ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು, ಮೇ ೩: ೨೦೦೮ ರ ಚಿನ್ನ ಸ್ವಾಮಿ ಸ್ಟೇಡಿಯಂ ಸರಣಿ ಸ್ಫೋಟದ ಆರೋಪಿ ಹಾಗೂ ದಕ್ಷಿಣ ಭಾರತದ ಲಷ್ಕರ್ ಏ ತೋಯ್ಬಾ ಉಗ್ರ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಆಗಿದ್ದ ತಡಿಯಂಟವಿಡೆ ನಸೀರ್ನನ್ನು ಜೈಲಿನಿಂದ ಬಿಡಿಸಿಕೊಳ್ಳಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್ಗೆ ಎನ್ಐಎ ವಿಶೇಷ ನ್ಯಾಯಾಲಯ ಶನಿವಾರ ೭ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಸುಮಾರು ೧೧ ಆರೋಪಿಗಳು ಸಂಚು ರೂಪಿಸಿದ್ದು ಇವರಿಂದ ಜೀವಂತ ಗ್ರೆನೇಡ್ , ವಾಕಿ ಟಾಕಿ ಮತ್ತು ಬಾಂಬ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ಮುಖ್ಯ ಆರೋಪಿ ಜುನೈದ್ ದುಬೈಗೆ ಪರಾರಿ ಆಗಿದ್ದಾನೆಂದು ಶಂಕಿಸಲಾಗಿದ್ದು ಈತನ ಸುಳಿವಿಗೆ ಐದು ಲಕ್ಷ ರೂಪಾಯಿ ಘೋಷಣೆ ಮಾಡಲಾಗಿದೆ. ಈತನ ತಾಯಿ ಕೂಡ ಪ್ರಕರಣದಲ್ಲಿ ಆರೋಪಿ ಆಗಿದ್ದು ಜೈಲಿನಲ್ಲಿದ್ದಾಳೆ.
ಸಂಚು ರೂಪಿಸಿದ್ದ ಪ್ರಕರಣದ ಒಂಬತ್ತನೇ ಆರೋಪಿ ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್ಗೆ ಎನ್ಐಎ ವಿಶೇಷ ನ್ಯಾಯಾಲಯವು ೭ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಹರಿಯಾಣದಿಂದ ಗ್ರೆನೇಡ್ ತಂದು ಉಗ್ರವಾದಿ ಕೃತ್ಯಕ್ಕೆ ಸಂಚು ರೂಪಿಸಿದ್ದನ್ನು ಆರೋಪಿ ಒಪ್ಪಿಕೊಂಡಿದ್ದ.
ಒಂದು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿಕ್ರಮ್ ಕುಮಾರ್, ಅಲ್ಲಿ ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ. ನಸೀರ್ ಸಂಪರ್ಕಕ್ಕೆ ಬಂದಿದ್ದ. ನಸೀರ್ ನ ಮತಾಂಧತೆಯ ಬೋಧನೆಯಿಂದ ತೀವ್ರ ಪ್ರಭಾವಕ್ಕೆ ಒಳಗಾಗಿದ್ದ ವಿಕ್ರಮ್, ಇಸ್ಲಾಂ ಧರ್ಮಕ್ಕೆ ಮತಾಂತರಗೊAಡು ತನ್ನ ಹೆಸರನ್ನು ಚೋಟಾ ಉಸ್ಮಾನ್ ಎಂದು ಬದಲಾಯಿಸಿಕೊಂಡಿದ್ದ. ಜೈಲಿನಿಂದ ಬಿಡುಗಡೆಯಾದ ನಂತರವೂ ಇವನು ನಸೀರ್ ಹಾಗೂ ಇತರ ಉಗ್ರಗಾಮಿ ಸಂಘಟನೆಗಳ ಸದಸ್ಯರೊಂದಿಗೆ ಸತತ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ. ನಾಸೀರ್ ಹಾಗೂ ಇತರ ಉಗ್ರರನ್ನು ಜೈಲಿನಿಂದ ಬಿಡಿಸಿಕೊಳ್ಳಲು ಆರೋಪಿಗಳು ಸಿನಿಮೀಯ ಮಾದರಿಯ ಸ್ಕೆಚ್ ಹಾಕಿದ್ದರು. ಆರೋಪಿ ವಿಕ್ರಮ್ ಕುಮಾರ್ ನಾಸೀರ್ ಸೂಚನೆಯಂತೆ ಇತರ ಆರೋಪಿಗಳಾದ ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಜೊತೆ ಸೇರಿ ಸ್ಫೋಟಕಗಳನ್ನು ಸಂಗ್ರಹಿಸಲು ಶುರುಮಾಡಿದ್ದ.
ಉಗ್ರರನ್ನು ನ್ಯಾಯಾಲಯದ ವಿಚಾರಣೆಗೆ ಅಥವಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿ, ಗ್ರೆನೇಡ್ ಎಸೆದು ಪೊಲೀಸರನ್ನು ಹತ್ಯೆ ಮಾಡಿ ನಾಸೀರ್ನನ್ನು ಅಪಹರಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಹರಿಯಾಣದ ಅಂಬಾಲಾದಿAದ ಗ್ರೆನೇಡ್ಗಳನ್ನು ತರಿಸಿಕೊಳ್ಳಲಾಗಿತ್ತು. ಕೇವಲ ಗ್ರೆನೇಡ್ ಅಷ್ಟೇ ಅಲ್ಲದೆ, ದಾಳಿಗೆ ಅಗತ್ಯವಾದ ಮಾರಕಾಸ್ತ್ರಗಳು ಮತ್ತು ವಾಹನಗಳ ವ್ಯವಸ್ಥೆಯನ್ನೂ ಈ ಗ್ಯಾಂಗ್ ಮಾಡಿಕೊಂಡಿತ್ತು ಎಂಬ ಆಘಾತಕಾರಿ ವಿಷಯ ಎನ್ಐಎ ತನಿಖೆಯಲ್ಲಿ ಬಯಲಾಗಿತ್ತು.
ಉಗ್ರ ನಸೀರ್ ಕೊಡಗಿನ ಹೊಸತೋಟದಲ್ಲಿ ಶುಂಠಿ ಕೃಷಿಯ ನೆಪದಲ್ಲಿ ಆಶ್ರಯ ಪಡೆದು ವಿಧ್ವಂಸಕ ಕೃತ್ಯ ನಡೆಸಿದ್ದು ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.