ಗೋಣಿಕೊಪ್ಪಲು, ಮೇ.೨ : ಕೊಡಗಿನಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ಇತ್ತೀಚೆಗೆ ಕ್ರೀಡೋತ್ಸವದ ಮೂಲಕ ತಮ್ಮ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಶ್ಲಾಘನೀಯ, ಕ್ರೀಡೆಗೆ ಹೆಸರುವಾಸಿಯಾದ ಕೊಡಗಿಗೆ ಕ್ರೀಡೆಗಾಗಿಯೆ ೩೫ ಕೋಟಿ ಅನುದಾನ ಈಗಾಗಲೇ ಒದಗಿಸಲಾಗಿದೆ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ತಿಳಿಸಿದರು.
ಮಾಯಮುಡಿ ಶಾಲಾ ಮೈದಾನದಲ್ಲಿ ಬಾನಂಡ ಅಮ್ಮಕೊಡವ ಕುಟುಂಬಸ್ಥರು ಆಯೋಜಿಸಿದ್ದ ಕ್ರಿಕೆಟ್ ನಮ್ಮೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಸಣ್ಣ ಸಮುದಾಯಗಳು ತಮ್ಮ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಕ್ರೀಡೆಯ ಮೂಲಕ ವಾರ್ಷಿಕವಾಗಿ ಎಲ್ಲರೂ ಒಂದೆಡೆ ಸೇರುವ ಪ್ರಯತ್ನ ಯಶಸ್ವಿಯಾಗಬೇಕು.
ಕ್ರೀಡೆಯ ಅಭಿವೃದ್ದಿಗಾಗಿ ವೀರಾಜಪೇಟೆ ಸಮೀಪದ ವಿ.ಬಾಡಗ ಗ್ರಾಮದಲ್ಲಿ ಕ್ರೀಡಾ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಕೆಲಸ ಪ್ರಾರಂಭವಾಗಿದೆ. ೩೦ ಕೋಟಿಗೂ ಅಧಿಕ ಅನುದಾನವನ್ನು ಮೊದಲ ಹಂತದಲ್ಲಿ ಬಿಡುಗಡೆ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಮಾಡಲಾಗಿದೆ. ಪೊನ್ನಂಪೇಟೆ ಮೈದಾನಕ್ಕೆ ನೂತನ ಟರ್ಫ್ ಅಳವಡಿಸಲಾಗುವುದು ಕ್ರೀಡಾ ವಸತಿ ಶಾಲೆಯ ನೂತನ ಕಟ್ಟಡವು ನಿರ್ಮಾಣವಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಖಿಲ ಅಮ್ಮಕೊಡವ ಸಮಾಜದ ಕೊಡಗು ಜಿಲ್ಲಾ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸಮಾಜದ ಅಭಿವೃದ್ಧಿಗಾಗಿ ೨೫ ಲಕ್ಷ ಅನುದಾನವನ್ನು ಒದಗಿಸಿದ್ದಾರೆ. ಸಮಾಜದ ಬಳಿ ೨ ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ ಎಂದರು.
ಬಾನಂಡ ಕುಟುಂಬದ ಅಧ್ಯಕ್ಷ ಬಾನಂಡ ಎಸ್. ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮೈಸೂರಿನ ಮುಖ್ಯ ನ್ಯಾಯಾಧೀಶರಾದ ಅಮ್ಮತ್ತಿರ ಶಿಲ್ಪಾ ಗಣೇಶ್, ಮಾಜಿ ಆರ್ಎಂಸಿ ಅಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ, ಕ್ರೀಡಾ ಸಮಿತಿಯ ಅಧ್ಯಕ್ಷ ಬಾನಂಡ ಎ. ಸುನಿತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಬಾನಂಡ ಕುಟುಂಬದಿAದ ಅತಿಥಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಖಿಲ ಅಮ್ಮಕೊಡವ ವಿದ್ಯಾಭಿವೃದ್ದಿ ಸಂಘ, ಅಖಿಲ ಅಮ್ಮಕೊಡವ ಸಮಾಜ ಬೆಂಗಳೂರು, ಶ್ರೀಕೃಷ್ಣ ಅಮ್ಮಕೊಡವ ಸಂಘ ಕೋತೂರು, ಕಾವೇರಿ ಅಮ್ಮಕೊಡವ ಮಹಿಳಾ ಸಂಘ ಕೊಡಗು, ಕಂಗಳತನಾಡ್ ಅಮ್ಮಕೊಡವ ಸಂಘ ಮಾಯಮುಡಿ, ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಕೋತೂರು ಹಾಗೂ ಕಾವೇರಿ ಅಮ್ಮಕೊಡವ ಸಾಂಸ್ಕೃತಿಕ ಸಂಘ ಮಡಿಕೇರಿ, ಇದರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ಅಮ್ಮಕೊಡವ ಸಮಾಜದ ೨೪ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಸಮುದಾಯದವರು ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡು ದುಡಿಕೊಟ್ಟಿನ ಮೂಲಕ ಅತಿಥಿಗಳನ್ನು ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ವೇದಿಕೆಗೆ ಕರೆ ತಂದರು. ಮಾಯಮುಡಿಯ ಶ್ರೀರಾಮ ಮಂದಿರದಲ್ಲಿ ಮುಂಜಾನೆ ಪೂಜೆ ನಡೆಸಿದ ಬಾನಂಡ ಕುಟುಂಬದವರು ನಂತರ ಸಾಂಪ್ರಾದಾಯಿಕ ದುಡಿಕೊಟ್ಟ್ ಸಾಂಪ್ರದಾಯಿಕ ವಾಲಗದೊಂದಿಗೆ ಮಹಿಳೆಯರು ತಳಿಯತಕ್ಕಿ ಬೊಳ್ಚದೊಂದಿಗೆ ಶಾಲಾ ಮೈದಾನಕ್ಕೆ ಪ್ರವೇಶ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಂದ ಉಮ್ಮತ್ತಾಟ್ ಪ್ರದರ್ಶನ ನಡೆಯಿತು.
ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಬ್ಯಾಟಿಂಗ್ ಮಾಡುವ ಮೂಲಕ ಬಾನಂಡ ಕ್ರಿಕೆಟ್ ೨೦೨೬ನ್ನು ಉದ್ಘಾಟಿಸಿದರು. ಇತರ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಚಿನ್ನ ಹಾಗೂ ಬೆಳ್ಳಿ ಲೇಪನದ ನಾಣ್ಯ ಚಿಮ್ಮಿಸುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಲಾಯಿತು.
ದೃತಿ ಗಣೇಶ್, ಜೀವಿತಾ, ಅಂಜಲಿ ಬೇಬಿಶ್ರೀ ಪ್ರಾರ್ಥಿಸಿ, ಬಾನಂಡ ಸೂರಜ್ ಸ್ವಾಗತಿಸಿ, ಬಾನಂಡ ಆಶಾ, ಬಾನಂಡ ಅನಿತಾ, ಬಾನಂಡ ಮಾಲ ನಿರೂಪಿಸಿ ಬಾನಂಡ ಸುನಿತ್ ವಂದಿಸಿದರು.
-ಹೆಚ್.ಕೆ. ಜಗದೀಶ್