ಮಡಿಕೇರಿ,ಮೇ.೨: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರಿಗಾಗಿ ಗೌಡ ಯುವ ವೇದಿಕೆ ವತಿಯಿಂದ ಏರ್ಪಡಿಸಲಾಗಿರುವ ಕುಟುಂಬ- ೨೦೨೬ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದೆ.
ಮಡಿಕೇರಿ ಹೊರ ವಲಯದ ಗಾಳಿಬೀಡು ಸರ್ಕಾರಿ ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜದ ಹಿರಿಯರಾದ ಕೋಳುಮುಡಿಯನ ಅನಂತ್ ಕುಮಾರ್ ಮಾತನಾಡಿ; ಗೌಡ ಸಮುದಾಯಗಳ ನಡುವೆ ನಡೆಯುವ ವಿವಿಧ ಕ್ರೀಡಾಕೂಟಕ್ಕೆ ಗಾಳಿಬೀಡಿನಿಂದ ಚಾಲನೆ ನೀಡಿರುವದು ಸಂತೋಷದ ವಿಚಾರ. ಗೌಡ ಯುವ ವೇದಿಕೆ ಸಂಘಟನೆ ಆರಂಭವಾಗಿರುವುದು ನಮ್ಮ ಸಾಮಾಜದ ಬಾಂಧವರನ್ನ ಒಗ್ಗೂಡಿಸುವ ನಿಟ್ಟಿನಲ್ಲಿ, ಸಣ್ಣದಾಗಿ ಆರಂಭವಾದ ಕೊಡಗು ಗೌಡ ಯುವ ವೇದಿಕೆ ಇದೀಗ ಹೆಮ್ಮರವಾಗಿ ಬೆಳೆದಿದೆ. ಹಿರಿಯರು ಹುಟ್ಟುಹಾಕಿದ ಯುವ ವೇದಿಕೆಯನ್ನ ಇಂದಿನ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಯುವಕರು ಮುಂದುವರಿಸಿಕೊAಡು ಹೋಗಬೇಕು. ಹಲವಾರು ಕ್ರೀಡಾಕೂಟ ಆಯೋಜಿಸುವ ಮೂಲಕ ಸಮುದಾಯ ಬಾಂಧವರಲ್ಲಿ ಸಾಮರಸ್ಯ ಬೆಸೆಯುವಲ್ಲೂ ಉತ್ತಮ ವೇದಿಕೆಯನ್ನ ಹಾಕಿಕೊಟ್ಟಿದೆ. ವೇದಿಕೆ ಮತ್ತಷ್ಟು ಕಾರ್ಯಕ್ರಮಗಳನ್ನ ಮಾಡುವ ಮೂಲಕ ಮತ್ತಷ್ಟು ಯಶಸ್ಸು ಕಾಣಲೆಂದು ಹಾರೈಸಿದರು.
ಮ್ಯಾರಥಾನ್ ಓಟಗಾರರಾದ ಹೊಸೋಕ್ಲು ಚಿಣ್ಣಪ್ಪ ಹಾಗೂ ಕೋಚನ ತೇಜಸ್ ಮಾತನಾಡಿ; ಗ್ರಾಮೀಣ ಭಾಗದಲ್ಲಿ ಗುಡ್ಡಗಾಡು ಓಟದ ಮೂಲಕ ಉದ್ಘಾಟಿಸಿರುವುದು ಸಂತೋಷದ ವಿಚಾರ. ಹಳ್ಳಿಗಾಡಿನ ಗ್ರಾಮಿಣ ಪ್ರತಿಭೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಬಹಳ ಉಪಯುಕ್ತ. ಗ್ರಾಮೀಣ ಮಟ್ಟದಿಂದಲೇ ಕ್ರೀಟಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಒಲಂಪಿಕ್ನಲ್ಲಿ ಪದಕ ಗೆಲ್ಲುವ ಆಲೋಚನೆ ಹೊಂದಬೇಕು. ಹೆಚ್ಚಾಗಿ ಗ್ರಾಮೀಣ ಪ್ರತಿಭೆಗಳು ಮುಂದೆ ಬರುವಂತೆ ಕ್ರೀಡಾ ಪಟುಗಳಿಗೆ ಕರೆನೀಡಿದರು. ಸೋಲು ಗೆಲುವನ್ನ ಚಿಂತಿಸದೆ ಮುಂದೆ ಬನ್ನಿ, ಆಗ ಒಂದಲ್ಲ ಒಂದು ದಿನ ಯಶಸ್ಸು ನಿಮ್ಮದಾಗಲಿದೆ ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಮಾತನಾಡಿ; ಸುಂದರ ಪರಿಸರದ ನಡುವೆ ಕ್ರಾರ್ಯಕ್ರಮ ಆಯೋಜನೆ ಸಂತೋಷದ ವಿಚಾರ.
ಯುವ ವೇದಿಕೆ ಹಿಂದಿನಿAದಲೂ ಏಳು ಬೀಳುಗಳ ನಡುವೆ ಕ್ರೀಡಾಕೂಟ ಆಯೋಜನೆ ಮಾಡಿಕೊಂಡು ಬರುತ್ತಿದೆ. ಸಂಕಷ್ಟದ ಸಮಯದಲ್ಲೂ ಕಾರ್ಯಕ್ರಮ ಆಯೋಜನೆ ಮಾಡುವುದು ದೊಡ್ಡ ವಿಚಾರ. ಎಲ್ಲವನ್ನ ಸರಿದೂಗಿಸಿ ಸಮುದಾಯ ಬಾಂಧವರನ್ನ ಒಗ್ಗೂಡಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ಮಾಡುವ ಮೂಲಕ ಸಮುದಾಯವನ್ನ ಒಗ್ಗೂಡಿಸುವ ಕೆಲಸವನ್ನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೌಡ ಯುವ ವೇದಿಕೆಯ ಅಧ್ಯಕ್ಷ ಬಾಳಾಡಿ ಮನೋಜ್ ಮಾತನಾಡಿ ೧೬ ದಿನದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದೆ. ಗಾಳಿಬೀಡಿನಿಂದ ಆರಂಭವಾದ ಕಾರ್ಯಕ್ರಮ ನಂತರ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಗೌಡ ಕುಟುಂಬಗಳ ನಡುವೆ ಕ್ರಿಕೆಟ್ ಪಂದ್ಯಾವಳಿಯೊAದಿಗೆ ಮುಂದುವರಿಯಲಿದೆ. ಜೊತೆಗೆ ರಿಂಕ್ ಹಾಕಿ, ಮಿಸ್ಟರ್ ಗೌಡ ಗೌಡತಿ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದು ಗೌಡ ಸಮುದಾಯದವರು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗೌಡ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ, ಉಪಾಧ್ಯಕ್ಷ ಎಡಿಕೇರಿ ಪ್ರಸನ್ನ, ಪ್ರಮುಖರಾದ ನಿವೃತ ಡಿವೈಎಸ್ಪಿ ಕೇಶವಾನಂದ, ಪೈಕೇರ ಮನೋಹರ್ ಮಾದಪ್ಪ, ಕೊಂಬನ ಪ್ರವೀಣ್, ಪೊನ್ನಚನ ಮಧು, ಹಾಗೂ ಗೌಡ ಯುವ ವೇದಿಕೆ ಪದಾಧಿಕಾರಿಗಳು, ಸದಸ್ಯರು ಹಾಗೂ ಗಾಳಿಬೀಡು ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮವನ್ನು ಕಟ್ಟೆಮನೆ ಸೋನಾಜಿತ್ ಮತ್ತು ವಿನೋದ್ ಮೂಡಗದ್ದೆ ನಿರೂಪಿಸಿದರು. ದೇರಳ ನವೀನ್ ವಂದಿಸಿದರು.
ಸ್ಪರ್ಧೆಗಳಿಗೆ ಚಾಲನೆ
ಸಭಾ ಕಾರ್ಯಕ್ರಮಕ್ಕೂ ಮೊದಲು ವಿವಿಧ ವಿಭಾಗದಲ್ಲಿ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಿತು. ಅಂತರರಾಷ್ಟ್ರೀಯ ಮ್ಯಾರಥಾನ್ ಓಟಗಾರರಾದ ಹೊಸೋಕ್ಲು ಚಿಣ್ಣಪ್ಪ ಹಾಗೂ ಕೋಚನ ತೇಜಸ್ ಓಟಕ್ಕೆ ಚಾಲನೆ ನೀಡಿದರು.
ಮುಕ್ತ ಪುರುಷರ ವಿಭಾಗದಲ್ಲಿ ಉಳಿಯಡ್ಕ ನಿತಿನ್ ಪ್ರಥಮ, ಅಚಿಜೇರೀರ ಟಿಶನ್ ದ್ವಿತೀಯ, ಕೆದಂಬಾಡಿ ಕೃಷ್ಣ ತೃತೀಯ, ಪೊನ್ನೇಟಿ ದಿಲನ್ ನಾಲ್ಕನೇ ಹಾಗೂ ಸಿರಗಜೆ ಶ್ರೀಜಿತ್ ಐದನೇ ಬಹುಮಾನ ಪಡೆದುಕೊಂಡರು. ೧೬ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸೂದನ ಗಾನಸ್ವಿ ಡಾಲಿ ಪ್ರಥಮ, ಕೊಳಂಬೆ ಸಾಗ್ನಿಕಾ ದ್ವಿತೀಯ, ದಬ್ಬಡ್ಕ ಲಕ್ಷ ತೃತೀಯ ಸ್ಥಾನ ಪಡೆದುಕೊಂಡರು. ಬಾಲಕರ ವಿಭಾಗದಲ್ಲಿ ಸೂದನ ಗವಿನ್ ಡಾಲಿ ಪ್ರಥಮ, ಚೆಟ್ಟಿಮಾಡ ಶ್ರೀಶಾಮತ್ ದ್ವಿತೀಯ, ಕೋಳುಮುಡಿಯನ ಯಶ್ವಿನ್ ತೃತೀಯ ಸ್ಥಾನ ಪಡೆದರು. ಮುಕ್ತ ಮಹಿಳೆಯರ ವಿಭಾಗದಲ್ಲಿ ಕಟ್ಟೆಮನೆ ಪ್ರಕೃತಿ ಸೋಮಯ್ಯ ಪ್ರಥಮ, ಕುಂಬಗೌಡನ ಭವಿಷ್ಯ ಭರತ್ ದ್ವಿತೀಯ, ಕುಂಬಗೌಡನ ನೀತಿ ತೃತೀಯ ಸ್ಥಾನ ಪಡೆದುಕೊಂಡರು.
ಸಭಾಕಾರ್ಯಕ್ರಮದ ನಂತರ ೦.೨೨ ರೈಫಲ್, ೧೨ ಬೋರ್ ಮತ್ತು ಏರ್ ಗನ್ ವಿಭಾಗದಲ್ಲಿ ಶೂಟಿಂಗ್ ಸ್ಪರ್ಧೆ ನಡೆಯಿತು. ೦.೨೨ ವಿಭಾಗದ ಸ್ಪರ್ಧೆಯನ್ನು ಕೊಡಗು ಗೌಡ ಯುವ ವೇದಿಕೆ ಮಾಜಿ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ೧೨ ಬೋರ್ ವಿಭಾಗದ ಸ್ಪರ್ಧೆಯನ್ನು ಯುವವೇದಿಕೆಯ ಗೌರವ ಅಧ್ಯಕ್ಷ ಪೊನ್ನಚನ ಮಧು ಮತ್ತು ಏರ್ ಗನ್ ಶೂಟಿಂಗ್ ಸ್ಪರ್ಧೆಯನ್ನು ಗೌರವ ಸಲಹೆಗಾರ ಕೊಂಬನ ಪ್ರವೀಣ್ ಶೂಟ್ ಮಾಡುವ ಮೂಲಕ ಉದ್ಘಾಟಿಸಿದರು.
೦.೨೨ ರೈಫಲ್ ವಿಭಾಗದಲ್ಲಿ ಜಗತ್ ಬೆಳ್ಳಿಯನ ಪ್ರಥಮ, ಸಮರ್ಥ್ ಶಂಕರನ ದ್ವಿತೀಯ, ನಿತಿನ್ ಕಾವೇರಿಮನೆ ತೃತೀಯ, ೧೨ ಬೋರ್ ವಿಭಾಗದಲ್ಲಿ ರಾಜೇಶ್ ಕಟ್ಟೆಮನೆ ಪ್ರಥಮ, ರಾಹುಲ್ ಅರಂಬೂರು ದ್ವಿತೀಯ, ಮನೋಜ್ ಪೊಕ್ಕುಳಂಡ್ರ ತೃತೀಯ, ಏರ್ ಗನ್ ವಿಭಾಗದಲ್ಲಿ ಚೇತನ್ ದೇವಾಯಿರ ಪ್ರಥಮ, ಜಯ ಬೆಳ್ಳಿಯನ ದ್ವಿತೀಯ, ಯಶ್ವಂತ್ ಬಾರನ ತೃತೀಯ ಬಹುಮಾನ ಪಡೆದುಕೊಂಡರು.