ್ಟು ಭ್ರಮೆಗಳೊಂದಿಗೆ ಸ್ಥಾಪನೆಯಾಗಿ ಚುನಾವಣೆಗೆ ಎರಡೇ ತಿಂಗಳಿರುವಾಗ ಅಬ್ಬರಿಸುತ್ತಾ ಕಣಕ್ಕಿಳಿದ ಟಿವಿಕೆ ಎಂಬ ಹೊಚ್ಚ ಹೊಸ ಪಕ್ಷ. ರಾಜಕೀಯದಲ್ಲಿ ಯಾವುದೇ ಪಕ್ಷವಾದರೂ ಬೇರೂರಲು ಏನಿಲ್ಲವೆಂದರೂ ೫ -೬ ವರ್ಷಗಳಾದರೂ ಬೇಕು. ಕನಿಷ್ಟ ೨ ಚುನಾವಣೆಯನ್ನಾದರೂ ಎದುರಿಸಿರಬೇಕು. ಆದರೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಜೋಸೆೆಫ್ ವಿಜಯನ್ ಎಂಬಾತ ಎಂ.ಜಿ. ಆರ್ ಮತ್ತು ಜಯಲಲಿತಾ ಮಾದರಿಯಲ್ಲಿ ತಮಿಳುನಾಡನ್ನು ಆಳಬೇಕು ಎಂಬ ಮಹಾದಾಸೆಯನ್ನು ಹೊಂದಿ ಚುನಾವಣಾ ಕಣಕ್ಕಿಳಿದು ಅಧಿಕಾರಕ್ಕೇರುತ್ತಿರುವ ರೀತಿ ನಿಜಕ್ಕೂ ರಾಜಕೀಯ ವಿಶ್ಲೇಷಕರೇ ನಿಬ್ಬೆರಗಾಗುವಂತೆ ಮಾಡಿದೆ.
ಆಂಧ್ರದಲ್ಲಿ ಎನ್.ಟಿ. ರಾಮರಾವ್ ಎಂಬ ಚಿತ್ರನಟ ಕೂಡ ಇದೇ ರೀತಿ ತನ್ನ ಮೊದಲ ಚುನಾವಣೆಯಲ್ಲಿಯೇ ಅತ್ಯಧಿಕ ಸ್ಥಾನಗಳಿಸಿ ಮುಖ್ಯಮಂತ್ರಿಯಾಗಿ ಅನೇಕ ವರ್ಷಗಳ ಕಾಲ ಅಧಿಕಾರ ನಡೆಸಿದ್ದನ್ನು ವಿಜಯ್ ಸಾಧನೆ ಕೂಡ ನೆನಪಿಸುವಂತಿದೆ.
ನಟ ಜೋಸೆಫ್ ವಿಜಯ್ ಅಭಿಮಾನಿಗಳ ಸಂಘವಾದ ವಿಜಯ್ ಮಕ್ಕಳ ಇಯಕ್ಕಂ ೨೦೨೧ ರಲ್ಲಿ ತಮಿಳುನಾಡಿನ ೧೬೯ ಪಂಚಾಯತ್ ಗಳಲ್ಲಿ ೧೨೯ ನ್ನು ಗೆದ್ದಿತು. ಇನ್ನು ರಾಜಕೀಯ ಪಕ್ಷ ಕಟ್ಟಬಹುದು ಎಂದು ವಿಜಯ್‌ಗೆ ಖಾತ್ರಿಯಾಯಿತು. ೨೦೨೪ ರಲ್ಲಿ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಝಗಂ (ಟಿವಿಕೆ) ಕಟ್ಟಿದರು. ಪಕ್ಷ ಹುಟ್ಟಿ ಎರಡೇ ಎರಡು ವರ್ಷಗಳಾಗಿವೆ. ಹೀಗಿರುವಾಗಲೇ ೭೭ ವರ್ಷಗಳ ಡಿಎಂಕೆ ಮತ್ತು ೫೪ ವರ್ಷಗಳ ಇತಿಹಾಸವಿರುವ ಎ.ಐ.ಎ.ಡಿ.ಎಂ.ಕೆ.ಯನ್ನು ಮಣಿಸಿ ದಕ್ಷಿಣದ ದೊಡ್ಡ ರಾಜ್ಯವನ್ನು ಆಳುವ ಮಟ್ಟಕ್ಕೆ ಬಂದಿದೆ.
ಪ್ರತೀ ಚಿತ್ರಕ್ಕೂ ೨೦೦ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ವಿಜಯ್, ದಿಢೀರನೆ ಚಿತ್ರರಂಗಕ್ಕೆ ವಿದಾಯ ಹೇಳಿ ರಾಜಕೀಯ ಪಕ್ಷ ಸ್ಥಾಪಿಸಿ, ಎರಡೇ ತಿಂಗಳಲ್ಲಿ ಇಡೀ ರಾಜ್ಯ ಪ್ರವಾಸ ಮಾಡಿ, ಕೋಟ್ಯಂತರ ಅಭಿಮಾನಿಗಳನ್ನು ಸಂಪರ್ಕಿಸಿ, ರಾಜಕೀಯದಲ್ಲಿಯೂ ತನ್ನ ಸಿನಿಮಾದಂತೆ ಬ್ಲಾಕ್ ಬಸ್ಟರ್ ಸಾಧನೆ ಮಾಡಿದ್ದು ಖಂಡಿತಾ ಅಚ್ಚರಿಯ ಮತ್ತು ಗಮನಾರ್ಹ ವಿಚಾರವೇ ಹೌದು.
ಪ್ರತೀ ಕ್ಷೇತ್ರದಲ್ಲಿಯೂ ವಿದ್ಯಾವಂತ ಮತ್ತು ರಾಜಕೀಯದಲ್ಲಿ ಹೊಸ ಮುಖಗಳನ್ನೇ ಅಭ್ಯರ್ಥಿಗಳನ್ನಾಗಿಸಿದ್ದು ಕೂಡ ವಿಜಯ್ ಪಕ್ಷವಾದ ಟಿವಿಕೆಯ ಭರ್ಜರಿ ಯಶಸ್ಸಿಗೆ ಕಾರಣ. ಜೆನ್ ಜೀ ಪೀಳಿಗೆ, ಮಹಿಳಾ ಮತದಾರರು ಕೂಡ ವಿಜಯ್ ಸಿದ್ದಾಂತಕ್ಕೆ ಒಲವು ತೋರಿದ್ದರು. ನವವಿವಾಹಿತರಿಗೆ ಚಿನ್ನಾಭರಣದ ಘೋಷಣೆ ಕೂಡ ವಿಜಯ್ ಪಕ್ಷದ ಗೆಲುವಿಗೆ ಸಹಕಾರಿಯಾಯಿತು. ಡಿಎಂ.ಕೆ. ವಿರೋಧಿ ಆಡಳಿತದ ಅಲೆ ಕೂಡ ವಿಜಯ್ ಪಾಲಿಗೆ ಸೂಕ್ತಕಾಲದಲ್ಲಿ ನೆರವಾಯಿತು.
ಸ್ಟಾಲಿನ್ ಸೋತಿರುವುದು ಕಾಂಗ್ರೆಸ್ ಸೇರಿದಂತೆ ಇಂಡಿ ಕೂಟಕ್ಕೆ ಬಹಳ ದೊಡ್ಡ ನಷ್ಟ. ಇದೀಗ ವಿಜಯ್ ಅಧಿಕಾರಕ್ಕೇರಲು ಬೇಕಾದ ಬಹುಮತಕ್ಕಾಗಿ ಕಾಂಗ್ರೆಸ್ ಏನಾದರೂ ಕೈಜೋಡಿಸಿದ್ದೇ ಆದಲ್ಲಿ ಡಿಎಂಕೆಯ ಆಕ್ರೋಶÀವನ್ನು ಕಾಂಗ್ರೆಸ್ ಎದುರಿಸಬೇಕಾದ ಸಾಧ್ಯತೆ ಹೆಚ್ಚಾಗಿದೆ. ಭರ್ಜರಿ ಗೆಲವು ಸಾಧಿಸಿರುವ ಪಕ್ಷದೊಂದಿಗೆ ಅಧಿಕಾರ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ಪಾಲಿಗೆ ಉತ್ತಮ ಅವಕಾಶ ಇದೆಯಾದರೂ ಹಾಗೇನಾದರೂ ಮಾಡಿದ್ದೇ ಆದಲ್ಲಿ ತನ್ನ ಬಹು ವರ್ಷಗಳ ರಾಜಕೀಯ ಗೆಳೆಯ ಡಿಎಂ.ಕೆ.ಯನ್ನು ಶಾಶ್ವತವಾಗಿ ಎದುರು ಹಾಕಿಕೊಳ್ಳಬೇಕಾದ ಸಂದಿಗ್ಧತೆಯಲ್ಲಿ ಕಾಂಗ್ರೆಸ್ ಇದೆ.
ಹಾಗೆ ನೋಡಿದರೆ ಬಿಜೆಪಿ ಬೆಂಬಲಿತ ಎ.ಐ.ಎ.ಡಿ.ಎಂ.ಕೆ. ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮ ಸಾಧನೆಯನ್ನು ತಮಿಳುನಾಡಿನಲ್ಲಿ ತೋರಿದೆ. ಡಿಎಂಕೆ ಪಾರಂಪರಾಗತ ಮತಗಳನ್ನು ಚೆನ್ನಾಗಿಯೇ ಕಸಿದಿರುವ ಟಿವಿಕೆಯು ಡಿಎಂ.ಕೆ ಪಾಲಿಗೆ ತಮಿಳುನಾಡಿನಲ್ಲಿ ಶಾಶ್ವತ ಶತ್ರುವಾಗಿಸಿದೆ. ಮತ್ತೆ ಅಧಿಕಾರ ಪಡೆಯಲು ಡಿಎಂ.ಕೆ ಪಾಲಿಗೆ ಅನೇಕ ದಶಕಗಳೇ ಬೇಕಾಗಬಹುದು. ಅದು ಡಿಎಂ.ಕೆ. ಇರಬಹುದು, ಎ.ಐ.ಎ.ಡಿ.ಎಂ.ಕೆ. ಇರಬಹುದು, ತಮಿಳುನಾಡು ಎಂಬ ದ್ರಾವಿಡರ ಪಾರಮ್ಯದ ನೆಲೆಯಲ್ಲಿ ಟಿವಿಕೆ ಎಂಬ ಪಕ್ಷದ ಸಾಧನೆ ಸಿನಿಕತನದಂತೆ ಒಂದು ಸಿನಿಮಾದ ಕಥೆಯಂತೆಯೇ ಗೋಚರಿಸಿದರೆ ಅಚ್ಚರಿಯಿಲ್ಲ. ಸಿನಿಮಾಗಳ ಕಥೆಯಂತೆ ವಿಜಯ್ ನೇತೃತ್ವದಲ್ಲಿ ಟಿವಿಕೆ ತಮಿಳರ ನಾಡಿನಲ್ಲಿ ಉತ್ತಮ ಆಡಳಿತ ನೀಡುತ್ತದೆಯೋ ಅಥವಾ ಅರವಿಂದ್ ಕ್ರೇಜಿವಾಲ್ ಅವರ ಆಮ್ ಆದ್ಮಿ ಪಕ್ಷದಂತೆ ಭ್ರಮ ನಿರಸನ ಮಾಡುತ್ತದೆಯೋ ಎಂಬುದಕ್ಕೆ ಕ್ಲೆಮ್ಯಾಕ್ಸ್ ದೂರದಲ್ಲಿದೆ.
ದೀದಿ ಮಣಿಸಿದ ಮೋದಿ
ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ತವರು ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮೂಲಕ ತನ್ನ ಬಹಳ ವμðಗಳ ಕನಸನ್ನು ನನಸಾಗಿಸುತ್ತಿದೆ; ಪಟ್ಟಕ್ಕೇರುತ್ತಿದೆ.
ದಶಕಗಳ ಕಾಲ ಕಾಂಗ್ರೆಸ್, ೩೬ ವರ್ಷ ಮಾರ್ಕಿಸ್ಟ್, ೧೫ ವರ್ಷ ಮಮತಾ ಬ್ಯಾನರ್ಜಿ ಆಳಿದ ಬಳಿಕ ಬಿಜೆಪಿಯ ತಾವರೆ ಪಶ್ಚಿಮ ಬಂಗಾಳದಲ್ಲಿ ಅರಳುವ ಮೂಲಕ ಹೊಸ ಇತಿಹಾಸವನ್ನೇ ಬರೆದಿದೆ.
೨೦೦೧ ರಲ್ಲಿ ಸೊನ್ನೆ, ೨೦೦೬ ಸೊನ್ನೆ, ೨೦೧೧ ರಲ್ಲಿ ಮತ್ತೆ ಸೊನ್ನೆ, ೨೦೧೬ ರಲ್ಲಿ ೩, ೨೦೨೧ ರಲ್ಲಿ ೭೭.. ಈಗ ೨೦೦ ದಾಟಿರುವುದು ಕಡಿಮೆ ಸಾಧನೆಯೇನಲ್ಲ. ಈ ವಿಜಯ ಯಾತ್ರೆಯ ರೂವಾರಿ ಖಂಡಿತವಾಗಿಯೂ ಅಮಿತ್ ಶಾ. ಅಮಿತ್ ಶಾ ಹಲವಾರು ತಿಂಗಳುಗಳಿAದ ಪಶ್ಚಿಮ ಬಂಗಾಳ ಚುನಾವಣೆಗಾಗಿ ತನ್ನ ಗಮನ ನೆಟ್ಟಿದ್ದರು. ಎಪ್ರಿಲ್‌ನಲ್ಲಿ ೧೫ ದಿನ ಅಲ್ಲೇ ಇದ್ದರು. ಪ್ರತೀ ಕ್ಷೇತ್ರದಲ್ಲಿಯೂ ಆರ್ ಎಸ್ ಎಸ್ ಜತೆಗೂಡಿ ೨೦ ಸಾವಿರ ಕಟ್ಟಾ ಕಾರ್ಯಕರ್ತರ ಪಡೆಯನ್ನು ಕಟ್ಟಿದರು. ಮಮತಾ ಬ್ಯಾನರ್ಜಿ ಈ ಬಾರಿ ಆಕ್ರೋಶÀದಿಂದಲೇ ಚುನಾವಣೆಯುದ್ದಕ್ಕೂ ಪತರುಗುಟ್ಟುತ್ತಿದ್ದರೆ, ಅಮಿತ್ ಷಾ, ಸದ್ದು ಮಾಡುವ ಬದಲಿಗೆ ಮತದಾರರ ಮನೆ ತಲುಪತೊಡಗಿದರು. ಆಡಳಿತ ವಿರೋಧಿ ಅಲೆ, ದೀದಿ ಖ್ಯಾತಿಯ ಮಮತಾ ರಾಜ್ಯದಲ್ಲಿನ ಅರಾಜಕತೆ, ಗುಂಡಾಗಿರಿ, ಕೊಲೆ, ಅತ್ಯಾಚಾರ, ಬಾಂಗ್ಲಾ ದೇಶದಿಂದ ಬಂದ ವಲಸಿಗರ ದಬ್ಬಾಳಿಕೆಗೆ ಬಂಗಾಳದ ಜನತೆ ರೋಸಿ ಹೋಗಿದ್ದರು. ಹೀಗಾಗಿ ನಿರೀಕ್ಷೆಯನ್ನೂ ಮೀರಿ ಆ ರಾಜ್ಯದ ಜನತೆ ಮೌನವಾಗಿಯೇ ತಮ್ಮ ಅಂತಿಮ ತೀರ್ಪನ್ನು ದೀದಿ ವಿರೋಧವಾಗಿ ನೀಡಿದ್ದಾರೆ. ೧೫ ವರ್ಷಗಳ ಹಿಂದೆ ಭಾರತದ ಅತೀ ದೊಡ್ಡ ಕಮ್ಯೂನಿಸ್ಟ್ ರಾಜ್ಯದಲ್ಲಿ ಕಮ್ಯೂನಿಸ್ಟ್ ಸಂಸ್ಕೃತಿಯನ್ನು ಮೂಲೆಗುಂಪು ಮಾಡಿ ಮಮತಾ ಬ್ಯಾನರ್ಜಿ ಎಂಬ ಸಿಡಿಗುಂಡಿನAಥ ಮಹಿಳೆ ಹೇಗೆ ಅಧಿಕಾರಕ್ಕೆ ಬಂದರೋ ಈಗ ಆ ಕಮ್ಯೂನಿಸ್ಟ್ ಸಂಸ್ಕತಿಯ ಮಣ್ಣಿನಲ್ಲಿಯೇ ಮೋದಿ - ಅಮಿತ್ ಷಾ. ಮತ್ತು ಸುಂವೆAದು ಅಧಿಕಾರಿಯ ತಂಡ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಕೂಡ ರಾಜಕೀಯದಲ್ಲಿ ದಾಖಲೆಯೇ.
ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಅಳಿಸಿಹಾಕಿದ್ದು ಚುನಾವಣೆ ದಿನಗಳಲ್ಲಿ ಸೇನಾ ತುಕಡಿ ನಿಯೋಜಿಸಿ ಅಕ್ರಮ ರಹಿತ, ದಾಂಧಲೆ ರಹಿತ, ಶಾಂತಿಯುತ ಚುನಾವಣೆಗೆ ಅವಕಾಶ ಕಲ್ಪಿಸಿದ್ದು ಕೂಡ ಬಿಜೆಪಿ ಗೆಲುವಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಬಾಂಗ್ಲಾದಿAದ ಬರುವ ಅಕ್ರಮ ನುಸುಳುಕೋರರನ್ನೆಲ್ಲ ಮತದಾರರು ಅಂತ ಮಾಡಿಸಿಕೊಂಡಿರುವವರಿಗೆ ಬಿಜೆಪಿ ಗೆಲವು ಸಾಧಿಸಿದ್ದು ಎಚ್ಚರಿಕೆಯ ಕರೆಗಂಟೆ. ಆಯಾ ರಾಜ್ಯದ ಸವಲತ್ತು ಪಡೆಯುತ್ತಾ, ಆತಂಕ ಹುಟ್ಟಿಸುತ್ತಿರುವ, ಆಧಾರ್, ವೋಟರ್ ಐಡಿ, ರೇಶನ್ ಕಾರ್ಡ್ ಎಲ್ಲ ಮಾಡಿಸಿಕೊಂಡು, ಸ್ಥಳೀಯರಿಗೇ ಧಮಕಿ ಹಾಕುವ ಬಾಂಗ್ಲಾ ನಿರಾಶ್ರಿತರಿಂದ ನೈಜ ಬಂಗಾಳಿಗರಿಗೆ ಈಗ ರಕ್ಷಣೆ ದೊರೆಯುವ ಆಶಾವಾದ. ಬಂದಿದೆ.
ಹಠಮಾರಿ ಹೆಣ್ಣು, ಛಲಗಾತಿ ರಾಜಕಾರಣಿ ಮಮತಾ ಪಾಲಿಗೆ ಈ ಫಲಿತಾಂಶ ಬಹಳ ದೊಡ್ಡ ಆಘಾತವಾಗಿದೆ. ಬಿಜೆಪಿಗೆ ಸಿಕ್ಕಿದ ಅಧಿಕಾರವನ್ನು ಮರಳಿ ಪಡೆಯಲು ದೀದಿ ಮತ್ತೆ ಎಷ್ಟು ವರ್ಷ ಕಾಯಬೇಕೋ? ಎಷ್ಟು ಬೆವರನ್ನು ಇಳಿವಯಸ್ಸಿನಲ್ಲಿ ಸುರಿಸಬೇಕೋ? ಅದಕ್ಕಾಗಿ ಎಷ್ಟೆಲ್ಲಾ ಕಿರುಚಾಡಬೇಕೋ? ಆದರೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ ಕೂಡ ಟಿಎಂ.ಸಿ ಸದಾ ಕಾಟ ಕೊಡುವ ಪಕ್ಷವಾಗಿ ಬಿಜೆಪಿಯನ್ನು ಕಾಡಲಿದೆ. ಇತಿಹಾಸ ಬಲ್ಲವರು ಮಮತಾ ಬ್ಯಾನರ್ಜಿಯನ್ನು ತಿಳಿದವರು ಒಂದು ಅಂಶವನ್ನು ಸ್ಪಷ್ಟಪಡಿಸುತ್ತಾರೆ. ದೀದಿ ಖಂಡಿತಾ ಸುಮ್ಮನೆ ಕೂರುವ ಹೆಂಗಸಲ್ಲ.!
ಕಡಲ ತೀರದ ಕೇರಳಂನಲ್ಲಿ ಕೈ ಕಮಾಲ್
ಕೇರಳಂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ್ದು ಖಂಡಿತಾ ಶ್ಲಾಘನೀಯ ಸಾಧನೆ. ಪಿಣರಾಯಿ ವಿಜಯ್ ಸರ್ಕಾರದ ವಿರುದ್ದ ತೊಡೆ ತಟ್ಟಿ ನಿಂತ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಭರ್ಜರಿ ಗೆಲುವಿನ ಮೂಲಕ ಅಧಿಕಾರಕ್ಕೇರಿದೆ. ಎಡಪಕ್ಷಗಳ ನೇತೃತ್ವದಲ್ಲಿ ಪಿಣರಾಯಿ ವಿಜಯನ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವ ಕನಸು ಭಗ್ನಗೊಂಡಿದೆ. ಕಾಂಗ್ರೆಸ್ ಈ ಕಡಲ ತೀರದ ರಾಜ್ಯದಾದ್ಯಂತ ಉತ್ತಮ ಸಾಧನೆ ಮೂಲಕ ಪ್ರಬಲವಾಗಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಕೇರಳಂ ಗಳಿಸಿದ್ದೇ ಕಾಂಗ್ರೆಸ್ ಪಾಲಿಗೆ ಮಹತ್ವದ ಸಾಧನೆಯಾಗಿದೆ. ಹಿಂದೂತ್ವದ ಆಧಾರದಲ್ಲಿ ಕೇರಳಂನಲ್ಲಿ ರಾಜಕೀಯ ಮಾಡಲು ಮುಂದಾದ ಬಿಜೆಪಿ ಈ ಬಾರಿಯೂ ನಿರಾಶಾದಾಯಕ ಫಲಿತಾಂಶವನ್ನು ಪಡೆದಿದೆ. ದೇವಾಲಯಗಳು, ಆರಾಧನೆಗಳು ಹೆಚ್ಚಾಗಿದ್ದರೂ ಕೇರಳಂನಲ್ಲಿ ಹಿಂದೂತ್ವ ರಾಜಕೀಯ ದಾಳವಾಗಿ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬುದು ಸ್ಪಷ್ಟ. ಕಾಂಗ್ರೆಸ್ ಹೊಸ ಭರವಸೆಯೊಂದಿಗೆ, ಆಶಾಭಾವನೆಯೊಂದಿಗೆ ನವಕೇರಳಂ ಸೃಷ್ಟಿಸುವ ಉತ್ಸಾಹದಲ್ಲಿದೆ. ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕರಾಗಿರುವ ಕೆ.ಸಿ. ವೇಣುಗೋಪಾಲ್ ಕೇರಳಂ ಮುಖ್ಮಮಂತ್ರಿ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ವೇಣುಗೋಪಾಲ್ ಮುಖ್ಯಮಂತ್ರಿಯಾದದ್ದೇ ಆದಲ್ಲಿ ಅವರೊಂದಿಗೆ ನಿಕಟವಾಗಿರುವ ಕರ್ನಾಟಕ ಕಾಂಗ್ರೆಸ್ ಮೇಲೂ ಸಾಕಷ್ಟು ಉತ್ತಮ ಪರಿಣಾಮಗಳು ಸಾಧ್ಯವಾಗಲಿದೆ.
ಅಸ್ಸಾಂನಲ್ಲಿ ಪ್ರಗತಿ ಕಾರ್ಯಕ್ಕೆ ಸಂದ ಗೆಲವು
ಪತ್ರಕರ್ತ ಮಿತ್ರರೋರ್ವರು ಹೇಳಿದಂತೆ.. ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ನಿಮಿತ್ತ ಬಂದಿದ್ದ ಅಸ್ಸಾಂ ಮುಖ್ಯಮಂತ್ರಿ ಡಾ.ಹೇಮಂತ್ ಬಿಸ್ವಾ ಶರ್ಮಾ ಮಂಗಳೂರಿನ ಹೋಟೇಲೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಇಬ್ಬರು ಪತ್ರಕರ್ತರು ಅವರ ಭೇಟಿಗೆ ಹೋಗಿದ್ದರು. ಈ ವೇಳೆ ಅಲ್ಲಿ ಕರ್ನಾಟಕದ ಒಬ್ಬರು ಹಾಲಿ ಮತ್ತೊಬ್ಬರು ಮಾಜಿ ಎಂಎಲ್ಸಿ ಗಳಿದ್ದರು. ಮಾತನಾಡುತ್ತಾ ಮಾಜಿ ಎಂಎಲ್ಸಿ ಮಂಗಳೂರಿನ ಚಿತ್ರಣ ಕೊಡುತ್ತಾ ಇಲ್ಲಿ ಹತ್ತು ಮೆಡಿಕಲ್ ಕಾಲೇಜುಗಳಿವೆ ಎಂದು ಹೇಳಿ ಬೀಗಿದರು. ಖಾಸಗಿಯೋ, ಸರಕಾರಿಯೋ ಎಂದು ಹೇಮಂತ್ ಬಿಸ್ವಾಸ್ ಕೇಳಿದರು. ಎಲ್ಲಾ ಖಾಸಗಿ ಎಂದರು ಮಾಜಿ ಎಂಎಲ್ಸಿ. ಸರಕಾರಿ ಒಂದೂ ಇಲ್ಲವೇ ಎಂದು ಮತ್ತೆ ಹೇಮಂತ್ ಬಿಸ್ವಾಸ್ ಪ್ರಶ್ನೆ ಇಲ್ಲ ಎಂದರು ಹಾಲಿ ಎಂಎಲ್ಸಿ. ಆಗ ಮುಖಸಿಂಡರಿಸಿಕೊAಡು ಸುಮ್ಮನಾದ ಹೇಮಂತ್ ಬಿಸ್ವಾಸ್ ಕ್ಷಣಕಾಲ ಸುಮ್ಮನಾದರು. ಆಮೇಲೆ ಹೇಳಿದರು, ಅಸ್ಸಾಂನಲ್ಲಿ ನೋಡಿ, ಒಂದೇ ಒಂದು ಖಾಸಗಿ ಮೆಡಿಕಲ್ ಕಾಲೇಜು ಇಲ್ಲ. ನಮ್ಮಲ್ಲಿ ೨೦೨೬ ರ ಹೊತ್ತಿಗೆ ಕನಿಷ್ಠ ೧೬ ಸರಕಾರಿ ಮೆಡಿಕಲ್ ಕಾಲೇಜು ಇರುತ್ತದೆ. ಇದೊಂದೇ ಘಟನೆ ಸಾಕು. ಅಸ್ಸಾಂ ಎಂಬ ಪುಟ್ಟ ರಾಜ್ಯದಲ್ಲಿನ ಅಭಿವೃದ್ಧಿಯನ್ನು ಬಿಂಬಿಸಲು. ಜನ ಪ್ರಗತಿ ಪರವಾಗಿದ್ದಾರೆ ಎಂದಾದ ಮೇಲೆ ಅಸ್ಸಾಂನಲ್ಲಿ ಬಿಜೆಪಿ ಮೂರನೇ ಬಾರಿಗೆ ಗೆಲವು ಸಾಧಿಸಿದ್ದು ವಿಶೇಷವೇನಲ್ಲ. ಆದರೆ ನಿರೀಕ್ಷೆಗೂ ಮೀರಿದ ಸ್ಥಾನಗಳನ್ನು ಪಡೆದಿರುವುದು ಅಸ್ಸಾಂನಲ್ಲಿ ಅಧಿಕಾರದ ಪರ ಇರುವ ಸುನಾಮಿಗೆ ನಿದರ್ಶನವಷ್ಟೇ!
ಪುಟ್ಟ ರಾಜ್ಯದಲ್ಲಿ ಎನ್‌ಡಿಎ
ಪುದುಚೇರಿ ಎಂಬ ಸಮುದ್ರ ಬದಿಯ ಪುಟ್ಟ ರಾಜ್ಯದಲ್ಲಿ ಮತ್ತೆ ಬಿಜೆಪಿ ಬೆಂಬಲಿತ ಎನ್‌ಡಿಎ ಅಧಿಕಾರ ಪಡೆದುಕೊಂಡಿದೆ. ಕಾಂಗ್ರೆಸ್ ಬೆಂಬಲಿತ ಡಿಎಂ.ಕೆ. ಸೋಲುಕಂಡಿದೆ.
ಕೊನೇ ಹನಿ
ತಮಿಳುನಾಡು ಜಯಲಲಿತಾ ಕಾಲದಿಂದಲೂ ಪುಕ್ಕಟೆ ಯೋಜನೆಗಳಿಗೆ ಹೆಸರುವಾಸಿ. ಮತದಾರರಿಗೆ ಅಕ್ಕಿ, ಮಿಕ್ಸಿ, ಫ್ಯಾನ್, ಸೇರಿದಂತೆ ಹಲವಾರು ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡುವುದರಲ್ಲಿ ತಮಿಳುನಾಡು ಮೀರಿಸಿದ ಮತ್ತೊಂದು ರಾಜ್ಯವಿಲ್ಲ. ಅದನ್ನೇ ಕರ್ನಾಟಕದಲ್ಲಿ ಅನುಕರಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೂಲಕ ಅತ್ಯುತ್ತಮ ಫಲಿತಾಂಶವನ್ನು ಮೂರು ವರ್ಷಗಳ ಹಿಂದೆ ಗಿಟ್ಟಿಸಿಕೊಂಡಿತ್ತು. ಈ ಯೋಜನೆಯನ್ನು ಪ್ರಾರಂಭದಲ್ಲಿ ಅತ್ಯಂತ ಪ್ರಬಲವಾಗಿ ವಿರೋಧಿಸಿದ್ದ ಬಿಜೆಪಿ ಕೂಡ ಈ ಪಂಚರಾಜ್ಯ ಚುನಾವಣೆಯಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿತ್ತು. ಈ ಯೋಜನೆ ಕೂಡ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಕಾರಣವಾಯಿತು ಎಂಬುದು ನಿಸ್ಸಂದೇಹ. ಭಾರತದಲ್ಲಿ ಮುಂಬರುವ ಚುನಾವಣೆಗಳು ಹೇಗಿರಲಿವೆ ಎಂದರೆ, ಉಚಿತ ಕೊಡುಗೆ ಘೋಷಿಸಲು ಎಲ್ಲಾ ಪಕ್ಷಗಳಲ್ಲಿ ಪ್ರಬಲ ಸ್ಪರ್ಧೆ ಕಂಡುಬರಲಿದೆ. ಇಂಥ ಕೊಡುಗೆ ಅಪೇಕ್ಷಿಸುವ ಮತದಾರ ಕೂಡ ಆದಷ್ಟು ಬೇಗ ಚುನಾವಣೆ ಬರಲಿ ಎಂದು ಕಾತರಿಸುತ್ತಾನೆ. ಗೆಲುವಿನ ವಿಚಾರ ಬಂದಾಗ ತಂತ್ರಗಾರಿಕೆಯ ವಿಚಾರ ಬಂದಾಗ, ಭಾರತದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಒಂದೇ. ಉಚಿತ - ಖಚಿತ ಎಂಬುದೇ ಭವಿಷ್ಯದ ಚುನಾವಣಾ ಮಂತ್ರ.!
ಅನಿಲ್ ಹೆಚ್.ಟಿ., ಮಡಿಕೇರಿ